Home ಬೆಂಗಳೂರು ಪ್ರವಾಸೋದ್ಯಮ ಇಲಾಖೆಯಲ್ಲಿ ₹200 ಕೋಟಿ ಅಕ್ರಮ: ಸರ್ಕಾರದ ಕಿವಿ ಹಿಂಡಿದ ಸಿಎಜಿ ವರದಿ!

ಪ್ರವಾಸೋದ್ಯಮ ಇಲಾಖೆಯಲ್ಲಿ ₹200 ಕೋಟಿ ಅಕ್ರಮ: ಸರ್ಕಾರದ ಕಿವಿ ಹಿಂಡಿದ ಸಿಎಜಿ ವರದಿ!

0

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಇಲಾಖೆಯಲ್ಲಿ 2020 ರಿಂದ 2024ರ ನಡುವಿನ ಅವಧಿಯಲ್ಲಿ ಕನಿಷ್ಠ 200 ಕೋಟಿ ರೂಪಾಯಿಗಳ ಭಾರಿ ಅಕ್ರಮಗಳು ನಡೆದಿರುವುದನ್ನು ಭಾರತದ ಮಹಾಲೇಖಪಾಲರ (CAG) ವರದಿ ಪತ್ತೆಹಚ್ಚಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣದ ದುರುಪಯೋಗ, ಧನಸಹಾಯದ ಮಾರ್ಗಬದಲಾವಣೆ (Diversion of funds) ಹಾಗೂ ಮಂಜೂರಾಗಿದ್ದ ಯಾತ್ರಿ ನಿವಾಸದ ಬದಲಿಗೆ ಮಸೀದಿಯ ಪ್ರಾರ್ಥನಾ ಮಂದಿರ ನಿರ್ಮಿಸಿರುವುದು ಸೇರಿದಂತೆ ಹಲವು ಗಂಭೀರ ಲೋಪಗಳನ್ನು ಸಿಎಜಿ ಎತ್ತಿ ತೋರಿಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸರ್ಕಾರಗಳ ಅವಧಿಯನ್ನು ಒಳಗೊಂಡಿರುವ ಈ ಆಡಿಟ್ ವರದಿಯಲ್ಲಿ, ಇಲಾಖೆಯು “ವ್ಯವಸ್ಥಿತ ದೋಷಗಳು”, “ಅಕ್ರಮ ಹಣಕಾಸು ನಿರ್ವಹಣೆ” ಮತ್ತು “ಸಾರ್ವಜನಿಕ ಹಣದ ದುರುಪಯೋಗ” ಎಸಗಿದೆ ಎಂದು ಕಟುವಾಗಿ ಟೀಕಿಸಲಾಗಿದೆ. ಸದ್ಯ ಈ ಕರಡು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇಲಾಖೆಯಿಂದ ಸ್ಪಷ್ಟನೆ ಕೋರಲಾಗಿದೆ.

ವರದಿಯಲ್ಲಿ ಉಲ್ಲೇಖಿಸಲಾಗಿರುವ ಪ್ರಮುಖ ಅಕ್ರಮಗಳು:

  • ರಸ್ತೆ ಕಾಮಗಾರಿಗಳಿಗೆ ₹88.2 ಕೋಟಿ ವರ್ಗಾವಣೆ: ಪ್ರವಾಸೋದ್ಯಮ ಚಟುವಟಿಕೆಗಳಿಗೆ ನೆರವಾಗಬೇಕಿದ್ದ ₹88.2 ಕೋಟಿ ಹಣವನ್ನು ಲೋಕೋಪಯೋಗಿ ಇಲಾಖೆಯ (PWD) ಸಾಮಾನ್ಯ ರಸ್ತೆ ಕಾಮಗಾರಿಗಳಿಗೆ ನಿಯಮಬಾಹಿರವಾಗಿ ಬಳಸಲಾಗಿದೆ. ವಿಜಯನಗರ, ಚಿಕ್ಕಮಗಳೂರು, ಮಂಡ್ಯ, ಬೆಳಗಾವಿ, ಮೈಸೂರು ಮತ್ತು ಉಡುಪಿ ಜಿಲ್ಲೆಗಳ 19 ರಸ್ತೆ ಯೋಜನೆಗಳಲ್ಲಿ 15 ಕಾಮಗಾರಿಗಳು ಪ್ರವಾಸೋದ್ಯಮ ಮೂಲಸೌಕರ್ಯ ಮಾರ್ಗಸೂಚಿಗಳಿಗೆ ತದ್ವಿರುದ್ಧವಾಗಿವೆ. ಇವು ಪ್ರವಾಸೋದ್ಯಮಕ್ಕೆ ಹೇಗೆ ಪೂರಕವಾಗಿವೆ ಎಂಬ ಯಾವುದೇ ಪುರಾವೆಗಳಿಲ್ಲ ಎಂದು ಸಿಎಜಿ ಹೇಳಿದೆ.
  • ಯಾತ್ರಿ ನಿವಾಸದ ಜಾಗದಲ್ಲಿ ಪ್ರಾರ್ಥನಾ ಮಂದಿರ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಬಸವನದುರ್ಗದಲ್ಲಿರುವ ಮೌಲಾಲಿ ಮಸೀದಿ ಬಳಿ ಯಾತ್ರಿ ನಿವಾಸ ನಿರ್ಮಿಸಲು ಸರ್ಕಾರ ₹25 ಲಕ್ಷ ಮಂಜೂರು ಮಾಡಿತ್ತು. ಫೆಬ್ರವರಿ 2023 ರಲ್ಲಿ ಆರಂಭವಾದ ಈ ಕಾಮಗಾರಿ ಇಲಾಖೆಯ ದಾಖಲೆಗಳ ಪ್ರಕಾರ ಪೂರ್ಣಗೊಂಡಿದೆ ಎಂದು ತೋರಿಸಲಾಗಿದೆ. ಆದರೆ, ಸಿಎಜಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, 22 ತಿಂಗಳು ಕಳೆದರೂ ಕಟ್ಟಡ ಅಪೂರ್ಣವಾಗಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಅಲ್ಲಿ ಯಾತ್ರಿ ನಿವಾಸದ ಬದಲಿಗೆ ಮುಕ್ತ ಪ್ರಾರ್ಥನಾ ಮಂದಿರವನ್ನು (Open prayer space) ನಿರ್ಮಿಸಿರುವುದು ಪತ್ತೆಯಾಗಿದೆ.
  • ಹೋಟೆಲ್ ಯೋಜನೆಗಳಲ್ಲಿ ₹83.97 ಕೋಟಿ ಯಡವಟ್ಟು: ಬಾದಾಮಿ, ಬೇಲೂರು, ವಿಜಯಪುರ ಮತ್ತು ಹಂಪಿಯಲ್ಲಿ ಕೈಗೆತ್ತಿಕೊಳ್ಳಲಾದ 3-ಸ್ಟಾರ್ ಹೋಟೆಲ್ ಯೋಜನೆಗಳಲ್ಲಿ ಕಳಪೆ ಯೋಜನೆ, ಅನಧಿಕೃತ ಬದಲಾವಣೆ ಮತ್ತು ವಿಳಂಬದಿಂದಾಗಿ ₹83.97 ಕೋಟಿ ತೆರಿಗೆದಾರರ ಹಣ ವ್ಯರ್ಥವಾಗಿದೆ. ಪದೇ ಪದೇ ಏಜೆನ್ಸಿಗಳ ಬದಲಾವಣೆ ಮತ್ತು ವರದಿಗಳ (DPR) ಮೇಲಿನ ಅನಗತ್ಯ ವೆಚ್ಚದಿಂದಾಗಿ 6 ವರ್ಷ ಕಳೆದರೂ ಯಾವುದೇ ಉದ್ದೇಶಿತ ಗುರಿ ಸಾಕಾರಗೊಂಡಿಲ್ಲ.
  • ಗಾಳಿಯಲ್ಲಿ ತೇಲಿದ ₹8.37 ಕೋಟಿಯ ಮಾಹಿತಿ ಫಲಕಗಳು: ಪ್ರಮುಖ ಪ್ರವಾಸಿ ತಾಣಗಳಲ್ಲಿ 164 ಮಾಹಿತಿ ಫಲಕಗಳನ್ನು (Hoardings) ಅಳವಡಿಸಲು ಗುತ್ತಿಗೆದಾರರೊಬ್ಬರಿಗೆ ₹8.37 ಕೋಟಿ ಪಾವತಿಸಲಾಗಿದೆ. ಆದರೆ, ಇಲಾಖೆಯ ದಾಖಲೆಗಳಲ್ಲಿ ಕೇವಲ 30 ಫಲಕಗಳ ಮಾಹಿತಿ ಮಾತ್ರ ಇದ್ದು, ಉಳಿದ 134 ಫಲಕಗಳನ್ನು ಅಳವಡಿಸಿರುವ ಬಗ್ಗೆ ಯಾವುದೇ ದಾಖಲೆಗಳು ಅಥವಾ ಮೂರನೇ ವ್ಯಕ್ತಿಯ ತಪಾಸಣಾ ವರದಿಗಳು ಲಭ್ಯವಿಲ್ಲ!
  • ಇತರ ಲೋಪಗಳು: ಜೋಗ ಜಲಪಾತದ ಪ್ರವಾಸೋದ್ಯಮ ಯೋಜನೆಗಾಗಿ ಕಳಪೆ ಗುಣಮಟ್ಟದ ಡಿಪಿಆರ್ (DPR) ಸಿದ್ಧಪಡಿಸಲು ₹6.81 ಕೋಟಿ ವ್ಯರ್ಥ ಮಾಡಲಾಗಿದೆ. ಇದರೊಂದಿಗೆ ಮೈಸೂರಿನ ಚುಂಚನಕಟ್ಟೆ ಜಲಪಾತ ಅಭಿವೃದ್ಧಿ ಕಾಮಗಾರಿಗಳಲ್ಲೂ ₹8.25 ಕೋಟಿ ಮೊತ್ತದ ವ್ಯತ್ಯಾಸಗಳು ಕಂಡುಬಂದಿವೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ.

You cannot copy content of this page

Exit mobile version