ನವದೆಹಲಿ : ಸೆಪ್ಟೆಂಬರ್ ತಿಂಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕಿಂಗ್ ಸೇವೆಗಳಲ್ಲಿ (Banking Service) ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸಂಘಟನೆಯು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್‌ನಲ್ಲಿ (September) ಒಟ್ಟು ನಾಲ್ಕು ದಿನಗಳ ದೇಶವ್ಯಾಪಿ (Big News) ಬ್ಯಾಂಕ್ ಮುಷ್ಕರಕ್ಕೆ (Bank Strike) ಕರೆ ನೀಡಿದೆ. 5 ದಿನಗಳ ಕೆಲಸದ ವಾರ ವ್ಯವಸ್ಥೆ ಜಾರಿ ಮತ್ತು ಸರ್ಕಾರದ ನೂತನ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ (PLI) ಯೋಜನೆಯನ್ನು ಹಿಂಪಡೆಯುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
4 ದಿನ ಮುಷ್ಕರ ಪ್ಲ್ಯಾನ್ ಮಾಡಿರುವ ಸಂಘಟನೆ
ಆಗಸ್ಟ್ 23 ರಂದು ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ, ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟವಾದ UFBU ತನ್ನ ಹೋರಾಟದ ರೂಪುರೇಷೆಯನ್ನು ಪ್ರಕಟಿಸಿದೆ. ಇದರ ಪ್ರಕಾರ, ಸೆಪ್ಟೆಂಬರ್ 11 ರಂದು ಮೊದಲ ಹಂತದ ಒಂದು ದಿನದ ದೇಶವ್ಯಾಪಿ ಮುಷ್ಕರ ನಡೆಯಲಿದೆ. ತದನಂತರ ಸೆಪ್ಟೆಂಬರ್ 28, 29 ಮತ್ತು 30 ರಂದು ಸತತ ಮೂರು ದಿನಗಳ ಕಾಲ ಎರಡನೇ ಹಂತದ ಮುಷ್ಕರ ಆಯೋಜಿಸಲಾಗಿದೆ. ಒಂದು ವೇಳೆ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಅಕ್ಟೋಬರ್ 26 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಯೂನಿಯನ್‌ಗಳು ಎಚ್ಚರಿಸಿವೆ.
ಮುಷ್ಕರಕ್ಕೂ ಮುನ್ನವೇ ಆಗಸ್ಟ್ 24 ರಿಂದಲೇ ಬ್ಯಾಂಕ್ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವುದು, ಕಟ್ಟುನಿಟ್ಟಾಗಿ ನಿಗದಿತ ಕೆಲಸದ ವೇಳಾಪಟ್ಟಿಯನ್ನು ಮಾತ್ರ ಪಾಲಿಸುವುದು ಮತ್ತು ಅಧಿಕೃತ ವಾಟ್ಸಾಪ್ ಗ್ರೂಪ್‌ಗಳಿಂದ ಹೊರಬರುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಲಿದ್ದಾರೆ.
ಬ್ಯಾಂಕ್ ನೌಕರರ ಬೇಡಿಕೆ ಏನು?
ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆ ಎಂದರೆ ವಾರಕ್ಕೆ 5 ದಿನಗಳ ಕೆಲಸದ ವ್ಯವಸ್ಥೆ. ಈ ಬಗ್ಗೆ ಭಾರತೀಯ ಬ್ಯಾಂಕ್‌ಗಳ ಸಂಘ (IBA) ಮತ್ತು ಯೂನಿಯನ್‌ಗಳ ನಡುವೆ ಮಾರ್ಚ್ 2024 ರಲ್ಲೇ ಒಪ್ಪಂದವಾಗಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ 40 ನಿಮಿಷ ಹೆಚ್ಚುವರಿ ಕೆಲಸ ಮಾಡಲು ನೌಕರರು ಸಮ್ಮತಿಸಿದ್ದರು. ಆದರೆ, ಈ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿ ಎರಡು ವರ್ಷಗಳೇ ಕಳೆದರೂ ಇನ್ನು ಅನುಮೋದನೆ ಸಿಕ್ಕಿಲ್ಲ ಎಂದು ಯೂನಿಯನ್‌ಗಳು ಆರೋಪಿಸಿವೆ.
ಮತ್ತೊಂದೆಡೆ, ಕೇಂದ್ರ ಸರ್ಕಾರದ ಹೊಸ PLI ಯೋಜನೆ ತೀವ್ರ ತಾರತಮ್ಯದಿಂದ ಕೂಡಿದೆ ಎಂಬುದು ನೌಕರರ ಮತ್ತೊಂದು ದೂರು. ಹಿರಿಯ ಅಧಿಕಾರಿಗಳಿಗೆ (Scale IV ಮತ್ತು ಅದಕ್ಕಿಂತ ಮೇಲ್ಪಟ್ಟವರು) ಅವರ ವೈಯಕ್ತಿಕ ಕಾರ್ಯಕ್ಷಮತೆ ಆಧರಿಸಿ 365 ದಿನಗಳ ಮೂಲ ವೇತನದವರೆಗೆ ಪ್ರೋತ್ಸಾಹಧನ ಸಿಗಲಿದ್ದು, ಶೇಕಡಾ 95 ರಷ್ಟಿರುವ ಉಳಿದ ಕೆಳಹಂತದ ಸಿಬ್ಬಂದಿಗೆ ಗರಿಷ್ಠ 15 ದಿನಗಳ ಪ್ರೋತ್ಸಾಹಧನ ಮಾತ್ರ ಸಿಗಲಿದೆ. ಇಡೀ ಬ್ಯಾಂಕಿನ ಒಟ್ಟಾರೆ ಸಾಧನೆ ಆಧರಿಸಿ ಎಲ್ಲರಿಗೂ ಸಮಾನವಾಗಿ ನೀಡುತ್ತಿದ್ದ ಹಳೆಯ ವ್ಯವಸ್ಥೆಯನ್ನು ಕೈಬಿಟ್ಟು, ಏಕಪಕ್ಷೀಯವಾಗಿ ಹೊಸ ನಿಯಮ ಜಾರಿಗೆ ತರುತ್ತಿರುವುದನ್ನು ನೌಕರರು ಖಂಡಿಸಿದ್ದಾರೆ.
ಇವುಗಳ ಜೊತೆಗೆ ಹಳೆಯ ಪಿಂಚಣಿ ಯೋಜನೆಗೆ (OPS) ಮರಳಲು ಅವಕಾಶ ನೀಡುವುದು, ಪಿಂಚಣಿ ಪರಿಷ್ಕರಣೆ ಮತ್ತು ತುಟ್ಟಿಭತ್ಯೆ (DA) ಸೂತ್ರದಲ್ಲಿ ಸಮಾನತೆ ತರುವುದು ಸೇರಿದಂತೆ ಹಲವು ಬಾಕಿ ಬೇಡಿಕೆಗಳನ್ನು ತಕ್ಷಣವೇ ಇತ್ಯರ್ಥಪಡಿಸಬೇಕು ಎಂದು UFBU ಒತ್ತಾಯಿಸಿದೆ. ಸೆಪ್ಟೆಂಬರ್‌ನಲ್ಲಿ ನಾಲ್ಕು ದಿನಗಳ ಮುಷ್ಕರ ಘೋಷಣೆಯಾಗಿರುವುದರಿಂದ ಬ್ಯಾಂಕ್ ಗ್ರಾಹಕರು ತಮ್ಮ ಹಣಕಾಸಿನ ವ್ಯವಹಾರಗಳನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳುವುದು ಒಳಿತು.
