ಕುಂದಾಪುರ: ದೇಶ ಮತ್ತು ರಾಜ್ಯದ ಹಲವೆಡೆ ನಡೆಯುತ್ತಿರುವ ಮಹಿಳೆಯರು ಮತ್ತು ಶೋಷಿತ ಜನರ ಮೇಲಿನ ದೌರ್ಜನ್ಯವನ್ನು ವಿರೋಧಿಸುವ ನಿಟ್ಟಿನಲ್ಲಿ ಕುಂದಾಪುರದ ಹಲವು ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಅಕ್ಟೋಬರ್ 1ನೇ ತಾರೀಖಿನಂದು ಸಂಜೆ 6:30ಕ್ಕೆ ಮೌನ ಮೆರವಣಿಗೆಯನ್ನು ಹಮ್ಮಿಕೊಂಡಿವೆ.
ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯು ಸಾರ್ವಜನಿಕರಿಗೆ ಭಾಗವಹಿಸುವಂತೆ ಆಹ್ವಾನವನ್ನು ನೀಡಿದ್ದು, ಅಂದು ಪ್ರಜ್ಞಾವಂತ ನಾಗರಿಕರು ಜೊತೆಗಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡಿರುತ್ತಾರೆ.
ಸಮಿತಿಯ ಪ್ರಕಟಣಾ ಹೇಳಿಕೆ ಹೀಗಿದೆ:
ಮೋಂಬತ್ತಿಯ ಬೆಳಕಿನಲ್ಲಿ ಆತ್ಮಸಾಕ್ಷಿಯನ್ನು ಶೋಧಿಸಿಕೊಳ್ಳೋಣ!
ದೇಶಪ್ರೇಮಿ ಬಂಧುಗಳೆ,
ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿವೆ. ದಲಿತ ಮಹಿಳೆಯರ ಮೇಲಿನ ಪ್ರತಿವರ್ಷ ವರದಿಯಾಗುವ ಅತ್ಯಾಚಾರ ಪ್ರಕರಣಗಳು ಹತ್ತು ವರ್ಷಗಳ ಹಿಂದಿಗಿಂತ ಈಗ ನಲವತ್ತೈದು ಶೇಕಡಾದಷ್ಟು ಹೆಚ್ಚಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯ ಅಂಕಿಸಂಖ್ಯೆಗಳು ತಿಳಿಸುತ್ತವೆ. ಅಸ್ಪ್ರಶ್ಯತೆ, ಜಾತಿ ನಿಂದನೆಯ ಪ್ರಕರಣಗಳೂ ಹೆಚ್ಚುತ್ತಿವೆ. ತನ್ನ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ ಉತ್ತರ ಪ್ರದೇಶದ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಹೊಡೆದು ಕೊಂದಿದ್ದಾನೆ. ದೇವರ ಗುಜ್ಜು ಕೋಲನ್ನು ಎತ್ತಿದ್ದಕ್ಕಾಗಿ ಕರ್ನಾಟಕದಲ್ಲಿ ದಲಿತ ಹುಡುಗನೊಬ್ಬನನ್ನು ತಳಿಸಿ ಆ ಕುಟುಂಬಕ್ಕೆ ದಂಡ ವಿಧಿಸಿದ ಘಟನೆ ನಡೆದಿದೆ. ನಿತ್ಯವೂ ಇಂತಹ ನೂರಾರು ಘಟನೆಗಳು ನಡೆಯುತ್ತವೆ. ಎಲ್ಲವೂ ವರದಿಯಾಗುವುದಿಲ್ಲ. ಜಾತಿ- ಮತಗಳ ನಡುವೆ ಅಪನಂಬಿಕೆ ಉಂಟಾಗುವಂತಹ ದ್ವೇಷದ ವಾತಾವರಣವು ಉಂಟಾಗಿದೆ. ಸಹಬಾಳ್ವೆಯ ಭಾರತವನ್ನೀಗ ಮರುಕಟ್ಟಬೇಕಿದೆ. ಅಂತಹ ದೌಡೇನಿಲ್ಲ. ನಿಧಾನವಾಗಿ ಆದರೆ, ನಿಖರವಾಗಿ ನೆಮ್ಮದಿಯ ನಾಡನ್ನು ಕಟ್ಟುವ ಗುರಿ ತಲುಪುವುದಕ್ಕಾಗಿ, ನಾವು ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಅಸಮಾನತೆ, ಅಸ್ಪ್ರಶ್ಯತೆ, ಅಸಹಿಷ್ಣುತೆ, ಅತ್ಯಾಚಾರಗಳು ನಮ್ಮನ್ನು ತಲೆತಗ್ಗಿಸುವಂತೆ ಮಾಡಿವೆ ಎಂಬುದನ್ನು ಬಹಿರಂಗವಾಗಿ ಹೇಳಿಕೊಳ್ಳಬೇಕಾಗಿದೆ.
ಈ ದೇಶದ ಜನರು ಸಂವಿಧಾನದ ಪೀಠಿಕೆಯಲ್ಲಿ ನೀಡಿರುವ ವಾಗ್ದಾನದಂತೆ ಸಮಾನತೆಯ, ಶೋಷಣೆರಹಿತ ಸಮಾಜವನ್ನು ಕಟ್ಟಲು ನಾವು ಕಟಿಬದ್ಧರಾಗಬೇಕಿದೆ. ಭ್ರಾತೃತ್ವದ ಭಾರತವನ್ನು ಹಂಬಲಿಸುವ ಎಲ್ಲರೂ ಶನಿವಾರ, ಅಕ್ಟೋಬರ್ 1 ರಂದು ಸಂಜೆ 6.30 ಕ್ಕೆ ಮೋಂಬತ್ತಿ ಹಿಡಿದು ಮೌನ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಾಗಿ ಕೋರಿಕೆ.
ಸ್ಥಳ: ಶಾಸ್ತ್ರಿ ವೃತ್ತದಿಂದ ಪಾರಿಜಾತ ಸರ್ಕಲ್, ಕುಂದಾಪುರ
ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಜೊತೆಗೂಡಿ.