ಬೆಂಗಳೂರು: ಧರ್ಮಸ್ಥಳದ ಭಾಗದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಹಾಗೂ ಅತ್ಯಾಚಾರ ಪ್ರಕರಣಗಳನ್ನು ಡಿಜಿಪಿ ಪ್ರಣವ್ ಮೊಹಂತಿ ಅವರ ನೇತೃತ್ವದ ವಿಶೇಷ ತನಿಖಾ ದಳ ಇಂದಿನಿಂದ ವಿಚಾರಣೆ ಆರಂಭಿಸಿದೆ.
ಧರ್ಮಸ್ಥಳಕ್ಕೆ ಭೇಟಿ ನೀಡಿದ ಎಸ್‍ಐಟಿ ತಂಡ ಠಾಣೆಯಲ್ಲಿ ಲಭ್ಯ ಇರುವ ದಾಖಲಾತಿಗಳು ಹಾಗೂ ಅಪರಿಚಿತ ಶವಗಳ ದತ್ತಾಂಶಗಳನ್ನು ಪರಿಶೀಲಿಸಿದೆ. ನಾಲ್ಕು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ತಂಡ ಪ್ರತ್ಯೇಕ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮೂಲಕ ವಿಚಾರಣೆ ಆರಂಭಿಸಿದೆ. ತನಿಖಾ ವರದಿಯನ್ನು ಸಲ್ಲಿಸಲು ಎಸ್‍ಐಟಿಗೆ ಮೂರು ತಿಂಗಳ ಕಾಲಾವಕಾಶವಿದ್ದು, ಅಷ್ಟರಲ್ಲಿ ಅತ್ಯಂತ ಸಂಕೀರ್ಣವಾದ ಈ ಪ್ರಕರಣವನ್ನು ಬೇಧಿಸಲು ಮುಂದಾಗಿದೆ.
ಕಳೆದ 20 ವರ್ಷಗಳಿಂದಲೂ ನಾಪತ್ತೆಯಾಗಿರುವ ಪ್ರಕರಣಗಳ ಬೆನ್ನು ಹತ್ತಿದ್ದು, ಅಪರಿಚಿತ ಶವಗಳ ಪತ್ತೆಗೂ ಮುಂದಾಗಿದೆ. ಅಸಹಜ ಸಾವು ಹಾಗೂ ಕೊಲೆ ಮಾದರಿಯ ಪ್ರಕರಣಗಳಲ್ಲಿ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ ಎಸ್‍ಐಟಿಯ ಒಂದು ತಂಡ ಮಾಹಿತಿ ಕಲೆ ಹಾಕಲಿದೆ. ಮತ್ತೊಂದು ತಂಡ ಧರ್ಮಸ್ಥಳ ಭಾಗದ ಬೇರೆ ಬೇರೆ ಪ್ರದೇಶಗಳಲ್ಲಿ ಪತ್ತೆಯಾಗಬಹುದಾದ ಕಳೆಬರಹಗಳ ವಿಚಾರಣೆ ನಡೆಸಲಿದೆ.
ಅನಾಮಿಕ ವ್ಯಕ್ತಿಯೊಬ್ಬರು ಕಳೆದ ಜುಲೈನಲ್ಲಿ ವಕೀಲರ ಮೂಲಕ ಪತ್ರ ಬರೆದು ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ತಾವೇ ಖುದ್ದಾಗಿ ಸಂಸ್ಕಾರ ಮಾಡಿದ್ದು, ಅವು ಕೊಲೆ ಮತ್ತು ಅತ್ಯಾಚಾರಗಳಿಗೆ ಸಂಬಂಧಪಟ್ಟಿದ್ದವು ಎಂದು ಹೇಳಿದ್ದರು.
ಸದರಿ ವ್ಯಕ್ತಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆಯನ್ನು ದಾಖಲಿಸಿದ್ದಾರೆ. ಮುಂದುವರೆದ ಭಾಗವಾಗಿ ಕೆಲ ಸ್ಥಳಗಳ ಪರಿಶೀಲನೆಗೆ ಪೊಲೀಸ್ ಅಧಿಕಾರಿಗಳು ಸಹಕರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್‍ಐಟಿ ರಚನೆ ಮಾಡಿದೆ.