ಬೆಂಗಳೂರು : ಪ್ಯಾಕೆಟ್‌ಗಳಲ್ಲಿ ಚಿನ್ನದ ಬಿಸ್ಕತ್, 15ಕ್ಕೂ ಹೆಚ್ಚು ಚಿನ್ನದ ಕಿವಿಯೋಲೆಗಳು, ಚಿನ್ನದ ಸರಗಳು, ಬೆಳ್ಳಿಯ ಆಭರಣಗಳು, ಬೆಳ್ಳಿ ಪದಾರ್ಥಗಳು, ಕಂತೆ ಕಂತೆ ನಗದು ಹಣ! ಇವೆಲ್ಲ ರಾಜ್ಯದ ವಿವಿಧೆಡೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕ ಅಕ್ರಮ ಸಂಪತ್ತು.
ಬೆಂಗಳೂರು, ಮೈಸೂರು, ಕೊಪ್ಪಳ ಸೇರಿದಂತೆ ಅನೇಕ ಕಡೆಗಳಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟರ ಬೇಟೆಯಾಡಿದ್ದಾರೆ. ಈ ವೇಳೆ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಆಸ್ತಿ, ಸಂಪತ್ತು ಪತ್ತೆಯಾಗಿದೆ.
ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿದ್ದ ಸರ್ಕಾರಿ ನೌಕರರ ಮೇಲೆ ಕಣ್ಣಿಟ್ಟಿದ್ದ ಲೋಕಾಯುಕ್ತ ಅಧಿಕಾರಿಗಳು ಬೆಳಿಗ್ಗೆ ಭರ್ಜರಿ ಶಾಕ್ ಕೊಟ್ಟಿದ್ದಾರೆ. ಮುಂಜಾನೆ ಚುಮು ಚುಮು ಚಳಿಯಲ್ಲೇ ಭ್ರಷ್ಟರ ಬೆವರಿಳಿಸಿದ್ದಾರೆ. ಬೆಂಗಳೂರು, ಬೆಂಗಳೂರು, ಬಳ್ಳಾರಿ, ಮೈಸೂರು, ಕೊಪ್ಪಳ, ಬೀದರ್, ತುಮಕೂರು, ಹುಬ್ಬಳ್ಳಿ ಸೇರಿ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಐಎಎಸ್ ಅಧಿಕಾರಿ ನಿವಾಸದ ಮೇಲೆ ದಾಳಿ
ಬೆಂಗಳೂರಿನಲ್ಲಿ ಐಎಎಸ್ ಅಧಿಕಾರಿ ವಾಸಂತಿ ಅಮರ್ ನಿವಾಸ ಸೇರಿ ಬೆಂಗಳೂರಿನ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಾಸಂತಿ ಅಮರ್ ಸದ್ಯ ಬೆಂಗಳೂರು ನಗರ ವಿಶೇಷ ಡಿಸಿಯಾಗಿದ್ದು, ಇಂದು ಆರ್.ಟಿ.ನಗರದಲ್ಲಿರುವ ಇವರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಟೌನ್ ಪ್ಲ್ಯಾನಿಂಗ್ ಸಹಾಯಕ ನಿರ್ದೇಶಕ
ಬೆಂಗಳೂರು ಪಟ್ಟಣ ಮತ್ತು ಗ್ರಾಮೀಣ ಯೋಜನಾ ಅಧಿಕಾರಿ ಮಾರುತಿ ಬಗಲಿಗೆ ಸೇರಿದ ಬೆಂಗಳೂರಿನ ನಿವಾಸ ಮತ್ತು ಬಳ್ಳಾರಿಯ ಮೂರು ಕಡೆ ದಾಳಿ ನಡೆದಿದೆ. ಬೆಂಗಳೂರಿನ ನಿವಾಸದಲ್ಲಿ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನದ ಆಭರಣ, ನಗದು, ಹಾಗೂ ದುಬಾರಿ ವಾಚ್‌ಗಳು ಪತ್ತೆಯಾಗಿವೆ. ಸದ್ಯ ಬೆಂಗಳೂರು ನಿವಾಸಿಯಾಗಿರುವ ಅಧಿಕಾರಿ ಮಾರುತಿ ಬಗಲಿ ವಿರುದ್ಧ ರಾಜ್ಯದ ಹಲವೆಡೆ ಆಸ್ತಿ ಮಾಡಿರುವ ಆರೋಪ ಇದೆ.
ಮಾರುತಿ ಅತ್ತೆಯ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಂಪಿಯ ಗ್ರಾಮಪಂಚಾಯಿತಿ ಅಧ್ಯಕ್ಷೆ ರಜನಿ ಷಣ್ಮುಖಗೌಡ (ಮಾರುತಿ ಅತ್ತೆ) ಮನೆ ಮೇಲೆ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಯೆರಪ್ಪ ರೆಡ್ಡಿ ನಿವಾಸದ ಮೇಲೆ ದಾಳಿ
ಬಿಬಿಎಂಪಿ ಕಾರ್ಯನಿರ್ವಾಹಕ ಇಂಜಿನಿಯರ್ ಯೆರಪ್ಪ ರೆಡ್ಡಿ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯರೆಪ್ಪ ರೆಡ್ಡಿ ಕೆಲ ದಿನಗಳ ಹಿಂದಷ್ಟೇ 10 ಲಕ್ಷ ರೂಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು.
ಬೆಂಗಳೂರು ದಕ್ಷಿಣ ಜಿಲ್ಲೆಯ, ರಾಮನಗರದ ಜಿಲ್ಲಾಸ್ಪತ್ರೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಲೋಕಾಯುಕ್ತ ಎಸ್‌ಪಿ ಸ್ನೇಹಾ ನೇತೃತ್ವದಲ್ಲಿ ದಾಳಿ ನಡೆದಿದೆ. ಕೆಲ ಅವ್ಯವಹಾರ ಆರೋಪ ಹಿನ್ನೆಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.