Home ರಾಜ್ಯ ದಕ್ಷಿಣ ಕನ್ನಡ ಮಹಿಳೆಯರಿಗೆ ಅವಮಾನ ಮತ್ತು ಜೀವ ಬೆದರಿಕೆ ಆರೋಪ: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಎಫ್‌ಐಆರ್ ದಾಖಲು

ಮಹಿಳೆಯರಿಗೆ ಅವಮಾನ ಮತ್ತು ಜೀವ ಬೆದರಿಕೆ ಆರೋಪ: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಎಫ್‌ಐಆರ್ ದಾಖಲು

0

ಮಂಗಳೂರು: ಕುಟುಂಬದ ಮಹಿಳೆಯರ ಘನತೆಗೆ ಧಕ್ಕೆ ತಂದಿರುವುದು ಮತ್ತು ಜೀವ ಬೆದರಿಕೆ ಹಾಕಿರುವ ಆರೋಪದ ಮೇಲೆ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರಿನ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಂಗಭೂಮಿ ಮತ್ತು ತುಳು ಚಲನಚಿತ್ರ ಕಲಾವಿದ, ಪುತ್ತೂರು ತಾಲೂಕಿನ ಇಡ್ನಿನಾಡು ಗ್ರಾಮದ ಕುಂಬ್ರ ಸಮೀಪದ ಮಂದಾರ ನಿವಾಸಿ ಸುಂದರ್ ರೈ ಮಂದಾರ ಅವರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS 2023) ಸೆಕ್ಷನ್ 196(1), 352, 351(4), ಮತ್ತು 79 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

ದೂರುದಾರ ಸುಂದರ್ ರೈ ಮಂದಾರ ಅವರ ಪ್ರಕಾರ, ಏಪ್ರಿಲ್ 12 ರಂದು ಅವರ ಸ್ನೇಹಿತ ದಿನೇಶ್ ಕೊಡಪದವು ಎಂಬುವವರು ವಾಟ್ಸಾಪ್ ಮೂಲಕ ಆಡಿಯೋ ರೆಕಾರ್ಡಿಂಗ್ ಒಂದನ್ನು ಕಳುಹಿಸಿದ್ದರು. ಈ ಆಡಿಯೋದಲ್ಲಿ ಗುರುವಾಯನಕೆರೆಯ ಪ್ರಜ್ವಲ್ ಎಂಬುವವರ ಜೊತೆ ಮಹೇಶ್ ಶೆಟ್ಟಿ ಅವರು ಮಾತನಾಡುತ್ತಿರುವುದು ದಾಖಲಾಗಿದೆ ಎನ್ನಲಾಗಿದೆ.

ಈ ದೂರವಾಣಿ ಸಂಭಾಷಣೆಯ ವೇಳೆ ಮಹೇಶ್ ಶೆಟ್ಟಿ ಅವರು ದೂರುದಾರರ ಘನತೆ ಮತ್ತು ಪ್ರತಿಷ್ಠೆಗೆ ಕಳಂಕ ತರುವ ಉದ್ದೇಶದಿಂದ ಅತ್ಯಂತ ಅವಾಚ್ಯ ಹಾಗೂ ಅವಹೇಳನಕಾರಿ ಶಬ್ದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಸುಂದರ್ ರೈ ಅವರ ತಾಯಿ ಮತ್ತು ಪತ್ನಿಯ ಬಗ್ಗೆಯೂ ಅಶ್ಲೀಲವಾಗಿ ಮಾತನಾಡಿದ್ದು, ಮಹಿಳೆಯರ ಚಾರಿತ್ರ್ಯಕ್ಕೆ ಧಕ್ಕೆ ತರುವ ಮೂಲಕ ಅವರ ಕುಟುಂಬದ ಗೌರವವನ್ನು ಸಾರ್ವಜನಿಕವಾಗಿ ಹರಾಜು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಂಪ್ಯ ಪೊಲೀಸರು, ಸಂಭಾಷಣೆಯ ಆಡಿಯೋ ಕ್ಲಿಪ್ ಅನ್ನು ಪರಿಶೀಲಿಸುತ್ತಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

You cannot copy content of this page

Exit mobile version