Home ರಾಜ್ಯ ದಕ್ಷಿಣ ಕನ್ನಡ ದ್ವೇಷ ಭಾಷಣದ ಆರೋಪ: ಪುನೀತ್ ಕೆರೆಹಳ್ಳಿ ಬಂಧನ, ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

ದ್ವೇಷ ಭಾಷಣದ ಆರೋಪ: ಪುನೀತ್ ಕೆರೆಹಳ್ಳಿ ಬಂಧನ, ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

0

ಮಂಗಳೂರು: ಸಮಾಜದಲ್ಲಿ ದ್ವೇಷವನ್ನು ಪ್ರಚೋದಿಸುವ ರೀತಿಯಲ್ಲಿ ಭಾಷಣ ಮಾಡಿದ ಆರೋಪದ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬೆಳ್ತಂಗಡಿ ಪೊಲೀಸರು ಬುಧವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬೆಳ್ತಂಗಡಿಯ ಜೋರಾಮ್ ಬಾರ್ಬೋಜಾ ಎಂಬುವವರು ನೀಡಿದ ದೂರಿನ ಮೇರೆಗೆ, 2025ರ ಆಗಸ್ಟ್ 7 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪುನೀತ್ ವಿರುದ್ಧ ಬಿಎನ್‌ಎಸ್ 2023ರ ಸೆಕ್ಷನ್ 296ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ಭಾಗವಾಗಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಪುನೀತ್‌ಗೆ ಮೂರು ಬಾರಿ ನೋಟಿಸ್ ನೀಡಿದ್ದರು. ಆದರೆ, ಪುನೀತ್ ಪೊಲೀಸರ ವಿಚಾರಣೆಗೆ ಹಾಜರಾಗದೆ ಅಸಹಕಾರ ತೋರಿದ್ದರು ಎನ್ನಲಾಗಿದೆ.

ಪೊಲೀಸರ ನೋಟಿಸ್‌ಗೆ ಸ್ಪಂದಿಸದ ಹಿನ್ನೆಲೆಯಲ್ಲಿ, ಬೆಳ್ತಂಗಡಿ ಪೊಲೀಸರು ಸ್ಥಳೀಯ ನ್ಯಾಯಾಲಯದಿಂದ ಬಂಧನ ವಾರಂಟ್ ಪಡೆದುಕೊಂಡಿದ್ದರು. ಈ ವಾರಂಟ್ ಆಧಾರದ ಮೇಲೆ ಬುಧವಾರ (ಏಪ್ರಿಲ್ 15) ಬೆಂಗಳೂರಿಗೆ ತೆರಳಿದ ಪೊಲೀಸ್ ತಂಡವು, ಬಸವನಗುಡಿಯಲ್ಲಿರುವ ಕಚೇರಿಯಲ್ಲಿ ಪುನೀತ್‌ನನ್ನು ಬಂಧಿಸಿತು. ಬಳಿಕ ಆತನನ್ನು ಬೆಳ್ತಂಗಡಿಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇದೇ ವೇಳೆ, ಬೆಂಗಳೂರಿನಲ್ಲಿಯೂ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಶಾಂತಿ ಭಂಗಕ್ಕೆ ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

You cannot copy content of this page

Exit mobile version