Home ಬೆಂಗಳೂರು ದೇವನೂರು ಮಹಾದೇವ ಅವರಿಗೆ ಪಂಪ, ಕೆ ನೀಲಾ ಅವರಿಗೆ ಅಕ್ಕ ಮಹಾದೇವಿ ಪ್ರಶಸ್ತಿ ಗೌರವ

ದೇವನೂರು ಮಹಾದೇವ ಅವರಿಗೆ ಪಂಪ, ಕೆ ನೀಲಾ ಅವರಿಗೆ ಅಕ್ಕ ಮಹಾದೇವಿ ಪ್ರಶಸ್ತಿ ಗೌರವ

0

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2025-26ನೇ ಸಾಲಿನ ವಿವಿಧ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಿದ್ದು, ಖ್ಯಾತ ಸಾಹಿತಿ ದೇವನೂರ ಮಹಾದೇವ ಅವರಿಗೆ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ ಗೌರವ ಸಂದಿದೆ. ಇದೇ ವೇಳೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಸಿದ್ಧರಾಮ ಶರಣರು ಬೆಲ್ದಾಳ ಅವರಿಗೆ ‘ಬಸವ ರಾಷ್ಟ್ರೀಯ ಪುರಸ್ಕಾರ’ ಮತ್ತು ಮಂಡ್ಯ ಜಿಲ್ಲೆಯ ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ‘ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಈ ಎರಡೂ ರಾಷ್ಟ್ರೀಯ ಪ್ರಶಸ್ತಿಗಳು ತಲಾ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿವೆ.

ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅವರಿಗೆ ‘ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿ’, ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ್ ಅವರಿಗೆ ‘ಸಂಗೊಳ್ಳಿ ರಾಯಣ್ಣ ಪ್ರಶಸ್ತಿ’ ಹಾಗೂ ಸಮಾಜ ಸೇವಕಿ ಕೆ. ನೀಲಾ ಅವರಿಗೆ ‘ಅಕ್ಕಮಹಾದೇವಿ ಪ್ರಶಸ್ತಿ’ಯನ್ನು ನೀಡಲಾಗಿದೆ. ಅಲ್ಲದೆ, ಗಡಿಭಾಗದ ಸಾಹಿತ್ಯ ಸೇವೆಗಾಗಿ ಅಲ್ಲಾಬಕ್ಷ್ ಮಿಲಾಸಾಹೇಬ್ ಮಿರ್ಜಿ ಅವರಿಗೆ ‘ಪ್ರೊ. ಕೆ. ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’ ಮತ್ತು ಲೇಖಕಿ ಸುಕನ್ಯಾ ಮಾರುತಿ ಅವರಿಗೆ ‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’ ಲಭಿಸಿದೆ. ಈ ಎಲ್ಲಾ ಪ್ರಶಸ್ತಿಗಳು ತಲಾ 5 ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿವೆ.

ಕಲೆ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಕಲಾವಿದೆ ಜಿ. ವಿ. ಶಾರದಾ ಅವರಿಗೆ ‘ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ’, ರಂಗಕರ್ಮಿ ಪ್ರಸನ್ನ ಅವರಿಗೆ ‘ಬಿ. ವಿ. ಕಾರಂತ ಪ್ರಶಸ್ತಿ’ ಹಾಗೂ ಸಾಹಿತಿ ಗಂಗಾರಾಮ್ ಚಂಡಾಲ ಅವರಿಗೆ ‘ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ’ ಘೋಷಿಸಲಾಗಿದೆ. ಲಲಿತಕಲೆ ವಿಭಾಗದಲ್ಲಿ ವಿ. ಹರಿರಾಮ್ ಅವರಿಗೆ ‘ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ ಮತ್ತು ಶಿಲ್ಪಕಲಾ ಸಾಧಕ ಅಶೋಕ್ ಗುಡಿಗಾರ್ ಅವರಿಗೆ ‘ಜಕಣಾಚಾರಿ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಜಾನಪದ ಕ್ಷೇತ್ರದ ಸಾಧಕರಾದ ಎಂ. ಮಹಾದೇವಸ್ವಾಮಿ ಹಾಗೂ ಬಿ. ಲಕ್ಷ್ಮಣ್ ಅವರಿಗೆ ‘ಜಾನಪದ ಶ್ರೀ ಪ್ರಶಸ್ತಿ’ ಒಲಿದಿದೆ.

ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಗದಗಿನ ಕಲ್ಲಿನಾಥ ಶಾಸ್ತ್ರಿ ಅವರಿಗೆ ‘ಕುಮಾರವ್ಯಾಸ ಪ್ರಶಸ್ತಿ’ ಹಾಗೂ ಪ್ರತಿಭಾ ಪ್ರಹ್ಲಾದ್ ಅವರಿಗೆ ‘ಶಾಂತಲಾ ನಾಟ್ಯರಾಣಿ ಪ್ರಶಸ್ತಿ’ ನೀಡಲಾಗಿದೆ. ಪ್ರಶಸ್ತಿಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು, ಶೀಘ್ರದಲ್ಲೇ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಬಾರಿ ಎಲ್ಲಾ ವರ್ಗದ ಸಾಧಕರಿಗೂ ಪ್ರಾತಿನಿಧ್ಯ ನೀಡುವ ಮೂಲಕ ಸಮತೋಲಿತವಾಗಿ ಪ್ರಶಸ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

You cannot copy content of this page

Exit mobile version