Home ರಾಜಕೀಯ ಜಾತಿ ಗಣತಿ| ಡಿ ಕೆ ಶಿ ಮತ್ತು ಒಕ್ಕಲಿಗ ಸಚಿವರು ನಿಲುವು ಸ್ಪಷ್ಟಪಡಿಸಬೇಕು

ಜಾತಿ ಗಣತಿ| ಡಿ ಕೆ ಶಿ ಮತ್ತು ಒಕ್ಕಲಿಗ ಸಚಿವರು ನಿಲುವು ಸ್ಪಷ್ಟಪಡಿಸಬೇಕು

0

ಸಾಮಾಜಿಕ,ಆರ್ಥಿಕ ಸಮೀಕ್ಷೆ-2015ರ ಕಾಂತರಾಜ್ ವರದಿಯನ್ನು ವಿರೋಧಿಸಿ ಆದಿಚುಂಚನಗಿರಿ ಮಠದ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ಅಧ್ಯಕ್ಷತೆಯ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಸರ್ಕಾರದ ಭಾಗವೇ ಅಗಿರುವ ಉಪಮುಖ್ಯಮಂತ್ರಿ ಡಿ,.ಕೆ ಶಿವಕುಮಾರ್ ಮತ್ತು ಇತರೆ ಸಚಿವರುಗಳು ಭಾಗವಹಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು- ರವಿಕುಮಾರ್‌ ಎನ್‌, ಪತ್ರಕರ್ತರು

ಆದಿಚುಂಚನಗಿರಿಮಠದ ಡಾ ನಿರ್ಮಲಾನಂದನಾಥ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಒಕ್ಕಲಿಗರ ಸಮುದಾಯದ ಸಭೆಯಲ್ಲಿ ಸಾಮಾಜಿಕ,ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಕಾಂತರಾಜ್ ವರದಿಯನ್ನು ವಿರೋಧಿಸುವ ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ಮತ್ತು ಸರ್ಕಾರದ ಭಾಗವಾಗಿರುವ ಒಕ್ಕಲಿಗ ಸಮುದಾಯದ ಶಾಸಕ ,ಸಚಿವರುಗಳು ಉಪಸ್ಥಿತರಿರುವುದನ್ನು ನಿರ್ಣಯಕ್ಕೆ ಸಮ್ಮತಿ ಎಂದೇ ಭಾವಿಸಬಹುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ದಿನಗಳ ಹಿಂದೆಯಷ್ಟೆ ಕಾಂತರಾಜ್ ವರದಿ ಸ್ವೀಕರಿಸಿ ಅನುಷ್ಟಾನಗೊಳಿಸಲು ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಬಹಿರಂಗವಾಗಿ ಘೋಷಿಸಿರುವಾಗ ಅವರ ಸಂಪುಟದ ಸಹೋದ್ಯೋಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಮತ್ತಿತರ ಸಚಿವರುಗಳು ಕಾಂತರಾಜ್ ವರದಿ ವಿರೋಧಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಸ್ವಜಾತಿಯ ನಿರ್ಣಯಕ್ಕೆ ಕೈಜೋಡಿಸಿರುವುದು ಸರ್ಕಾರದ ನಿಲುವಿಗೆ ಮತ್ತು ಆಶಯಕ್ಕೆ ತದ್ವಿರುದ್ದ ನಡೆಯಂತೆ ಕಾಣತೊಡಗಿದೆ.

ಬಲಾಢ್ಯ ಜಾತಿಗಳು ಕಾಂತರಾಜ್ ವರದಿಯನ್ನು ಮೊದಲಿನಿಂದಲೂ ವಿರೋಧಿಸಿಕೊಂಡೆ ಬಂದಿವೆ. ಸಿದ್ದರಾಮಯ್ಯ 2013 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೆ ಜನಜಾತಿಗಳ ಸಾಮಾಜಿಕ,ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಅಸ್ತು ಎಂದಿದ್ದು 162 ಕೋ.ರೂಗಳನ್ನು ವಿನಿಯೋಗಿಸಿದೆ. ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ್ ನೇತೃತ್ವದಲ್ಲಿ ನಡೆದ ಸಮೀಕ್ಷೆ ಜಾತಿಗಣತಿಯ ಮಹತ್ವದ ಸ್ವರೂಪವೇ ಆಗಿದೆ. ಆದರೆ ವರದಿ ಸಿದ್ದಗೊಂಡಿದ್ದರೂ ಅದನ್ನು ಸಿದ್ದರಾಮಯ್ಯ ಸರ್ಕಾರದ ನಂತರ ಬಂದ ಸರ್ಕಾರಗಳು ಆ ವರದಿಯನ್ನು ಸ್ವೀಕರಿಸುವ ಮನಸ್ಸು ಮಾಡಲಿಲ್ಲ. ಅಷ್ಟೇ ಏಕೆ, ಅಲ್ಪಾವಧಿಯ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಸಂದರ್ಭದಲ್ಲೂ ಕಾಂತರಾಜ್ ವರದಿ ಸ್ವೀಕರಿಸಲು ಸರ್ಕಾರದ ಭಾಗವೇ ಆಗಿದ್ದ ಬಲಾಢ್ಯ ಜಾತಿಗಳ ನಾಯಕರುಗಳು ಅಡ್ಡಿ ಪಡಿಸಿದ್ದರು ಎಂಬ ಸತ್ಯವನ್ನು ಮರೆಮಾಚುವಂತಿಲ್ಲ.

ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿದಿರುವಾಗ ಈ ರಾಜ್ಯದ ಬಹುಜನರ ಸಾಮಾಜಿಕ ನ್ಯಾಯದ ತಕ್ಕಡಿಯೆಂದೆ ಗುರುತಿಸ ಬಹುದಾದ ಕಾಂತರಾಜ್ ವರದಿಯನ್ನು ಜಾರಿಗೊಳಿಸುವುದನ್ನು ಎದುರು ನೋಡಲಾಗುತ್ತಿದೆ. ಸಾಮಾಜಿಕ ನ್ಯಾಯದ ಸಮರ್ಪಕ ಹಂಚಿಕೆಗೆ ಜಾತಿಗಣತಿ ಆಗಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರತಿಪಾದನೆ ಮತ್ತು ಇದೇ ಕಾಂಗ್ರೆಸ್ ಪಕ್ಷದ ನಿಲುವು ಆಗಿದ್ದು, ಸಾಮಾಜಿಕ ನ್ಯಾಯದ ಬೇಡಿಕೆಗೆ ಹೊಸ ಶಕ್ತಿಯೊಂದು ಹರಿದಂತಾಗಿದೆ.

ಇದೇ ಮಾದರಿಯಲ್ಲಿ ಬಿಜೆಪಿ ಕೂಡ ಓಬಿಸಿ ವಾದವನ್ನು ಮುಂದಿಟ್ಟಿರುವುದು ಅಂತಿಮವಾಗಿ ಎಲ್ಲದಕ್ಕೂ ಜಾತಿಗಣತಿ ಆಗಲೇಬೇಕಾದ ರಾಜಕೀಯ ಒತ್ತಡವೊಂದು ನಿರ್ಮಾಣವಾಗಿದೆ. ಇದನ್ನು ಮತ ಗಳಿಕೆಯ ಲಾಭ-ನಷ್ಟದ ಆಚೆಗೆ ನಿಂತು ನೋಡುವಾಗ ಬಹುಜನರ ನ್ಯಾಯದ ಕೂಗಿಗೆ ಬಲ ಬಂದಂತಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೇ ಜಾತಿಗಣತಿಯನ್ನು ಪ್ರತಿಪಾದಿಸಿರುವುದು ಕರ್ನಾಟಕದಲ್ಲಿ 2015 ರಿಂದ ನೆನಗುದಿಗೆ ಬಿದ್ದಿರುವ ಕಾಂತರಾಜ್ ವರದಿಯ ಜಾರಿಗೆ ಒತ್ತಾಸೆ ಸಿಕ್ಕಂತಾಗಿದ್ದು, ಕಾಂತರಾಜ್ ವರದಿ ಮೇಲ್ನೋಟಕ್ಕೆ ಜನಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಎನ್ನುವುದಾದರೂ ಅದು ಆಂತರ್ಯವಾಗಿ ಜಾತಿಗಣತಿಯೇ ಆಗಿದೆ. ಈ ವರದಿ ಸೋರಿಕೆ ಎನ್ನಬಹುದಾದ ಅಂಕಿಅಂಶಗಳಿಂದ ಅವಕಾಶ ವಂಚಿತ ಜನಜಾತಿಗಳ ನೈಜ ಸ್ಥಿತಿಗತಿಗಳು ಬೆಳಕಿಗೆ ಬಂದಂತಾಗಿದ್ದು, ಇದುವರೆಗೂ ಸಾಮಾಜಿಕ ನ್ಯಾಯದ ಫಲವನ್ನು ವಂಚಿಸಿದ ಬಲಾಢ್ಯ ಜಾತಿಗಳ ಧೋರಣೆಯೂ ಬಯಲಾಗಿದೆ. ಈ ಕಾರಣಗಳಿಗಾಗಿಯೇ ಆತಂಕಗೊಂಡಿರುವ ಬಲಾಢ್ಯ ಜಾತಿಗಳು ಜಾತಿಗಳ ಜನಸಂಖ್ಯೆಗನುಗುಣವಾಗಿ ಸಾಂವಿಧಾನಿಕ ಪಾಲು ಹಂಚುವ ಮಾರ್ಗಸೂತ್ರವಾಗಿರುವ ಕಾಂತರಾಜ್ ವರದಿಯನ್ನು ವಿರೋಧಿಸಲು ಮುಂದಾಗಿವೆ.

ಭಾರತದ ಒಕ್ಕೂಟ ಸರ್ಕಾರ ಮೀಸಲಾತಿ ಕೊಡಬೇಕಾದ ಸೂತ್ರವೇ ಇಲ್ಲದೆ ಮೇಲ್ಜಾತಿಗಳಿಗೆ ಶೇ. 10 ರಷ್ಟು ಮೀಸಲಾತಿಯನ್ನು ಉದಾರವಾಗಿ ಕೊಟ್ಟಿದ್ದನ್ನು ಪ್ರಶ್ನಿಸಲಾರದ ಶೂದ್ರ ಸಮುದಾಯಗಳಿಗೆ ಇದೀಗ ಕಾಂತರಾಜ್ ವರದಿಯನ್ನು ವಿರೋಧಿಸುತ್ತಿರುವುದು ಸಾಮಾಜಿಕ ನ್ಯಾಯದ ತುತ್ತು ಕಸಿಯುವ ಕೃತ್ಯ ಎಂದೆನಿಸುವುದಿಲ್ಲ.

ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ ಅದನ್ನು ಒಕ್ಕಲಿಗ , ಲಿಂಗಾಯಿತ ಸಮುದಾಯಗಳಿಗೆ ಹಂಚಿಕೆ ಮಾಡುವ ಮೂಲಕ ಅವೈಜ್ಞಾನಿಕ ಮತ್ತು ಕೇಡಿನ ರಾಜಕೀಯ ನೀತಿಯನ್ನು ಅನುಷ್ಟಾನ ಗೊಳಿಸಲು ಮುಂದಾಗಿತ್ತು. ಬಹುಜನರ ನ್ಯಾಯದ ಬಗ್ಗೆ ಯಾವುದೇ ಕಳಕಳಿ ತೋರಲಿಲ್ಲ ಎಂಬುದು ಬಿಜೆಪಿಯ ನೀತಿ ಎತ್ತಿ ತೋರುತ್ತಿದೆ.

ಸಾಮಾಜಿಕ,ಆರ್ಥಿಕ ಸಮೀಕ್ಷೆ-2015ರ ಕಾಂತರಾಜ್ ವರದಿಯನ್ನು ವಿರೋಧಿಸಿ ಆದಿಚುಂಚನಗಿರಿ ಮಠದ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ಅಧ್ಯಕ್ಷತೆಯ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಸರ್ಕಾರದ ಭಾಗವೇ ಅಗಿರುವ ಉಪಮುಖ್ಯಮಂತ್ರಿ ಡಿ,.ಕೆ ಶಿವಕುಮಾರ್ ಮತ್ತು ಇತರೆ ಸಚಿವರುಗಳು ಭಾಗವಹಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂತರಾಜ್ ವರದಿ ಸ್ವೀಕರಿಸುವ ನಿರ್ಧಾರ ಘೋಷಣೆ ಮಾಡಿರುವಾಗ ಅವರದ್ದೇ ಸಂಪುಟದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಒಕ್ಕಲಿಗ ಸಚಿವರುಗಳು ಕಾಂತರಾಜ್ ವರದಿ ಕುರಿತಾದ ತಮ್ಮ ನಿಲುವನ್ನು ಸ್ಪಷ್ಟವಾಗಿ ಬಹಿರಂಗಪಡಿಸಬೇಕು.


ಎನ್.ರವಿಕುಮಾರ್

ಪತ್ರಕರ್ತರು

ಇದನ್ನೂ ಓದಿ ಆರೋಪ ಪ್ರತ್ಯಾರೋಪಗಳ ಬೃಹನ್ನಾಟಕ; ಜನಹಿತಕೆ ಮಾರಕ

You cannot copy content of this page

Exit mobile version