ಚಿಕ್ಕಬಳ್ಳಾಪುರ,ನವೆಂಬರ್.03: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಗ್ರಹಿಸಲಾಗಿರುವ ಸೊಳ್ಳೆಯ ಮಾದರಿಯಲ್ಲಿ ಝಿಕಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಹೈ ಅಲರ್ಟ್ ಆಗಿದೆ. ಸೆಪ್ಟೆಂಬರ್ 25ರಂದು ಸಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಿಂದ ಈ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಹೀಗಾಗಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ನಡುವೆ ಪ್ರಯಾಣ ಮಾಡುವವರಿಗೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಸೂಚಿಸಲಾಗಿದೆ.
ಚಿಕ್ಕಬಳ್ಳಾಪುರದಿಂದ ಬೆಂಗಳೂರು ಮತ್ತು ಇತರೆಡೆಗೆ ದಿನನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಿದ್ದು, ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ.
ಕಳೆದ ಎರಡು ತಿಂಗಳಿಂದ ರಾಜ್ಯದ 68 ಪ್ರದೇಶಗಳಲ್ಲಿ ಜ್ವರ ಪೀಡಿತ, ಗರ್ಭಿಣಿಯರನ್ನು ಝಿಕಾ ವೈರಸ್ ಸೋಂಕಿನ ತಪಾಸನೆಗೆ ಒಳಪಡಿಸಲಾಗಿದೆ.
ರಾಜ್ಯ ಆರೋಗ್ಯ ಇಲಾಖೆ ಪ್ರಕಾರ, ದಿಬ್ಬೂರಹಳ್ಳಿಯ 30 ವರ್ಷದ ಪುರುಷ, ತಲಕಾಯಲಬೆಟ್ಟದ 38 ವರ್ಷದ ಮಹಿಳೆ ಮತ್ತು ಬಾಚನಹಳ್ಳಿಯ 50 ವರ್ಷದ ಮಹಿಳೆ ಜ್ವರದಿಂದ ಬಳಲುತ್ತಿದ್ದು, ಸೋಂಕಿನ ದೃಢೀಕರಣಕ್ಕಾಗಿ ಅವರ ರಕ್ತದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (ಎನ್‌ಐವಿ) ಕಳುಹಿಸಲಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಝಿಕಾ ವೈರಸ್ ಈಡಿಸ್ ಸೊಳ್ಳೆಯಿಂದ ಹರಡುತ್ತದೆ. ಈ ಸೋಂಕು ದೇಹದಲ್ಲಿ ರ್ಯಾಷಸ್, ಜ್ವರ, ಕೆಂಪು ಕಣ್ಣು, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು ತಲೆನೋವು ಇತ್ಯಾದಿ ರೋಗ ಲಕ್ಷಣಗಳನ್ನು ತೋರಿಸುತ್ತದೆ. ಸದ್ಯ ಈ ಸೋಂಕಿಗೆ ಯಾವುದೇ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ.