ಚಿತ್ರದುರ್ಗ: ಪರಿಶಿಷ್ಟ ಜಾತಿ (SC) ಸಮುದಾಯದವರು ಒಳಮೀಸಲಾತಿ ಸೌಲಭ್ಯಗಳನ್ನು ಪಡೆಯಬೇಕಿದ್ದರೆ, ಜಾತಿ ಸಮೀಕ್ಷೆಯ ವೇಳೆ ‘ಜಾತಿ ಘೋಷಣೆ’ ಕಡ್ಡಾಯವಾಗಿ ಮಾಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್. ಆಂಜನೇಯ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಮೀಕ್ಷೆಯಲ್ಲಿ ‘ಆದಿ ಕರ್ನಾಟಕ (AK)’, ‘ಆದಿ ದ್ರಾವಿಡ (AD)’, ಅಥವಾ ‘ಆದಿ ಆಂಧ್ರ (AA)’ ಎಂದು ಬರೆಸಿಕೊಂಡಿರುವವರು ಈಗ ಕಡ್ಡಾಯವಾಗಿ ತಮ್ಮ ಜಾತಿಯನ್ನು ಘೋಷಿಸಿಕೊಳ್ಳಬೇಕು. ವಿಶೇಷವಾಗಿ, ಹೊಲೆಯ ಮತ್ತು ಮಾದಿಗ ಸಮುದಾಯದವರು ಯಾವುದೇ ಗೊಂದಲಗಳಿಗೆ ಒಳಗಾಗದೆ, ತಮ್ಮ ಸಮುದಾಯದವರು ಅದಲು-ಬದಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ತಪ್ಪು ಘೋಷಣೆಯ ವಿರುದ್ಧ ಎಚ್ಚರಿಕೆ
‘ಜಾತಿ ಸೂಚಕ ವರ್ಗದಲ್ಲಿ AK, AD, AA ಎಂದು ಗುರುತಿಸಿಕೊಂಡವರು ‘ಎ’ ಅಥವಾ ‘ಬಿ’ ಗುಂಪಿನಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಬೇರೆಯವರು ಕಳ್ಳದಾರಿಯಲ್ಲಿ ನಮ್ಮ ‘ಬಿ’ ಗುಂಪಿಗೆ ಪ್ರವೇಶಿಸಿದರೆ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ. ಅವರಿಗೆ ಶಿಕ್ಷೆಯಾಗುವವರೆಗೂ ನಾವು ಹೋರಾಟ ನಡೆಸುತ್ತೇವೆ’ ಎಂದು ಆಂಜನೇಯ ಅವರು ಎಚ್ಚರಿಕೆ ನೀಡಿದರು.
ಸಾಮಾಜಿಕ ಸಮೀಕ್ಷೆ ರಾಜ್ಯದ ಪ್ರಗತಿಗೆ ದಾರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಬದ್ಧತೆಯಿಂದ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಈ ಸಮೀಕ್ಷೆಯು ರಾಜ್ಯದ ಪ್ರಗತಿಗೆ ದಾರಿ ಮಾಡಿಕೊಡಲಿದೆ. ಯಾವುದೇ ರಾಜ್ಯ ಅಭಿವೃದ್ಧಿ ಕಾಣಬೇಕಾದರೆ, ಅಲ್ಲಿನ ಜನರ ಸ್ಥಿತಿಗತಿ ಅರಿತುಕೊಳ್ಳಬೇಕು. ಸಮುದಾಯಗಳ ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆ ಮಾಹಿತಿಯ ಅಗತ್ಯವಿದೆ. ಆದ್ದರಿಂದ ಯಾರೊಬ್ಬರೂ ವಿರೋಧ ಮಾಡದೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಅಕ್ಟೋಬರ್ 18ರವರೆಗೆ ಸಮೀಕ್ಷೆಯನ್ನು ವಿಸ್ತರಣೆ ಮಾಡಿರುವುದು ಉತ್ತಮ ಕ್ರಮ ಎಂದರು.
ಸಂಘಟನೆಗಳ ಪ್ರತಿಭಟನೆ ಸರಿಯಲ್ಲ
ಸಮೀಕ್ಷೆ ವಿರುದ್ಧ ಕೆಲವು ಸಂಘಟನೆಗಳು ಸಚಿವ ಎಚ್.ಸಿ. ಮಹಾದೇವಪ್ಪ ಸೇರಿ ಇತರ ಸಚಿವರ ಮನೆಗಳಿಗೆ ಮುತ್ತಿಗೆ ಹಾಕುವುದಾಗಿ ಹೇಳುತ್ತಿರುವುದು ಸರಿಯಲ್ಲ. ಈ ಹಿಂದೆ ಕಾಂತರಾಜು ಆಯೋಗವು ವೈಜ್ಞಾನಿಕ ವರದಿ ನೀಡಿತ್ತು. ಆದರೆ, ಅದು 10 ವರ್ಷ ಹಳೆಯದಾಗಿದೆ ಎಂಬ ಆರೋಪ ಕೇಳಿಬಂದ ಕಾರಣ ಮತ್ತೊಮ್ಮೆ ಸಮೀಕ್ಷೆ ನಡೆಸಲಾಗುತ್ತಿದೆ. ಈ ಕಾರ್ಯಕ್ಕೆ ಆರಂಭದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದರೂ, ಈಗ ವಾಸ್ತವತೆ ಅರಿತು ಎಲ್ಲರೂ ಪಾಲ್ಗೊಳ್ಳುತ್ತಿರುವುದು ಸ್ವಾಗತಾರ್ಹ ನಡೆ ಎಂದು ಆಂಜನೇಯ ಅಭಿಪ್ರಾಯಪಟ್ಟರು.
ಇದಲ್ಲದೆ, ಒಳಮೀಸಲಾತಿ ವಿಷಯದಲ್ಲಿ ಯಾವುದೇ ಗೊಂದಲಗಳಿಲ್ಲ. ಅನಗತ್ಯವಾಗಿ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಮೀಸಲು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕು. ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ, ಉದ್ಯೋಗಸ್ಥರನ್ನಾಗಿ ಮಾಡಲು ಶ್ರಮಿಸಬೇಕು ಎಂದು ಅವರು ಮನವಿ ಮಾಡಿದರು.
ಕಾಡುಗೊಲ್ಲ ಸಮುದಾಯದವರು ಈಗ ಜಾಗೃತರಾಗಿದ್ದು, ಅವರು ಜಾತಿ ಕಲಂನಲ್ಲಿ ಕಾಡುಗೊಲ್ಲ ಎಂದೇ ಬರೆಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಈ ಕಾರ್ಯ ಸ್ವಾಗತಾರ್ಹ. ಸಮೀಕ್ಷೆ ಕಾರ್ಯದಲ್ಲಿ ಸಮುದಾಯಗಳ ಪ್ರತಿಯೊಬ್ಬ ವ್ಯಕ್ತಿಯೂ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.