ಮೈಸೂರು: ನಗರದಲ್ಲಿ ಇತ್ತೀಚೆಗೆ ಕೆಲವೇ ದಿನಗಳ ಅಂತರದಲ್ಲಿ ನಡೆದಿರುವ ಕೊಲೆ ಹಾಗೂ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರದ ಯಾರೊಬ್ಬರೂ ಧ್ವನಿ ಎತ್ತದಿರುವುದಕ್ಕೆ ಮಾಜಿ ಸಂಸದ ಪ್ರತಾಪ ಸಿಂಹ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ರಾಜ್ಯ ಸರ್ಕಾರದಲ್ಲಿರುವವರು ‘ಕೂಗುಮಾರಿಗಳು’. ಅವರು ಉಕ್ರೇನ್, ರಷ್ಯಾ ಮತ್ತು ಅಮೆರಿಕ ಅಧ್ಯಕ್ಷರ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ. ಆದರೆ, ಬಾಲಕಿಯ ಕೊಲೆ ಪ್ರಕರಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ, ಮುಖ್ಯಮಂತ್ರಿ (ಸಿಎಂ) ಮತ್ತು ಉಪಮುಖ್ಯಮಂತ್ರಿ (ಡಿಸಿಎಂ) ಸುಮ್ಮನಿದ್ದಾರೇಕೆ?” ಎಂದು ಪ್ರಶ್ನಿಸಿದರು.
‘ಪೊಲೀಸರಿಗೆ ಮುಕ್ತ ವಾತಾವರಣವಿಲ್ಲ’
ರಾಜ್ಯದ ಪೊಲೀಸರಿಗೆ ದಕ್ಷತೆ ಇದೆ, ಆದರೆ ಕೆಲಸ ಮಾಡಲು ಅವರಿಗೆ ಮುಕ್ತ ವಾತಾವರಣವಿಲ್ಲ ಎಂದು ಪ್ರತಾಪ ಸಿಂಹ ದೂರಿದರು. “ಮುಖ್ಯಮಂತ್ರಿಯು ಹೋಟೆಲ್‌ನಲ್ಲಿ ಕಾಫಿ ಕುಡಿಯುವಾಗ, ದೋಸೆ ತಿನ್ನುವಾಗ ಭದ್ರತೆಗೆ ಮಾತ್ರವೇ ಪೊಲೀಸರನ್ನು ಬಳಸಿಕೊಳ್ಳುತ್ತಿದ್ದಾರೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಸಂವಿಧಾನ ಪೀಠಿಕೆ ಓದಿಸುವುದನ್ನು ಬಿಟ್ಟರೆ ಬೇರೇನು ಮಾಡುತ್ತಿದ್ದಾರೆ? ಸಿಎಂಗೆ ಅಂತಃಕರಣವಿಲ್ಲ; ಅವರ ಹೃದಯ ಕಲ್ಲಾಗಿದೆ” ಎಂದು ತೀವ್ರ ವಾಗ್ದಾಳಿ ನಡೆಸಿದರು.
ವರ್ಗಾವಣೆ ಸಚಿವ ಡಾ. ಯತೀಂದ್ರ; ಸಿಎಂ- ಡಿಕೆಶಿ ನಡುವೆ ಕಲೆಕ್ಷನ್ ಪೈಪೋಟಿ
ಅಪರಾಧಿಯ ಬಂಧನಕ್ಕೆ ಮುನ್ನ ಆತ ಯಾವ ಜಾತಿಯವನು ಎಂದು ನೋಡಬೇಕಾದ ಸ್ಥಿತಿ ಮೈಸೂರು ಪೊಲೀಸರಿಗೆ ಬಂದಿದೆ ಎಂದು ಸಿಂಹ ದೂರಿದರು. ಅಲ್ಲದೆ, “ಮೈಸೂರು ಪೊಲೀಸರಿಗೆ ಮುಖ್ಯಮಂತ್ರಿಗಳ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯನವರ ಕಾಟ ಜಾಸ್ತಿಯಾಗಿದೆ. ಅವರೀಗ ‘ವರ್ಗಾವಣೆ ಸಚಿವರಾಗಿದ್ದಾರೆ’. ಯಾರದೇ ವರ್ಗಾವಣೆ ಆಗಬೇಕಾದರೂ ಅವರಿಗೆ ತೆರಿಗೆ ಕಟ್ಟಬೇಕು. ಕಲೆಕ್ಷನ್ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಪೈಪೋಟಿಗೆ ಬಿದ್ದಿದ್ದಾರೆ. ರಾಹುಲ್ ಗಾಂಧಿಗೆ ಯಾರು ಹೆಚ್ಚು ಕೊಡುತ್ತೇವೋ ಎಂಬ ಪೈಪೋಟಿ ಅವರಿಬ್ಬರಲ್ಲಿದೆ” ಎಂದು ಆರೋಪಿಸಿದರು.
“ಮುಖ್ಯಮಂತ್ರಿಗಳೇ, ನಿಮಗೆ ಹೆಣ್ಣು ಮಕ್ಕಳು ಇಲ್ಲದಿರಬಹುದು. ಆದರೆ, ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳಿಲ್ಲವೇ? ಆ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿ” ಎಂದು ಪ್ರತಾಪ ಸಿಂಹ ಅವರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು.