ಉಡುಪಿ: ಬಿಜೆಪಿಯಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ರಾಜಕಾರಣಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು, ಅವರನ್ನು ‘ನಿರ್ಮಾ ವಾಷಿಂಗ್ ಮೆಷಿನ್’ ಮೂಲಕ ತೊಳೆದು ಪ್ರಾಮಾಣಿಕರನ್ನಾಗಿಸಲಾಗುತ್ತದೆ ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಸೇರಿದ ಕೂಡಲೇ ಅವರೆಲ್ಲರೂ ಪ್ರಾಮಾಣಿಕರಾಗಿ ಬಿಡುತ್ತಾರೆ ಎಂದು ಲೇವಡಿ ಮಾಡಿದ ಅವರು, ಈ ರೀತಿ ಸುಮಾರು 25 ರಾಜಕಾರಣಿಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರೊಬ್ಬರ ಮನೆ ಮೇಲೆ ಇಡಿ ದಾಳಿ ನಡೆದ ಬಗ್ಗೆ ಉಡುಪಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮಹಾರಾಷ್ಟ್ರದ ಅಜಿತ್ ಪವಾರ್ ಮೇಲೆ ₹60 ಸಾವಿರ ಕೋಟಿ ಹಗರಣದ ಆರೋಪ ಇತ್ತು, ಅವರನ್ನು ಬಿಜೆಪಿಗೆ ಕರೆದುಕೊಂಡು ಬಂದರು. ಹಾಗೆಯೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಮೇಲೂ ಆರೋಪವಿತ್ತು. ಅವರಿಬ್ಬರೂ ಬಿಜೆಪಿಗೆ ಹಣ ಕೊಟ್ಟು ಸೇರ್ಪಡೆಯಾದರು. ಆದರೆ, ಕಾಂಗ್ರೆಸ್ ಶಾಸಕ ಪಪ್ಪಿ ಅವರು ಬಿಹಾರ ಚುನಾವಣೆಗೆ ದುಡ್ಡು ಕೊಟ್ಟಿಲ್ಲ. ಯಾರು ದುಡ್ಡು ಕೊಡುತ್ತಾರೋ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ. ಇಡೀ ಮಹಾರಾಷ್ಟ್ರ ಚುನಾವಣೆಗೆ ಅಜಿತ್ ಪವಾರ್ ಹಣ ಕೊಟ್ಟಿದ್ದಾರೆ. ಆದರೆ, ಇದೇ ಬಿಜೆಪಿಯವರು ಈ ಮೊದಲು ಅಜಿತ್ ಪವಾರ್ ವಿರುದ್ಧವೇ ಆರೋಪಗಳನ್ನು ಮಾಡಿದ್ದರು ಎಂದು ಲಾಡ್ ಆರೋಪಿಸಿದರು.
ದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಭ್ರಷ್ಟಾಚಾರದ ಶ್ರೇಯಾಂಕದಲ್ಲಿ ದೇಶ ಯಾವ ಸ್ಥಾನದಲ್ಲಿದೆ ಎಂಬುದನ್ನು ನೋಡಬೇಕು. ಹಸಿವಿನ ಸೂಚ್ಯಂಕ (Hunger Index), ಬಡತನದ ಸೂಚ್ಯಂಕ, ವಾಕ್ ಸ್ವಾತಂತ್ರ್ಯ, ಜಿಡಿಪಿ ಮತ್ತು ಪಾಸ್‌ಪೋರ್ಟ್ ಶ್ರೇಯಾಂಕಗಳಲ್ಲಿ ಭಾರತದ ಸ್ಥಾನಮಾನದ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸಚಿವ ಸಂಪುಟ ವಿಸ್ತರಣೆ ಮತ್ತು ಮುಖ್ಯಮಂತ್ರಿಗಳ ಔತಣಕೂಟದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿ ವರ್ಷ ಔತಣಕೂಟ ಕರೆಯುವುದು ವಾಡಿಕೆ, ಇದೇನು ಹೊಸದಲ್ಲ. ಮಂತ್ರಿಮಂಡಲದ ವಿಸ್ತರಣೆ ಅಥವಾ ಪುನರ್ ರಚನೆಯಾಗುವುದು ಸಹಜ ಪ್ರಕ್ರಿಯೆ. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಇನ್ನು, ‘ಬಿಗ್‌ಬಾಸ್’ ಕಾರ್ಯಕ್ರಮದ ಕುರಿತು ಕೇಳಲಾದ ಪ್ರಶ್ನೆಗೆ, ಆ ಬಗ್ಗೆ ತಮಗೆ ಸಂಪೂರ್ಣ ಮಾಹಿತಿ ಇಲ್ಲ. ಅಲ್ಲಿ ಪರಿಸರ ಕ್ಲಿಯರೆನ್ಸ್ ಇರಲಿಲ್ಲ. ಆದರೆ, ಉಪಮುಖ್ಯಮಂತ್ರಿಗಳು ಒಂದು ವ್ಯವಸ್ಥೆಗೆ ತಂದಿದ್ದಾರೆ. ಉದ್ದೇಶಪೂರ್ವಕವಾಗಿ ನಾವು ಬಿಗ್‌ಬಾಸ್ ನಿಲ್ಲಿಸುವ ಅಗತ್ಯ ಇಲ್ಲ. ನೋಟಿಸ್‌ಗಳನ್ನು ನೀಡಲಾಗಿತ್ತು. ಡಿಕೆಶಿ ಅವರ ಮುಂದಾಳತ್ವದಲ್ಲಿ ಪರಿಸ್ಥಿತಿಯನ್ನು ಸಮಾಧಾನ ಮಾಡಿ ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು.
ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಗಣತಿ (ಜಾತಿ ಗಣತಿ) ಶೇಕಡಾ 80 ರಷ್ಟು ಪೂರ್ಣಗೊಂಡಿದೆ. ಇದು ಜಾತಿ ಗಣತಿಯಲ್ಲ. ಸಿದ್ದರಾಮಯ್ಯ ಅಥವಾ ಸರ್ಕಾರವು ಸಮಾಜವನ್ನು ಒಡೆದಿಲ್ಲ. ಕೇಂದ್ರ ಸರ್ಕಾರವೇ ಗಣತಿ ಮಾಡಲು ಹೊರಟಿದೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ಮೀಸಲಾತಿ ಕೊಟ್ಟಿದೆ. ಇದರ ವಿರುದ್ಧ ಯಾರಾದರೂ ಪ್ರತಿಭಟನೆ, ಹೋರಾಟ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಇದೇ ವೇಳೆ, ಕರ್ನಾಟಕದಲ್ಲಿ ಮಹಿಳೆಯರಿಗೆ ಒಂದು ವರ್ಷದಲ್ಲಿ 12 ದಿನಗಳ ಮುಟ್ಟಿನ ರಜೆ (Menstrual Leave) ನೀಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿರುವುದು ಪ್ರಗತಿಪರ ಮಸೂದೆಯಾಗಿದೆ ಎಂದು ಸಂತೋಷ್ ಲಾಡ್ ಹೇಳಿದರು. ಸೈಕಲ್ ಮೂಲಕ ಜಾಗೃತಿ ಮೂಡಿಸುತ್ತಿದ್ದ ಒರಿಸ್ಸಾದ ರಂಜಿತಾ ಪ್ರಿಯದರ್ಶಿನಿ ಅವರು ಕವಿತಾ ರೆಡ್ಡಿಯವರ ಜೊತೆ ಬಂದು ವರ್ಷದ ಹಿಂದೆ ಈ ಬಗ್ಗೆ ಪ್ರಸ್ತಾವ ಸಲ್ಲಿಸಿದ್ದರು. ಇದೀಗ ಕರ್ನಾಟಕ ಸರ್ಕಾರ ಒಮ್ಮತದಿಂದ ನಿರ್ಧಾರ ಕೈಗೊಂಡಿದೆ. ಇದರಿಂದ ಮಧ್ಯಮ, ಬಡ ಮಾಧ್ಯಮ ವರ್ಗದ ಬಹಳಷ್ಟು ಮಹಿಳೆಯರಿಗೆ ಅನುಕೂಲವಾಗಲಿದೆ.
ಗಾರ್ಮೆಂಟ್ ಇಂಡಸ್ಟ್ರಿ ಸೇರಿದಂತೆ ಸಣ್ಣ ಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದರು. ಮುಟ್ಟಿನ ಸಮಸ್ಯೆಯಿಂದ ಅನೇಕ ಮಹಿಳೆಯರು ಬಳಲುತ್ತಿದ್ದು, ಈ ಕುರಿತು ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚನೆ ಮಾಡಲಾಗಿತ್ತು. ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತದ ಕಾಂಗ್ರೆಸ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.