ಗಾಜಾ: ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 20,000ಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಅಂದರೆ, ಪ್ರತಿ 52 ನಿಮಿಷಗಳಿಗೊಮ್ಮೆ ಒಂದು ಮಗು ಸಾವಿಗೀಡಾಗಿದೆ.
12 ಲಕ್ಷಕ್ಕೂ ಹೆಚ್ಚು ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. 58,554 ಮಕ್ಕಳು ತಮ್ಮ ಅಂಗಗಳನ್ನು ಕಳೆದುಕೊಂಡು ಜೀವಂತ ಶವಗಳಾಗಿ (ಅಂಗವಿಕಲರಾಗಿ) ಉಳಿದಿದ್ದಾರೆ. 9,14,102 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಮತ್ತು 5,580 ಮಕ್ಕಳು ವೈದ್ಯಕೀಯ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ ಎಂದು ವರದಿಯಾಗಿದೆ.
20,179 ಅಮಾಯಕ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಮಕ್ಕಳಲ್ಲಿ 1,029 ಮಂದಿ ಒಂದು ವರ್ಷವೂ ತುಂಬದವರಾಗಿದ್ದರೆ, 5,031 ಮಂದಿ ಐದು ವರ್ಷದೊಳಗಿನವರಾಗಿದ್ದಾರೆ. 420 ನವಜಾತ ಶಿಶುಗಳು ಹುಟ್ಟಿದ ತಕ್ಷಣವೇ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಗಾಜಾದಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಪ್ರಕ್ರಿಯೆಯೂ ಸರಿಯಾಗಿ ನಡೆಯುತ್ತಿಲ್ಲ.
ಅಕ್ಟೋಬರ್ 7 ರ ವೇಳೆಗೆ ಗಾಜಾದಲ್ಲಿ ಒಟ್ಟು 7,67,173 ಜನರು ಸಾವಿಗೀಡಾಗಿದ್ದು, 1,69,780 ಜನರು ಗಾಯಗೊಂಡಿದ್ದಾರೆ. ಮೃತರ ಪೈಕಿ 30% ಮಕ್ಕಳು, 16% ಮಹಿಳೆಯರು, 7% ವೃದ್ಧರು ಮತ್ತು 47% ಪುರುಷರು ಇದ್ದಾರೆ. ಪ್ರತಿದಿನ ಕನಿಷ್ಠ 13 ಕುಟುಂಬಗಳು ನಿರ್ನಾಮವಾಗಿವೆ, ಒಟ್ಟಾರೆಯಾಗಿ 8,910 ಕುಟುಂಬಗಳು ಕಣ್ಮರೆಯಾಗಿವೆ.
ಪ್ರಸ್ತುತ ವರ್ಷದಲ್ಲಿ 4,163 ಗರ್ಭಪಾತಗಳು ಸಂಭವಿಸಿದ್ದು, 2,415 ಅಕಾಲಿಕ ಶಿಶುಗಳು ಜನಿಸಿವೆ. ನವಜಾತ ಶಿಶುಗಳಲ್ಲಿ 274 ಮಂದಿ ಸಾವನ್ನಪ್ಪಿದ್ದಾರೆ. ಈ ವರ್ಷ ಇಲ್ಲಿಯವರೆಗೆ 408 ಜನರು ಅಪೌಷ್ಟಿಕತೆಯಿಂದ ಮೃತಪಟ್ಟಿದ್ದು, ಇವರಲ್ಲಿ 34.1% ಮಕ್ಕಳು.