ಹಾಸನ: ಜಿಲ್ಲೆಯ ಹೊಂಗಡಹಳ್ಳ ಎನ್ನುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಇದರಲ್ಲಿ ಪಂಚಾಯತ್ ಸದಸ್ಯರ ಜಾತಿಗ್ರಸ್ಥ ಮನಸ್ಥಿತಿ ಹೊರಬಿದ್ದಿದೆ. ದಲಿತ ಮಹಿಳೆಯೋರ್ವರು ಅಧ್ಯಕ್ಷರಾಗಬಾರದು ಎನ್ನುವ ಕಾರಣಕ್ಕಾಗಿ ಈ ಪಂಚಾಯತಿಯ ಸದಸ್ಯರು ಚುನಾವಣೆಯಿಂದಲೇ ದೂರ ಉಳಿದಿರುವುದು ಇಂದು ವರದಿಯಾಗಿದೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ವನಜಾಕ್ಷಿಯವರೇ ಈ ತಾರತಮ್ಯಕ್ಕೆ ಬಲಿಯಾದ ಮಹಿಳೆ. ಹೊಂಗಡಹಳ್ಳ ಗ್ರಾಮಪಂಚಾಯ್ತಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ದಲಿತ ಮಹಿಳೆ ವನಜಾಕ್ಷಿ ಚುನಾವಣೆಗೆ ನಿಂತಿದ್ದರು. ಆದರೆ ಚುನಾವಣೆಗೆ ಸದಸ್ಯರು ಗೈರಾಗಿದ್ದನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ಅವರ ತಾನು ದಲಿತೆಯೆನ್ನುವ ಕಾರಣಕ್ಕೆ ಸದಸ್ಯರು ಚುನಾವಣೆಗೆ ಗೈರಾಗಿದ್ದಾರೆ ಎಂದು ಅಳಲು ತೋಡಿಕೊಂಡರು.
6 ಮಂದಿ ಗ್ರಾಮ ಪಂಚಾಯತಿ ಸದಸ್ಯರನ್ನು ಹೊಂದಿರುವ ಹೊಂಗಡಹಳ್ಳ ಗ್ರಾಮ ಪಂಚಾಯತಿಯ ಮುಂದಿನ ಎರಡುವರೆ ವರ್ಷದ ಅವಧಿಗೆ ಅಧ್ಯಕ್ಷರ ಸ್ಥಾನ ಎಸ್ಸಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಕ್ಯಾಟಗರಿಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ವನಜಾಕ್ಷಿ ಅರ್ಜಿ ಸಲ್ಲಿಸಿದ್ದರೆ, ಉಪಾಧ್ಯಕ್ಷರ ಸ್ಥಾನಕ್ಕೆ ಯಾವುದೇ ಉಮೇದುವಾರಿಕೆ ಬಂದಿರಲಿಲ್ಲ. ಅಲ್ಲದೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿದ್ದ ನಾಲ್ವರು ಸದಸ್ಯರು ಸಹ ಗೈರಾಗಿದ್ದರು. ಇದೆಲ್ಲದರಿಂದಾಗಿ ಕೋರಂ ಕೊರತೆ ಕಂಡುಬಂದಿದ್ದು ನಂತರ ಚುನಾವಣಾಧಿಕಾರಿ ಚುನಾವಣೆಯನ್ನು ಫೆಬ್ರವರಿ ಹನ್ನೆರಡಕ್ಕೆ ಮುಂದೂಡಿದರು.
ಈ ಬೆಳವಣಿಗೆಗಳಿಂದ ಕಂಗೆಟ್ಟ ವನಜಾಕ್ಷಿ ಕಣ್ಣೀರಿಡುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.
ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿ ಮಾಧ್ಯಮದವರ ಜೊತೆ ಮಾತನಾಡಿದ ಚುನಾವಣಾ ಅಧಿಕಾರಿ ಅದಿತ್ಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸದಸ್ಯೆ ವನಜಾಕ್ಷಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಆರು ಜನ ಸದ್ಯಸರಲ್ಲಿ ಕೋರಂಗಾಗಿ ಮೂವರು ಸದಸ್ಯರ ಅಗತ್ಯವಿತ್ತು. ಆದರೆ ಇಬ್ಬರು ಮಾತ್ರ ಹಾಜರಿದ್ದ ಕಾರಣ, ಅರ್ಧಗಂಟೆಗಳ ಕಾಲ ಹೆಚ್ಚುವರಿಯಾಗಿ ಸಮಯ ನೀಡಲಾಯಿತು. ಈ ಅವಧಿಯಲ್ಲೂ ಉಳಿದ ಸದಸ್ಯರು ಹಾಜರಾಗದ ಕಾರಣ ಚುನಾವಣೆ ನಡೆದಿಲ್ಲ. ಸೋಮವಾರ ಮತ್ತೆ ಸಭೆ ನಡೆಯಲಿದ್ದು, ಈ ವೇಳೆ ಅಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಲಾಗುವುದು. ಇದೇವೇಳೆ ಉಪಾಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿಯೋಜಿತ ಗ್ರಾಪಂ ಅಧ್ಯಕ್ಷೆ ವನಜಾಕ್ಷಿ, ನಾನು ಗ್ರಾಪಂ ಅಧ್ಯಕ್ಷೆಯಾಗಿ ಗುರುವಾರ ಅಧಿಕೃತ ಘೋಷಣೆ ಆಗಬೇಕಾಗಿತ್ತು ಇದಕ್ಕೆ ಅಡಚಣೆ ಆಗಿದ್ದು ನನ್ನ ಜೊತೆ ಸದಸ್ಯರಾಗಿರುವವರ ಅಸಹಕಾರ ನಾನು ದಲಿತ ಮಹಿಳೆ ಆಗಿರುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಕಣ್ಣೀರಿಟ್ಟರು.