ಅರಣ್ಯ ಪ್ರದೇಶದಲ್ಲಿ ಜಾನುವಾರು ಮೇಯಿಸಲು ಅರಣ್ಯ ಪ್ರದೇಶ ಅವಲಂಬಿಸುವಂತಿಲ್ಲ ಎಂಬ ಸಚಿವ ಈಶ್ವರ್ ಖಂಡ್ರೆ ಹೇಳಿಕೆಗೆ ತೀವ್ರ ವಿರೋಧ ಬಂದ ಹಿನ್ನೆಲೆಯಲ್ಲಿ ಸಚಿವರು ತಮ್ಮ ಹೇಳಿಕೆಗೆ ಕೊಂಚ ಬದಲಾವಣೆ ತಂದಿದ್ದಾರೆ. ನೂರಾರು ವರ್ಷಗಳಿಂದ ಕಾಡನ್ನೇ ಅವಲಂಬಿಸಿಕೊಂಡು ಬಂದಂತಹ ರೈತ ಸಮುದಾಯ ಹೊರತುಪಡಿಸಿ, ಮೀಸಲು ಅರಣ್ಯ, ವನ್ಯಜೀವಿಧಾಮ, ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಜನರ ಅತಿಕ್ರಮ ಪ್ರವೇಶಕ್ಕೆ ಮತ್ತು ಸಾಕುಪ್ರಾಣಿಗಳನ್ನು ಮೇಯಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಜಾನುವಾರು ತಿಂದ ಹುಲಿಗಳಿಗೆ ವಿಷ ಇಟ್ಟು ಕೊಂದ ಘಟನೆ ಬೆನ್ನಲ್ಲೇ ಸಚಿವ ಈಶ್ವರ್ ಖಂಡ್ರೆ ಈ ಹೇಳಿಕೆ ನೀಡಿದ್ದರು. ಇದು ಎಲ್ಲೆಡೆ ತೀವ್ರ ಟೀಕೆಗೆ ಗುರಿಯಾಗಿತ್ತು. ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಅಡಿಯಲ್ಲಿ ಮೀಸಲು ಅರಣ್ಯ, ವನ್ಯಜೀವಿಧಾಮ, ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಜನರ ಅತಿಕ್ರಮ ಪ್ರವೇಶಕ್ಕೆ ಮತ್ತು ಸಾಕುಪ್ರಾಣಿಗಳನ್ನು ಮೇಯಿಸಲು ಅವಕಾಶ ಇರುವುದಿಲ್ಲ ಎಂದು ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಕೆಲವು ಅರಣ್ಯ ಭಾಗದಲ್ಲಿ ಹಲವು ವರ್ಷದಿಂದ ಇಂತಹ ರೂಢಿ ಇದ್ದು, ಕಾಡಿನಂಚಿನ ಜನರಿಗೆ ಜಾಗೃತಿ ಮೂಡಿಸಿ, ಅವರಿಗೆ ಹೆಚ್ಚು ಹಾಲು ನೀಡುವ ಹಸುಗಳನ್ನು ಹೊಂದಲು ಅವಕಾಶ ಕಲ್ಪಿಸುವ ಮೂಲಕ ಮತ್ತು ತಮ್ಮ ಪಟ್ಟಾ ಜಮೀನಿನಲ್ಲಿ ಹಸಿ ಮೇವು ಬೆಳೆಸಲು ಪ್ರೋತ್ಸಾಹಿಸುವ ಮೂಲಕ ಹಂತ ಹಂತವಾಗಿ ಅರಣ್ಯದಲ್ಲಿ ಜಾನುವಾರುಗಳನ್ನು ಬಿಡದಂತೆ ನಿರ್ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಸುಮಾರು 33 ಸಾವಿರ ದನಕರುಗಳಿವೆ ಎಂದು ಪಶುಸಂಗೋಪನಾ ಇಲಾಖೆ ಅಂಕಿ ಅಂಶ ತಿಳಿಸುತ್ತದೆ. ಇಷ್ಟೊಂದು ದನಕರುಗಳನ್ನು ಒಟ್ಟಿಗೆ ಕಾಡಿಗೆ ತೆಗೆದುಕೊಂಡು ಹೋಗುವುದರಿಂದ ವನ್ಯಜೀವಿಗಳಾದ ಆನೆ, ಕಾಡೆಮ್ಮೆ, ಕಾಡುಕೋಣ, ಜಿಂಕೆ, ಕಡವೆ ಇತ್ಯಾದಿಗಳಿಗೆ ಮೇವಿನ ಕೊರತೆ, ನೀರಿನ ಕೊರತೆ ಎದುರಾಗುತ್ತಿದೆ. ಕಾಲುಬಾಯಿ ರೋಗ, ಚರ್ಮಗಂಟು ಅಥವಾ ಬಾವು (ಲಿಂಪಿ ಸ್ಕಿನ್), ನೆರಡಿ (ಆಂಥರಾಕ್ಸ್) ಮೊದಲಾದ ಸಾಂಕ್ರಾಮಿಕ ಕಾಯಿಲೆಗಳು ವನ್ಯಜೀವಿಗಳಿಗೂ ಹಬ್ಬುವ ಅಪಾಯ ಇರುತ್ತದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಕಾನೂನು ರೀತ್ಯ ಜಾನುವಾರುಗಳನ್ನು ಕಾಡಿನಲ್ಲಿ ಮೇಯಿಸುವುದನ್ನು ನಿಷೇಧಿಸಲು ಸೂಚಿಸಲಾಗಿದೆ. ಆದರೆ ಸ್ಥಳೀಯರ ದನಕರುಗಳಿಗೆ ಮತ್ತು ಅರಣ್ಯಹಕ್ಕು ಕಾಯಿದೆಯಡಿ ಹಕ್ಕು ಪಡೆದವರಿಗೆ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಈಗಾಗಲೇ ಅರಣ್ಯ ಇಲಾಖೆ, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ಬಳಸಿಕೊಂಡು 10-15 ರೈತರಿಗೆ ಹೆಚ್ಚು ಹಾಲು ನೀಡುವ ಹೈಬ್ರೀಡ್ ಹಸುಗಳನ್ನು ಕೊಡಿಸಿದ್ದಾರೆ. ಪ್ರಸ್ತುತ ಕಾಡಿನಲ್ಲಿ ದನ ಮೇಯಿಸುವ ಕಾಯಕವನ್ನೇ ಜೀವನೋಪಾಯ ಮಾಡಿಕೊಂಡಿರುವವರಿಗೆ ಇಂತಹ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಹಂತ ಹಂತವಾಗಿ ಕಾಡಿನಲ್ಲಿ ದನ, ಕರು, ಎಮ್ಮೆ, ಮೇಕೆ, ಕುರಿಗಳನ್ನು ಮೇಯಿಸದಂತೆ ಮನವೊಲಿಸಲಾಗುವುದು ಎಂದೂ ತಿಳಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ ನಲ್ಲಿ ಈ ಸಂಬಂಧ ಸುದೀರ್ಘ ವಾದ ಪ್ರತಿವಾದ ನಡೆದು, ಅಂತಿಮವಾಗಿ ತಮಿಳುನಾಡಿನ ಅರಣ್ಯಗಳಲ್ಲಿ ಜಾನುವಾರು ಮೇಯಿಸಲು ಅವಕಾಶ ಇರುವುದಿಲ್ಲ ಎಂಬ ತೀರ್ಪು ಬಂದಿದೆ. ಆ ತೀರ್ಪಿನ ಬಳಿಕ ರಾಜ್ಯಕ್ಕೆ ನೆರೆ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಜಾನುವಾರು ತಂದು ರಾಜ್ಯದ ಕಾಡಿನಲ್ಲಿ ಮೇಯಿಸಲಾಗುತ್ತಿದೆ. ತಿಂಗಳುಗಟ್ಟಲೆ ಹೀಗೆ ಕಾಡಿನಲ್ಲಿ ದನಕರು ಮೇಯಿಸುವುದರಿಂದ ಕಾಡಿನ ಹುಲ್ಲುಗಾವಲು ಬರಿದಾಗುತ್ತಿದೆ, ಸಸ್ಯಸಂವರ್ಧನೆಗೂ ಅಡ್ಡಿಯಾಗುತ್ತದೆ. ಜೊತೆಗೆ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಇದು ವನ್ಯಜೀವಿಗಳಿಗೆ ವಿಷ ಹಾಕುವ ಹಂತ ತಲುಪಿದ್ದ ಹಿನ್ನೆಲೆಯಲ್ಲಿ ಕಾನೂನು ರೀತ್ಯ ಮತ್ತು ನಿಯಮಾನುಸಾರ ಕ್ರಮ ವಹಿಸಲು ಸೂಚಿಸಲಾಗಿತ್ತು ಎಂದೂ ತಿಳಿಸಿದ್ದಾರೆ.