ಸಿಬಿಎಸ್‌ಇ ಮರುಮೌಲ್ಯಮಾಪನ ಪೋರ್ಟಲ್ ಹ್ಯಾಕ್ ಮಾಡಿರುವುದಾಗಿ ಘೋಷಿಸಿದ ಯುವಕ: ನಿರಾಕರಿಸಿದ ಮಂಡಳಿ

ದೆಹಲಿ: ದೇಶಾದ್ಯಂತ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಸಿಬಿಎಸ್‌ಇ (CBSE) ಮಂಡಳಿಯ ಮರುಮೌಲ್ಯಮಾಪನ (Revaluation) ಪೋರ್ಟಲ್ ಹ್ಯಾಕ್ ಆಗಿದೆ ಎಂಬ ಸುದ್ದಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಭಾರಿ ಆತಂಕ ಮೂಡಿಸಿದೆ. 19 ವರ್ಷದ ಯುವಕನೊಬ್ಬ ತಾನು ಈ ಪೋರ್ಟಲ್ ಹ್ಯಾಕ್ ಮಾಡಿರುವುದಾಗಿ ಘೋಷಿಸಿಕೊಂಡಿದ್ದರಿಂದ ಭಾರಿ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಸಿಬಿಎಸ್‌ಇ ಮಂಡಳಿಯು ಹ್ಯಾಕ್ ಆಗಿರುವುದು ಕೇವಲ ‘ಡಮ್ಮಿ ಪೋರ್ಟಲ್’ ಎಂದು ಸ್ಪಷ್ಟನೆ ನೀಡಿದೆ.

ಕಳೆದ ಕೆಲವು ದಿನಗಳಿಂದ ಸಿಬಿಎಸ್‌ಇ ಪರೀಕ್ಷೆಯ ಮರುಮೌಲ್ಯಮಾಪನ ಪೋರ್ಟಲ್ ತಾಂತ್ರಿಕ ದೋಷಗಳಿಂದಾಗಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಪೋರ್ಟಲ್ ಕ್ರ್ಯಾಶ್ ಆಗುವುದು ಮತ್ತು ಉತ್ತರ ಪತ್ರಿಕೆಗಳು ಸ್ಪಷ್ಟವಾಗಿ ಕಾಣಿಸದೆ ಬ್ಲರ್ (Blur) ಆಗುತ್ತಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇಂತಹ ಸೂಕ್ಷ್ಮ ಸಮಯದಲ್ಲಿ, 19 ವರ್ಷದ ಸೈಬರ್ ಭದ್ರತಾ ಸಂಶೋಧಕ (Researcher) ನಿಸರ್ಗ ಅಧಿಕಾರಿ ಎಂಬಾತ ತಾನು ಸಿಬಿಎಸ್‌ಇಯ ‘ಆನ್-ಸ್ಕ್ರೀನ್ ಮಾರ್ಕಿಂಗ್ ಪೋರ್ಟಲ್’ ಅನ್ನು ಹ್ಯಾಕ್ ಮಾಡಿರುವುದಾಗಿ ಬಹಿರಂಗಪಡಿಸಿದ್ದ. ಅಷ್ಟೇ ಅಲ್ಲದೆ, ಈ ಭದ್ರತಾ ಲೋಪದ ಕುರಿತು ತಾನು ಕಳೆದ ಫೆಬ್ರವರಿ ತಿಂಗಳಿನಲ್ಲೇ ಸಿಬಿಎಸ್‌ಇ ಮಂಡಳಿಯನ್ನು ಎಚ್ಚರಿಸಿದ್ದಾಗಿಯೂ ಆತ ಹೇಳಿಕೊಂಡಿದ್ದ.

ಅದು ಕೇವಲ ಟೆಸ್ಟಿಂಗ್ ಪ್ಲಾಟ್‌ಫಾರ್ಮ್: ಸಿಬಿಎಸ್‌ಇ ಸ್ಪಷ್ಟನೆ

ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಿಬಿಎಸ್‌ಇ ಬೋರ್ಡ್ ಭಿನ್ನ ಹೇಳಿಕೆ ನೀಡಿದೆ. ಹ್ಯಾಕರ್ ಟಾರ್ಗೆಟ್ ಮಾಡಿರುವುದು ಮಂಡಳಿಯ ಅಧಿಕೃತ ಪೋರ್ಟಲ್ ಅನ್ನಲ್ಲ, ಬದಲಿಗೆ ಕೇವಲ ಒಂದು ‘ಡಮ್ಮಿ ಪೋರ್ಟಲ್’ ಅನ್ನು ಎಂದು ಇಲಾಖೆ ತಿಳಿಸಿದೆ. ವಿದ್ಯಾರ್ಥಿಗಳ ಮರುಮೌಲ್ಯಮಾಪನಕ್ಕಾಗಿ ಬಳಸಲಾದ ಅಸಲಿ ಪೋರ್ಟಲ್ ಅತ್ಯಂತ ಸುರಕ್ಷಿತವಾಗಿದ್ದು, ಅದನ್ನು ಯಾರೂ ಹ್ಯಾಕ್ ಮಾಡಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಕೇವಲ ಟೆಸ್ಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ (Testing Platform) ಪ್ರಾಯೋಗಿಕವಾಗಿ ಇರಿಸಲಾಗಿದ್ದ ಮಾದರಿ ದತ್ತಾಂಶವನ್ನು (Sample Data) ನಿಸರ್ಗ ಅಧಿಕಾರಿ ತನ್ನ ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾನೆ ವಿನಃ, ಅದರಲ್ಲಿ ಯಾವುದೇ ಅಧಿಕೃತ ಅಥವಾ ಗೋಪ್ಯ ಮಾಹಿತಿ ಇರಲಿಲ್ಲ ಎಂದು ಬೋರ್ಡ್ ಹೇಳಿದೆ. ಆದಾಗ್ಯೂ, ಈ ಭದ್ರತಾ ಲೋಪದ ಸಂಗತಿಯನ್ನು ಮಂಡಳಿಯು ಗಂಭೀರವಾಗಿ ಪರಿಗಣಿಸಿದ್ದು, ಈ ವಿಷಯದ ಕುರಿತು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು