ಬೆಂಗಳೂರು: ನಗರದ ಹಳೆ ಮದ್ರಾಸ್ ರಸ್ತೆಯಲ್ಲಿರುವ ಸ್ಪಾ ಕೇಂದ್ರದ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ದಾಳಿ ನಡೆಸಿದ ಒಂದು ದಿನದ ನಂತರ, ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಘಟನೆಯ ಕುರಿತು ಮಾರತ್ತಹಳ್ಳಿ ಸಹಾಯಕ ಪೊಲೀಸ್ ಆಯುಕ್ತರಿಂದ (ಎಸಿಪಿ) ವಿವರವಾದ ವರದಿ ಕೇಳಿದ್ದಾರೆ. ದಾಳಿ ವೇಳೆ ಅಧಿಕಾರಿಗಳು 44 ಮಹಿಳೆಯರನ್ನು ರಕ್ಷಿಸಿದ್ದು, 34 ಗ್ರಾಹಕರನ್ನು ವಶಕ್ಕೆ ಪಡೆಯಲಾಗಿದೆ. ಸ್ಪಾನಲ್ಲಿ ಮಾಂಸದ ದಂಧೆ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ಸುಳಿವಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಭಾನುವಾರ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಹುಮಹಡಿ ನಿರ್ವಾಣ ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಿ ಅಕ್ರಮ ಚಟುವಟಿಕೆಗಳ ಆರೋಪದಡಿ ಮಾಲೀಕ ಅನಿಲ್ ನನ್ನು ಬಂಧಿಸಿದ್ದಾರೆ.
ಸ್ಪಾವು ಕ್ರಾಸ್-ಬಾಡಿ ಮಸಾಜ್‌ಗಳನ್ನು ನೀಡುತ್ತಿದೆ ಮತ್ತು ವೇಶ್ಯಾವಾಟಿಕೆ ಸೇರಿದಂತೆ ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ವರದಿಯಾಗಿದೆ. ದಾಳಿ ವೇಳೆ ವಿವಿಧ ರಾಜ್ಯಗಳ 44 ಮಹಿಳೆಯರು ಮತ್ತು ವಿದೇಶದಿಂದ ಬಂದ ಕೆಲವರನ್ನು ರಕ್ಷಿಸಲಾಗಿದೆ. ಸಿಸಿಬಿ ಸ್ಪಾ ಮಾಲೀಕ ಅನಿಲ್ ನನ್ನು ಬಂಧಿಸಿ ಆತನ ದುಬಾರಿ ಬೆಲೆಯ ಮರ್ಸಿಡಿಸ್ ಮೇಬ್ಯಾಕ್ ವಶಪಡಿಸಿಕೊಂಡಿದೆ.
ದಾಳಿಯ ನಂತರ, ಪೊಲೀಸ್ ಆಯುಕ್ತರು ಇದೀಗ ಸ್ಪಾನಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಮತ್ತು ಅದರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಮಾರತ್ತಹಳ್ಳಿ ವಿಭಾಗದ ಎಸಿಪಿ ಅವರಿಂದ ವರದಿ ಕೇಳಿದ್ದಾರೆ.
ಸ್ಪಾ ಮಾಲೀಕರ ವಿರುದ್ಧ ಅತ್ಯಾಚಾರ ಪ್ರಕರಣ
ತನಿಖೆಯ ವೇಳೆ ನಿರ್ವಾಣ ಸ್ಪಾ ಮಾಲೀಕ ಅನಿಲ್ ತನ್ನ ಬಳಿ ಕೆಲಸ ಮಾಡುತ್ತಿದ್ದ ಮಹಿಳೆಯಿಂದ ಅತ್ಯಾಚಾರದ ಆರೋಪ ಎದುರಿಸುತ್ತಿರುವುದನ್ನು ಸಿಸಿಬಿ ಪೊಲೀಸರು ಕಂಡುಕೊಂಡಿದ್ದಾರೆ. ಅನಿಲ್ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಿಲ್ ಸ್ಪಾನಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರುದಾರ
ಆರೋಪಿಸಿದ್ದರು. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಎರಡು ತಿಂಗಳ ಹಿಂದೆ ಸ್ಪಾಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಪೊಲೀಸರಿಗೆ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗದಿರುವುದು ಪೊಲೀಸರ ತನಿಖೆಯಲ್ಲಿ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಅತ್ಯಾಚಾರ ಪ್ರಕರಣದ ದೂರುದಾರರನ್ನು ಈ ಹಿಂದೆ ಉತ್ತರ ಪ್ರದೇಶ ಪೊಲೀಸರು ಹನಿ ಟ್ರ್ಯಾಪ್ ಪ್ರಕರಣದಲ್ಲಿ ಬಂಧಿಸಿದ್ದರು. ಜಾಮೀನಿನ ಮೇಲೆ ಹೊರಬಂದ ನಂತರ ಆಕೆ ತನ್ನ ನೆಲೆಯನ್ನು ಬೆಂಗಳೂರಿಗೆ ಬದಲಾಯಿಸಿ ನಿರ್ವಾಣ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದಳು.