ರಾಂಚಿ: ಭಾರತದಲ್ಲಿ ಬಳಸಲಾಗುವ ಇವಿಎಂಗಳು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಅವುಗಳನ್ನುಟ್ಯಾಂಪರ್ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಅವರು ಭಾನುವಾರ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. “ಭಾರತದಲ್ಲಿ ಬಳಸಲಾಗುವ ಎಲೆಕ್ಟ್ರಾನಿಕ್ ಮತಯಂತ್ರಗಳು (ಇವಿಎಂಗಳು) ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತವೆ. ಇವು ಇಂಟರ್ನೆಟ್, ಬ್ಲೂಟೂತ್ ಅಥವಾ ಇನ್ಫ್ರಾರೆಡ್ ಸಂಪರ್ಕ ಹೊಂದಿಲ್ಲ. ಆದ್ದರಿಂದ, ಅವುಗಳನ್ನು ಹ್ಯಾಕ್ ಮಾಡಲು ಅಥವಾ ಟ್ಯಾಂಪರಿಂಗ್ ಮಾಡಲು ಸಾಧ್ಯವಿಲ್ಲ.
ನೀವು ಮತ ಚಲಾಯಿಸಿದಾಗ, ನಿಮಗೆ VVPAT ಸ್ಲಿಪ್ ಸಿಗುತ್ತದೆ. ಇಲ್ಲಿಯವರೆಗೆ, ಇವಿಎಂಗಳಲ್ಲಿ ದಾಖಲಾದ ಮತಗಳು ಮತ್ತು ವಿವಿಪ್ಯಾಟ್‌ಗಳಲ್ಲಿ ಬಂದ ಸ್ಲಿಪ್‌ಗಳ ನಡುವೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಇದಲ್ಲದೆ, ಭಾರತದ ಚುನಾವಣಾ ಆಯೋಗವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಪೂರ್ಣ ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತದೆ” ಎಂದು ಅವರು ಹೇಳಿದರು.
ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಮತ್ತು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರು ಇವಿಎಂಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.