ಸಕಲೇಶಪುರ: ಸಕಲೇಶಪುರ-ಆಲೂರು ಕ್ಷೇತ್ರದ ಬಿಜೆಪಿ ಶಾಸಕ ಸಿಮೆಂಟ್ ಮಂಜು ವಿರುದ್ಧ ಅದೇ ಕ್ಷೇತ್ರದ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಅತ್ಯಂತ ಗಂಭೀರ ಹಾಗೂ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. “ಅಡ್ಡ ಮತದಾನ ಮಾಡಲು ಇವರಿಗೆ ಐದು, ಆರು, ಹತ್ತು ಕೋಟಿ ರೂಪಾಯಿ ಕೊಡಲಾಗಿದೆ. ದೊಡ್ಡ ದುಡ್ಡು ಸಿಕ್ಕಿದ್ದಕ್ಕೆ ಶಾಸಕ ಸ್ಥಾನವನ್ನೇ ಮಾರಿಕೊಂಡಿದ್ದಾರೆ” ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಸಕಲೇಶಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರ ವಿರುದ್ಧ ಭ್ರಷ್ಟಾಚಾರ, ಮರಳು ಲೂಟಿ ಹಾಗೂ ಕಾಡುಪ್ರಾಣಿಗಳ ಶಿಕಾರಿ ಸೇರಿದಂತೆ ಸಾಲು ಸಾಲು ಆರೋಪಗಳ ಪಟ್ಟಿಯನ್ನೇ ಬಿಚ್ಚಿಟ್ಟಿದ್ದಾರೆ.
10% ಕಮಿಷನ್ ಗಲಾಟೆಗೆ 18 ಕೆಲಸಗಳು ಸ್ಥಗಿತ
ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾಮಗಾರಿಗಳಲ್ಲೂ ಶಾಸಕರು ಶೇಕಡಾ 10 ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ ವಿಶ್ವನಾಥ್, “ಜೆಜೆಎಂ (ಜಲ ಜೀವನ್ ಮಿಷನ್) ಯೋಜನೆಯಲ್ಲಿ ದೊಡ್ಡ ಮಟ್ಟದ ಲೂಟಿ ನಡೆದಿದೆ. ಶಾಸಕರ ಪರ್ಸೆಂಟೇಜ್ ಗಲಾಟೆಯಿಂದಾಗಿಯೇ ಸದ್ಯ ಕ್ಷೇತ್ರದಲ್ಲಿ 18 ಪ್ರಮುಖ ಕಾಮಗಾರಿಗಳು ಸ್ಥಗಿತಗೊಂಡಿವೆ. ಆ ಎಂಜಲು ಕಾಸಿಗೆ ಇವರು ಆಸೆ ಪಡಬೇಕಾ?” ಎಂದು ಪ್ರಶ್ನಿಸಿದ್ದಾರೆ. ಮರಳು ಲೂಟಿಗೆ ಸಹೋದರರ ನೇಮಕ; ಕಾಡೆಮ್ಮೆ ಮಾಂಸ ದಂಧೆ!
“ಕಳೆದ ನಾಲ್ಕು ವರ್ಷಗಳಿಂದ ಹೇಮಾವತಿ ನದಿಯಿಂದ ಮರಳನ್ನು ಲೂಟಿ ಮಾಡಲಾಗುತ್ತಿದೆ. ಈ ಹಿಂದೆ ಇದ್ದ ಶಾಸಕರು ಬೇಡ ಎಂದು ಮರಳು ದಂಧೆ ನಿಲ್ಲಿಸಿದ್ದರು, ಆದರೆ ಇವರು ಮತ್ತೆ ಅದೇ ಲೂಟಿ ಆರಂಭಿಸಿದ್ದಾರೆ. ಮರಳು ದಂಧೆಯನ್ನು ಮುನ್ನಡೆಸಲು ಶಾಸಕರು ತಮ್ಮ ಸ್ವಂತ ಸಹೋದರರನ್ನೇ ನೇಮಿಸಿದ್ದಾರೆ” ಎಂದು ಆರೋಪಿಸಿದರು.ಇಷ್ಟಕ್ಕೇ ನಿಲ್ಲಿಸದ ಹೆಚ್.ಎಂ. ವಿಶ್ವನಾಥ್, “ಕ್ಷೇತ್ರದಲ್ಲಿ ಕಾಡೆಮ್ಮೆಗಳನ್ನು ಕಡಿದು, ಅದರ ಮಾಂಸವನ್ನು ಪ್ರತಿ ಕೆಜಿಗೆ 2,000 ರೂಪಾಯಿಯಂತೆ ಮಾರಾಟ ಮಾಡುವ ದಂಧೆ ನಡೆಯುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಶಾಸಕರ ಧ್ವನಿ ಎಲ್ಲಿ ಹೋಗಿದೆ?” ಎಂದು ಆಕ್ರೋಶ ಹೊರಹಾಕಿದರು.
