ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಭಾರತದಲ್ಲಿರುವ ಎಲ್ಲಾ ಪಾಕ್ ಪ್ರಜೆಗಳಿಗೆ ದೇಶ ತೊರೆಯಲು 48 ಗಂಟೆಗಳ ಗಡುವು ನೀಡಲಾಗಿದೆ. ಇದರ ಜೊತೆಗೆ ಬುಧವಾರ ನಡೆದ ಸರ್ಕಾರದ ಉನ್ನತ ಮಟ್ಟದ ಸಭೆಯ ನಂತರ ಗುರುವಾರ ಸರ್ವಪಕ್ಷಗಳ ಸಭೆ ಕರೆಯಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆ, ಸಂಜೆ 6 ಗಂಟೆಗೆ ಪ್ರಾರಂಭವಾಗಲಿದ್ದು, ಎಲ್ಲಾ ವಿಪಕ್ಷ ಮತ್ತು ಸರ್ಕಾರದ ಮಿತ್ರಪಕ್ಷಗಳಿಗೂ ಆಹ್ವಾನಿಸಲಾಗಿದೆ. ಸಧ್ಯ ಈ ಘಟನೆಯನ್ನು ಎಲ್ಲಾ ಪಕ್ಷಗಳು ಒಕ್ಕೊರಲಿನಿಂದ ಖಂಡಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ. ಮೂಲಗಳ ಪ್ರಕಾರ, ಸಭೆಯಲ್ಲಿ ಹಲವಾರು ಕ್ಯಾಬಿನೆಟ್ ಮಂತ್ರಿಗಳು ಹಾಜರಾಗುವ ನಿರೀಕ್ಷೆಯಿದೆ. ಸಂಜೆ 6 ಗಂಟೆಗೆ ಸಂಸತ್ತಿನ ಅನೆಕ್ಸ್ ಹಾಲಿನಲ್ಲಿ ಈ ಸಭೆ ಕರೆಯಲಾಗಿದೆ.
ಪ್ರಮುಖವಾಗಿ ಸಭೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರು ಸಭೆಯ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಮಾತನಾಡಿದ್ದಾರೆ. ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪಕ್ಷಾತೀತವಾಗಿ ನಾಯಕರು ಖಂಡಿಸಿದ್ದಾರೆ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಕ್ಯಾಬಿನೆಟ್ ಸಮಿತಿಯ (ಸಿಸಿಎಸ್) 2.5 ಗಂಟೆಗಳ ಸುದೀರ್ಘ ಸಭೆ ನಡೆಸಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.