ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 7 ಪಾಲಿಕೆಯ ಒಳಗೆ ವಿಭಜಿಸಿ ನಗರ ಪಾಲಿಕೆ ರಚನೆಗೆ ಸರ್ಕಾರ ರೂಪಿಸಿದ್ದ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024’ಕ್ಕೆ ರಾಜ್ಯಪಾಲರ ಅಂಕಿತ ಸಿಕ್ಕ ಹಿನ್ನೆಲೆಯಲ್ಲಿ ಪಾಲಿಕೆ ವಿಭಜನೆಗೆ ಇನ್ನು ಕ್ಷಣಗಣನೆ ಆರಂಭವಾಗಿದೆ.
ವಿಧಾನಸಭೆಯಲ್ಲಿ ವಿಧೇಯಕವನ್ನು ಸರ್ಕಾರ ಮಂಡಿಸಿದಾಗ ಬೆಂಗಳೂರಿನ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಂತರ ಜಂಟಿ ಆಯ್ಕೆ ಸಮಿತಿಗೆ ಇದನ್ನು ವಹಿಸಲಾಗಿತ್ತು. ಈ ಸಮಿತಿಯ ಶಿಫಾರಸುಗಳೊಂದಿಗೆ ತಿದ್ದುಪಡಿಯ ರೂಪದಲ್ಲಿ ಮಂಡನೆಯಾದ ವಿಧೇಯಕವನ್ನು ಮಾರ್ಚ್ ನಲ್ಲಿ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗಿತ್ತು.
ಸಧ್ಯ ಈ ವಿಧೇಯಕದಲ್ಲಿ ಹಲವು ಲೋಪಗಳು ಕಂಡ ಹಿನ್ನೆಲೆಯಲ್ಲಿ ರಾಜ್ಯಪಾಲರು ಮತ್ತೊಮ್ಮೆ ಪುನರ್ ಪರಿಶೀಲನೆಗೆ ನೀಡಿದ್ದರು. ಸರ್ಕಾರದಿಂದ ನಡೆದ ಪುನರ್ ಪರಿಶೀಲನೆ ಮತ್ತು ಸ್ಪಷ್ಟನೆಯ ನಂತರ ಈಗ ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರದೇಶದ ಅಭಿವೃದ್ಧಿಯ ಸಮನ್ವಯ ಮತ್ತು ಮೇಲ್ವಿಚಾರಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ, ಗರಿಷ್ಠ 7 ನಗರ ಪಾಲಿಕೆಗಾಗಿ ವಿಭಜಿಸುವ ಅವಕಾಶ, ವಾರ್ಡ್ ಸಮಿತಿಗಳನ್ನು ನಗರಾಡಳಿತದ ಮೂಲ ಘಟಕಗಳನ್ನಾಗಿಸುವುದನ್ನು ಈ ವಿಧೇಧಯಕ ಒಳಗೊಂಡಿದೆ. ಈ ಹೊಸ ಕಾಯ್ದೆಗೆ ರಾಜ್ಯ ಸರ್ಕಾರ ರಾಜ್ಯ ಪತ್ರ ಪ್ರಕಟಿಸಲಿದೆ.