ನವದೆಹಲಿ : ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳ (Aravalli Range) ವ್ಯಾಖ್ಯಾನದ ಕುರಿತು ಇತ್ತೀಚೆಗೆ ಘೋಷಿಸಲಾದ ಹೊಸ ನಿಯಮಗಳ ವಿವಾದದ ನಡುವೆ ಕೇಂದ್ರ ಸರ್ಕಾರ (Central Govt) ಅರಾವಳಿ ಪರ್ವತಗಳ ಸಾಲಿನಲ್ಲಿ ಹೊಸದಾಗಿ ಗಣಿಗಾರಿಕೆ (Mining) ಗುತ್ತಿಗೆಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಆದೇಶ ಹೊರಡಿಸಿದೆ. ಇದು ಅರಾವಳಿ ಪರ್ವತಗಳನ್ನು ಗಣಿಗಾರಿಕೆ ಕೊಲ್ಲುತ್ತಿದೆ ಎಂಬ ಪರಿಸರವಾದಿಗಳ ಆತಂಕ ಈಗ ದೂರವಾಗಿಸಿದೆ.
ದೆಹಲಿಯಿಂದ ಗುಜರಾತ್‌ವರೆಗೆ ವ್ಯಾಪಿಸಿರುವ ಸಂಪೂರ್ಣ ಅರಾವಳಿ ಶ್ರೇಣಿಯ ಸಂರಕ್ಷಣೆಯತ್ತ ಒಂದು ಪ್ರಮುಖ ಹೆಜ್ಜೆಯಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅರಾವಳಿ ಶ್ರೇಣಿಯಲ್ಲಿ ಯಾವುದೇ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲು ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಿದೆ. ಈ ನಿಷೇಧ ಇಡೀ ಅರಾವಳಿ ಭೂದೃಶ್ಯದಾದ್ಯಂತ ಏಕರೂಪವಾಗಿ ಅನ್ವಯಿಸುತ್ತದೆ ಮತ್ತು ಶ್ರೇಣಿಯ ಸಮಗ್ರತೆಯನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಗುಜರಾತ್‌ನಿಂದ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ವರೆಗೆ ವಿಸ್ತರಿಸಿರುವ ಅರಾವಳಿಗಳನ್ನು, ನಿರಂತರ ಭೂವೈಜ್ಞಾನಿಕ ಪರ್ವತ ಶ್ರೇಣಿಯಾಗಿ ರಕ್ಷಿಸುವುದು ಮತ್ತು ಎಲ್ಲಾ ಅನಿಯಂತ್ರಿತ ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸುವುದು ಹೊಸದಾಗಿ ಜಾರಿ ಮಾಡಲಾದ ನಿಯಮಗಳ ಅಂತಿಮ ಗುರಿಯಾಗಿದೆ.
ಪರಿಸರ, ಭೂವೈಜ್ಞಾನಿಕ ಮತ್ತು ಭೂದೃಶ್ಯ ಮಟ್ಟದ ಪರಿಗಣನೆಗಳ ಆಧಾರದ ಮೇಲೆ, ಕೇಂದ್ರವು ಈಗಾಗಲೇ ಗಣಿಗಾರಿಕೆಗೆ ನಿಷೇಧಿಸಿರುವ ಪ್ರದೇಶಗಳ ಜೊತೆಗೆ, ಇಡೀ ಅರಾವಳಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಬೇಕಾದ ಹೆಚ್ಚುವರಿ ಪ್ರದೇಶಗಳು ಮತ್ತು ವಲಯಗಳನ್ನು ಗುರುತಿಸಲು, ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಗೆ (ಐಸಿಎಫ್‌ಆರ್‌ಇ) ಸೂಚನೆ ನೀಡಿದೆ.
ಅರಾವಳಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಗಣಿಗಳಿಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರಗಳು ಎಲ್ಲಾ ಪರಿಸರ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಮತ್ತು ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ಸರ್ಕಾರಗಳಿಗೆ ತಿಳಿಸಿದೆ.
