“..ಮನುಸ್ಮೃತಿಯ ದಹನವು ಮೇಲ್ನೋಟಕ್ಕೆ ಒಂದು ಪುಸ್ತಕವನ್ನು ಬೆಂಕಿಗಾಹುತಿ ನೀಡುವ ಕ್ರಿಯೆಯಂತೆ ಕಂಡರೂ, ಅದರ ಹಿಂದಿನ ತಾತ್ವಿಕ ಮತ್ತು ಬೌದ್ಧಿಕ ತಳಹದಿ ಆಳವಾಗಿತ್ತು..” ಮನುಸ್ಮೃತಿ ದಹನದ ಐತಿಹಾಸಿಕ ಕ್ಷಣದ ಮಹತ್ವದ ಬಗ್ಗೆ ಲೇಖಕರಾದ ವಿ.ಆರ್ ಕಾರ್ಪೆಂಟರ್ ಅವರ ಬರಹದಲ್ಲಿ
ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸದಲ್ಲಿ 1927ರ ಡಿಸೆಂಬರ್ 25 ಒಂದು ನಿರ್ಣಾಯಕ ದಿನಾಂಕವಾಗಿ ದಾಖಲಾಗಿದೆ. ಅಂದು ಮಹಾರಾಷ್ಟ್ರದ ಕೊಲಾಬಾ ಜಿಲ್ಲೆಯ ಮಹಾಡ್ ಎಂಬ ಪುಟ್ಟ ಪಟ್ಟಣದಲ್ಲಿ ನಡೆದ ಘಟನೆಯು ಕೇವಲ ಒಂದು ಪ್ರತಿಭಟನೆಯಾಗಿರದೆ, ಶತಮಾನಗಳಿಂದ ಭಾರತೀಯ ಸಮಾಜದ ಆಳದಲ್ಲಿ ಬೇರೂರಿದ್ದ ಶ್ರೇಣೀಕೃತ ಅಸಮಾನತೆಯ (Graded Inequality) ವಿರುದ್ಧದ ಯುದ್ಧ ಘೋಷಣೆಯಾಗಿತ್ತು. ಭಾರತದ ಸಂವಿಧಾನ ಶಿಲ್ಪಿ, ದಲಿತರ ಸೂರ್ಯ ಮತ್ತು ಆಧುನಿಕ ಭಾರತದ ಪಿತಾಮಹ ಎಂದು ಕರೆಯಲ್ಪಡುವ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಸೇರಿ, ಹಿಂದೂ ಧರ್ಮದ ಪ್ರಾಚೀನ ಕಾನೂನು ಗ್ರಂಥವಾದ ‘ಮನುಸ್ಮೃತಿ’ಯನ್ನು ಸಾರ್ವಜನಿಕವಾಗಿ ದಹಿಸಿದರು. ಈ ಘಟನೆಯು ಭಾರತೀಯ ದಲಿತ ಚಳವಳಿಯ ಇತಿಹಾಸದಲ್ಲಿ ಮರೆಯಲಾಗದ ಕ್ಷಣವಾಯಿತು ಮತ್ತು ಅಂದಿನಿಂದ ಈ ದಿನವನ್ನು ‘ಮನುಸ್ಮೃತಿ ದಹನ ದಿವಸ” ಎಂದು ಆಚರಿಸಲಾಗುತ್ತದೆ.
ಮನುಸ್ಮೃತಿಯ ದಹನವು ಮೇಲ್ನೋಟಕ್ಕೆ ಒಂದು ಪುಸ್ತಕವನ್ನು ಬೆಂಕಿಗಾಹುತಿ ನೀಡುವ ಕ್ರಿಯೆಯಂತೆ ಕಂಡರೂ, ಅದರ ಹಿಂದಿನ ತಾತ್ವಿಕ ಮತ್ತು ಬೌದ್ಧಿಕ ತಳಹದಿ ಆಳವಾಗಿತ್ತು. ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಸಾಹೇಬರೇ ಹೇಳುವ ಪ್ರಕಾರ, ಮನುಸ್ಮೃತಿಯು ಕೇವಲ ಧಾರ್ಮಿಕ ಗ್ರಂಥವಾಗಿರಲಿಲ್ಲ; ಬದಲಿಗೆ ಅದು ಬ್ರಾಹ್ಮಣ್ಯದ ವರ್ಚಸ್ಸನ್ನು ಮತ್ತು ಶೂದ್ರರು, ಅಸ್ಪೃಶ್ಯರು ಹಾಗೂ ಮಹಿಳೆಯರ ಗುಲಾಮಗಿರಿಯನ್ನು ಸಾಂಸ್ವೀಕರಣಗೊಳಿಸಿದ (Institutionalized) ಒಂದು ಕಾನೂನು ಸಂಹಿತೆಯಾಗಿತ್ತು. ಆ ಗ್ರಂಥದಲ್ಲಿನ ಶ್ಲೋಕಗಳು ಮತ್ತು ನಿಯಮಗಳು ಸಮಾಜದ ಬಹುಸಂಖ್ಯಾತ ವರ್ಗವನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣುವಂತೆ ರೂಪಿಸಲ್ಪಟ್ಟಿದ್ದವು. ಈ ಹಿನ್ನೆಲೆಯಲ್ಲಿ, ಮನುಸ್ಮೃತಿಯನ್ನು ಸುಡುವುದು ಎಂದರೆ ಅಸ್ಪೃಶ್ಯತೆಯ ಮೂಲ ಬೇರುಗಳನ್ನು ಕತ್ತರಿಸುವುದು ಮತ್ತು ಮಾನವ ಹಕ್ಕುಗಳ ಹೊಸ ಯುಗಕ್ಕೆ ನಾಂದಿ ಹಾಡುವುದು ಎಂದರ್ಥವಾಗಿತ್ತು.
ಐತಿಹಾಸಿಕ ಹಿನ್ನೆಲೆ: ಮಹಾಡ್ ಸತ್ಯಾಗ್ರಹ ಮತ್ತು ಸಂಘರ್ಷದ ಹಾದಿ
ಮನುಸ್ಮೃತಿ ದಹನದ ಘಟನೆಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಯಾಕೆಂದರೆ, ಅದು ಮಹಾಡ್‌ನಲ್ಲಿ ನಡೆದ ನೀರಿನ ಹಕ್ಕಿಗಾಗಿನ ಹೋರಾಟದ ಅಥವಾ “ಮಹಾಡ್ ಸತ್ಯಾಗ್ರಹ”ದ ಒಂದು ಭಾಗವಾಗಿ ಮತ್ತು ಅದರ ತಾರ್ಕಿಕ ಅಂತ್ಯವಾಗಿ ಸಂಭವಿಸಿತು. 1920ರ ದಶಕದಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಏರುತ್ತಿದ್ದ ಸಮಯದಲ್ಲೇ, ಸಾಮಾಜಿಕ ಸುಧಾರಣೆಯ ಅಲೆಗಳೂ ಎದ್ದಿದ್ದವು. ಮನುಸ್ಮೃತಿಯ ದಹನಕ್ಕೆ ಪೀಠಿಕೆ ಹಾಕಿದ್ದೇ ಆ ಒಂದು ನಿರ್ಣಯ!
ಬೋಲೆ ನಿರ್ಣಯ ಮತ್ತು ಕೆರೆಗಳ ಪ್ರವೇಶ
ಹೌದು, ಆಗಸ್ಟ್ 4, 1923 ರಂದು ಬಾಂಬೆ ಲೆಜಿಸ್ಟ್ರೇಟಿವ್ ಕೌನ್ಸಿಲ್ (ಶಾಸನ ಸಭೆ) ಸದಸ್ಯರಾದ ರಾವ್ ಬಹದ್ದೂರ್ ಎಸ್.ಕೆ. ಬೋಲೆ ಅವರು ಒಂದು ಕ್ರಾಂತಿಕಾರಿ ನಿರ್ಣಯವನ್ನು ಮಂಡಿಸಿದರು. ಸರ್ಕಾರಿ ಅನುದಾನದಲ್ಲಿ ನಿರ್ಮಿಸಲಾದ ಅಥವಾ ನಿರ್ವಹಿಸಲ್ಪಡುವ ಎಲ್ಲಾ ಕೆರೆಗಳು, ಬಾವಿಗಳು, ಧರ್ಮಶಾಲೆಗಳು ಮತ್ತು ಶಾಲೆಗಳನ್ನು ಅಸ್ಪೃಶ್ಯರೂ ಸೇರಿದಂತೆ ಎಲ್ಲಾ ವರ್ಗದವರಿಗೂ ಮುಕ್ತಗೊಳಿಸಬೇಕು ಎಂಬುದು ಆ ನಿರ್ಣಯದ ಸಾರವಾಗಿತ್ತು. ಬ್ರಿಟಿಷ್ ಸರ್ಕಾರವು ಈ ನಿರ್ಣಯವನ್ನು ಅಂಗೀಕರಿಸಿತು ಮತ್ತು ಅದನ್ನು ಜಾರಿಗೆ ತರಲು ಸ್ಥಳೀಯ ಆಡಳಿತಗಳಿಗೆ ಸೂಚಿಸಿತು.
ಮಹಾಡ್ ಪುರಸಭೆಯು ಜನವರಿ 5, 1924 ರಂದು ಬೋಲೆ ನಿರ್ಣಯವನ್ನು ಬೆಂಬಲಿಸಿ ತನ್ನ ವ್ಯಾಪ್ತಿಯಲ್ಲಿದ್ದ ‘ಚವದಾರ್ ಕೆರೆ’ಯನ್ನು (Chavdar Tank) ಅಸ್ಪೃಶ್ಯರಿಗೆ ಮುಕ್ತಗೊಳಿಸುವುದಾಗಿ ಘೋಷಿಸಿತು. ಆದರೆ, ಈ ನಿರ್ಣಯವು ಕಾಗದದ ಮೇಲೆಯೇ ಉಳಿಯಿತೇ ಹೊರತು ಆಚರಣೆಗೆ ಬರಲಿಲ್ಲ. ಮೇಲ್ಟಾತಿ ಹಿಂದೂಗಳ ವಿರೋಧ ಮತ್ತು ದಬ್ಬಾಳಿಕೆಯಿಂದಾಗಿ ದಲಿತರು ಆ ಕೆರೆಯ ನೀರನ್ನು ಮುಟ್ಟಲು ಸಾಧ್ಯವಾಗಲಿಲ್ಲ. ದಲಿತರು ಸಾರ್ವಜನಿಕ ಕೆರೆಯ ನೀರನ್ನು ಬಳಸಲು ಹೋದರೆ, ಅದು ಧರ್ಮಕ್ಕೆ ವಿರೋಧ ಮತ್ತು ಕೆರೆ ಅಪವಿತ್ರವಾಗುತ್ತದೆ ಎಂಬ ಮೂಢನಂಬಿಕೆಯನ್ನು ಎಲ್ಲೆಡೆಯೂ ಬಿತ್ತಲಾಗಿತ್ತು.
ಈ ಅನ್ಯಾಯವನ್ನು ಪ್ರತಿಭಟಿಸಲು, ಬಾಬಾ ಸಾಹೇಬರು ಮಾರ್ಚ್ 19 ಮತ್ತು 20, 1927 ರಂದು ಮಹಾಡ್‌ನಲ್ಲಿ ದಲಿತರ ಸಮ್ಮೇಳನವನ್ನು ಆಯೋಜಿಸಿದರು. ಸುಮಾರು 10,000ಕ್ಕೂ ಹೆಚ್ಚಿನ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು. ಮಾರ್ಚ್ 20 ರಂದು, ಅಂಬೇಡ್ಕರ್ ಅವರು ಐತಿಹಾಸಿಕ ಮೆರವಣಿಗೆಯನ್ನು ನಡೆಸಿ, ಚವದಾರ್ ಕೆರೆಗೆ ತೆರಳಿ ಬೊಗಸೆ ನೀರನ್ನು ಕುಡಿಯುವ ಮೂಲಕ ಸಾಂಕೇತಿಕವಾಗಿ ತಮ್ಮ ಹಕ್ಕನ್ನು ಚಲಾಯಿಸಿದರು. ಅವರೊಂದಿಗೆ ಸಾವಿರಾರು ದಲಿತರು ನೀರನ್ನು ಸ್ಪರ್ಶಿಸಿದರು.
ಆದರೆ, ಈ ಘಟನೆಯ ನಂತರ ನಡೆದ ಬೆಳವಣಿಗೆಗಳು ಅತ್ಯಂತ ಆಘಾತಕಾರಿಯಾಗಿದ್ದವು. ದಲಿತರು ಕೆರೆಯನ್ನು ಮುಟ್ಟಿದ್ದರಿಂದ ನೀರು “ಅಪವಿತ್ರ”ವಾಗಿದೆ ಎಂದು ಆರೋಪಿಸಿದ ಸನಾತನವಾದಿ ಹಿಂದೂಗಳು, ದಲಿತರ ಮೇಲೆ ಹಲ್ಲೆ ನಡೆಸಿದರು. ಅಷ್ಟೇ ಅಲ್ಲದೆ, ಕೆರೆಯನ್ನು “ಶುದ್ದೀಕರಿಸಲು” 108 ಮಡಿಕೆಗಳಲ್ಲಿ ಪಂಚಗವ್ಯವನ್ನು (ಹಸುವಿನ ಸಗಣಿ, ಗಮೂತ್ರ, ಹಾಲು, ಮೊಸರು ಮತ್ತು ತುಪ್ಪದ ಮಿಶ್ರಣ) ಕೆರೆಗೆ ಸುರಿಯಲಾಯಿತು ಮತ್ತು ವೇದ ಮಂತ್ರಗಳನ್ನು ಪಠಿಸಲಾಯಿತು. ಈ ಶುದ್ದೀಕರಣದ ಕ್ರಿಯೆಯು ದಲಿತರ ಆತ್ಮಗೌರವಕ್ಕೆ ಮಾಡಿದ ಘೋರ ಅವಮಾನವಾಗಿತ್ತು. ಮನುಷ್ಯನ ಸ್ಪರ್ಶದಿಂದ ಅಪವಿತ್ರವಾದ ನೀರನ್ನು ಪ್ರಾಣಿಯ ಮಲ-ಮೂತ್ರದಿಂದ ಶುದ್ದೀಕರಿಸಬಹುದು ಎಂಬ ಮೌಡ್ಯವು ಅಂಬೇಡ್ಕರ್ ಅವರನ್ನು ಕೆರಳಿಸಿತು. ಈ ಘಟನೆಯೇ ಡಿಸೆಂಬರ್‌ನಲ್ಲಿ ಮನುಸ್ಮೃತಿಯನ್ನು ಸುಡಲು ಪ್ರಬಲ ಪ್ರೇರಣೆಯಾಯಿತು.
ನ್ಯಾಯಾಲಯದ ತಡೆಯಾಜ್ಞೆ ಮತ್ತು ಡಿಸೆಂಬರ್ ಸತ್ಯಾಗ್ರಹದ ತಯಾರಿ
ದಲಿತರು ಮತ್ತೆ ಕೆರೆಯನ್ನು ಪ್ರವೇಶಿಸುವುದನ್ನು ತಡೆಯಲು, ಕೆಲವು ಮೇಲ್ಮಾತಿ ಹಿಂದೂಗಳು ಮಹಾಡ್ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ, ಚವದಾರ್ ಕೆರೆಯು ಖಾಸಗಿ ಆಸ್ತಿ ಎಂದು ವಾದಿಸಿದರು. ಡಿಸೆಂಬರ್ 14, 1927 ರಂದು ನ್ಯಾಯಾಲಯವು ದಲಿತರು ಕೆರೆಗೆ ಪ್ರವೇಶಿಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿತು.
ಬಾಬಾ ಸಾಹೇಬರು ಡಿಸೆಂಬರ್ 25 ಮತ್ತು 26 ರಂದು ಮಹಾಡ್‌ನಲ್ಲಿ ಮತ್ತೆ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದರು. ಆದರೆ ನ್ಯಾಯಾಲಯದ ಆದೇಶ ಮತ್ತು ಜಿಲ್ಲಾಧಿಕಾರಿಯ ಮನವಿಯ ಮೇರೆಗೆ, ಅವರು ಕಾನೂನನ್ನು ಗೌರವಿಸಿ ಕೆರೆ ಪ್ರವೇಶವನ್ನು ಮುಂದೂಡಿದರು. ಆದರೆ, ಸತ್ಯಾಗ್ರಹವನ್ನು ನಿಲ್ಲಿಸಲಿಲ್ಲ. ಬದಲಿಗೆ, ಅಸ್ಪೃಶ್ಯತೆಯ ಆಚರಣೆಗೆ ತಾತ್ವಿಕ ಬೆಂಬಲ ನೀಡುವ ಮನುಸ್ಮೃತಿಯನ್ನು ಸುಡುವ ಮೂಲಕ ಹೋರಾಟದ ಸ್ವರೂಪವನ್ನೇ ಬದಲಿಸಿದರು. ಇದು ನೀರಿನ ಹಕ್ಕಿನ ಹೋರಾಟದಿಂದ ಮಾನವ ಹಕ್ಕಿನ ಹೋರಾಟವಾಗಿ ಮತ್ತು ಹಿಂದೂ ಧರ್ಮದ ಆಂತರಿಕ ಸುಧಾರಣೆಯ ಹೋರಾಟವಾಗಿ ರೂಪಾಂತರಗೊಂಡಿತು.
ಡಿಸೆಂಬರ್ 25, 1927
ಡಿಸೆಂಬರ್ 25, 1927 ರ ದಿನವು ಭಾರತೀಯ ಸಾಮಾಜಿಕ ಕ್ರಾಂತಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟ ದಿನವಾಗಿದೆ. ಅಂದು ನಡೆದ ಘಟನೆಗಳ ವಿವರಗಳು, ಅಂಬೇಡ್ಕರ್ ಅವರ ಯೋಜನೆಯ ನಿಖರತೆ ಮತ್ತು ಅವರ ಅನುಯಾಯಿಗಳ ಬದ್ಧತೆಯನ್ನು ತೋರಿಸುತ್ತವೆ.
ಬಾಬಾ ಸಾಹೇಬರು ಮತ್ತು ಅವರ ತಂಡವು ಮುಂಬೈನಿಂದ ‘ಪದ್ಮಾವತಿ’ ಎಂಬ ದೋಣಿಯ ಮೂಲಕ ದಾಸಗಾಂವ್ ಬಂದರಿಗೆ ಬಂದಿಳಿದರು. ಅಲ್ಲಿಂದ ಮಹಾಡ್‌ಗೆ ಐದು ಮೈಲಿ ದೂರವಿತ್ತು. ಆದರೆ, ಸ್ಥಳೀಯ ಮೇಲ್ಟಾತಿ ಹಿಂದೂಗಳು ಮತ್ತು ಬಸ್ ಮಾಲೀಕರು ಸತ್ಯಾಗ್ರಹಿಗಳಿಗೆ ವಾಹನಗಳನ್ನು ನಿರಾಕರಿಸಿ ಬಹಿಷ್ಕಾರ ಹಾಕಿದ್ದರು. ಈ ಸವಾಲನ್ನು ನಿರೀಕ್ಷಿದ್ದ ಅಂಬೇಡ್ಕರ್ ಅವರು ನಡೆದುಕೊಂಡೇ ಮಹಾಡ್ ತಲುಪಿದರು. ಸ್ಥಳೀಯ ವ್ಯಾಪಾರಿಗಳು ಆಹಾರ ಸಾಮಗ್ರಿಗಳನ್ನು ನೀಡಲು ನಿರಾಕರಿಸಿದ್ದರಿಂದ, ಸತ್ಯಾಗ್ರಹಿಗಳು ತಮಗಾದ ಅಡುಗೆ ಸಾಮಗ್ರಿಗಳನ್ನು ಮತ್ತು ಆಹಾರವನ್ನು ಹೊರಗಿನಿಂದಲೇ ತಂದೆದ್ದರು. ಕುಡಿಯುವ ನೀರಿಗೂ ತೊಂದರೆಯಾಗದಂತೆ, ಸಮಾವೇಶದ ಸ್ಥಳದಲ್ಲಿಯೇ ಬಾವಿಯನ್ನು ತೋಡಲಾಗಿತ್ತು.
ಸಮಾವೇಶದ ಪೆಂಡಾಲ್‌ನ ಮುಂಭಾಗದಲ್ಲಿ ಮನುಸ್ಮೃತಿಯನ್ನು ಸುಡಲು ಒಂದು ವಿಶೇಷವಾದ “ವೇದಿ” (ಚಿತೆ)ಯನ್ನು ಸಿದ್ಧಪಡಿಸಲಾಗಿತ್ತು. ಇದರ ನಿರ್ಮಾಣದಲ್ಲಿ ಆರು ಜನ ದಲಿತ ಸ್ವಯಂಸೇವಕರು ಎರಡು ದಿನಗಳ ಕಾಲ ಶ್ರಮಿಸಿದ್ದರು. ಈ ವೇದಿಯೇ ಒಂದು ಸಂಕೇತವಾಗಿತ್ತು.
ರಚನೆ: ಇದು ಸುಮಾರು 6 ಇಂಚು ಆಳ ಮತ್ತು ಒಂದೂವರೆ ಅಡಿ ಚೌಕವಾಗಿತ್ತು. ಇದರಲ್ಲಿ ಶ್ರೀಗಂಧದ ಕಟ್ಟಿಗೆಗಳನ್ನು ಇರಿಸಲಾಗಿತ್ತು, ಇದು ಹಿಂದೂ ಸಂಪ್ರದಾಯದಲ್ಲಿ ಶವಸಂಸ್ಕಾರಕ್ಕೆ ಬಳಸುವ ವಿಧಾನವನ್ನು ಹೋಲುತ್ತಿತ್ತು.
ಬ್ಯಾನರ್‌ಗಳು: ವೇದಿಯ ನಾಲ್ಕು ಮೂಲೆಗಳಲ್ಲಿ ಕಂಬಗಳನ್ನು ನೆಟ್ಟು, ಮೂರು ದಿಕ್ಕಿನಲ್ಲಿ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ಅವುಗಳಲ್ಲಿ ಬರೆಯಲಾಗಿದ್ದ ಘೋಷಣೆಗಳು ಅತ್ಯಂತ ” ಕ್ರಾಂತಿಕಾರಿಯಾಗಿದ್ದವು:
1. ”ಮನುಸ್ಮೃತಿ ಚಿ ದಹನ ಭೂಮಿ’ (ಮನುಸ್ಮೃತಿಯ ಸ್ಮಶಾನ/ದಹನ ಭೂಮಿ).
2. “ಅಸ್ಪೃಶ್ಯತೆಯನ್ನು ನಿರ್ನಾಮ ಮಾಡಿ” (Destroy Untouchability).
3. “ಬ್ರಾಹ್ಮಣ್ಯವನ್ನು ಹೂತುಹಾಕಿ” (Bury Brahmanism).
ರಾತ್ರಿ 9 ಗಂಟೆಯ ಸುಮಾರಿಗೆ ಸಭೆಯ ಕಾರ್ಯಕಲಾಪಗಳು ಉತ್ತುಂಗಕ್ಕೇರಿದವು. ಮನುಸ್ಮೃತಿಯನ್ನು ದಹಿಸುವ ನಿರ್ಣಯವನ್ನು ಮಂಡಿಸಿದವರು ದಲಿತರಲ್ಲ, ಬದಲಿಗೆ ಅಂಬೇಡ್ಕರ್ ಅವರ ನಿಕಟವರ್ತಿ ಮತ್ತು ತ್ತು ಚಿತ್ಪಾವನ ಚಿತ್ಪಾವನ ಬ್ರಾಹ್ಮಣರಾದ ಈ ಗಂಗಾಧರ ನೀಲಕಂಠ ಸಹಸ್ರಬುದ್ದೆ ಅವರು. ಈ ಅಂಶವು ಅತ್ಯಂತ ಮಹತ್ವದ್ದಾಗಿದೆ. ಅಂಬೇಡ್ಕರ್ ಅವರ ಹೋರಾಟವು ವೈಯಕ್ತಿಕವಾಗಿ ಬ್ರಾಹ್ಮಣ ಜಾತಿಯ ವಿರುದ್ಧವಾಗಿರದೆ, “ಬ್ರಾಹ್ಮಣ್ಯ” ಎಂಬ ಸಿದ್ಧಾಂತದ ವಿರುದ್ಧವಾಗಿತ್ತು ಎಂಬುದಕ್ಕೆ ಇದೇ ಸಾಕ್ಷಿ. ದಲಿತ ನಾಯಕ ಪಿ.ಎನ್. ರಾಜಭೋಜ್ ಅವರು ಈ ನಿರ್ಣಯಕ್ಕೆ ಅನುಮೋದನೆ ನೀಡಿದರು.
ನಂತರ, ಅಂಬೇಡ್ಕರ್, ಸಹಸ್ರಬುದ್ದೆ ಮತ್ತು ಇತರ ಪ್ರಮುಖ ನಾಯಕರು ವೇದಿಯ ಬಳಿ ತೆರಳಿದರು. ಮನುಸ್ಮೃತಿಯ ಪ್ರತಿಯನ್ನು ಹರಿದು ಪುಟಪುಟವಾಗಿ ಬೆಂಕಿಗೆ ಹಾಕಿದರು. ಅಗ್ನಿಯ ಜ್ವಾಲೆಗಳು ಮೇಲೇರುತ್ತಿದ್ದಂತೆ, ನೆರೆದಿದ್ದ ಸಾವಿರಾರು ದಲಿತರು ಘೋಷಣೆಗಳನ್ನು ಕೂಗಿದರು. ಮನುಸ್ಮೃತಿಯ ದಹನವು ದಲಿತರ ಪಾಲಿಗೆ ದಾಸ್ಯದ ಸಂಕೋಲೆಗಳಿಂದ ಬಿಡುಗಡೆ ಪಡೆಯುವ ಸಂಕೇತವಾಗಿತ್ತು. ಈ ದೃಶ್ಯವನ್ನು ನೋಡಿದ ಪ್ರಗತಿಪರರು, ಸಂತರು ಮತ್ತು ಕವಿಗಳು ಇದನ್ನು “ಜ್ಞಾನದ ಉದಯ” ಮತ್ತು “ಕತ್ತಲೆಯ ಅಂತ್ಯ” ಎಂದು ಬಣ್ಣಿಸಿದ್ದಾರೆ.’
ಮನುಸ್ಮೃತಿ ದಹನದ ಜೊತೆಗೆ, ಅಲ್ಲಿ ನೆರೆದಿದ್ದ ಪ್ರತಿಯೊಬ್ಬ ಸ್ವಯಂಸೇವಕರು ಐದು ಮಹತ್ವದ ಪ್ರತಿಜ್ಞೆಗಳನ್ನು ಸ್ವೀಕರಿಸಿದರು. ಇವು ಬಾಬಾ ಸಾಹೇಬರ ನೈತಿಕ ಮತ್ತು ಸಾಮಾಜಿಕ ದೃಷ್ಟಿಕೋನವನ್ನು ಪ್ರತಿನಿಧಿಸುತ್ತವೆ:
1. ನಾನು ಹುಟ್ಟಿನ ಆಧಾರಿತವಾದ ಚಾತುರ್ವಣ್ಯ್ರದಲ್ಲಿ ನಂಬಿಕೆ ಇಡುವುದಿಲ್ಲ.
2. ನಾನು ಜಾತಿ ಭೇದಗಳಲ್ಲಿ ನಂಬಿಕೆ ಇಡುವುದಿಲ್ಲ.
3. ಅಸ್ಪೃಶ್ಯತೆಯು ಹಿಂದೂ ಧರ್ಮಕ್ಕೆ ಅಂಟಿದ ಕಳಂಕ ಎಂದು ನಾನು ನಂಬುತ್ತೇನೆ ಮತ್ತು ಅದನ್ನು ಸಂಪೂರ್ಣವಾಗಿ ನಾಶಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.
4. ಯಾವುದೇ ಅಸಮಾನತೆ ಇಲ್ಲ ಎಂದು ಪರಿಗಣಿಸಿ, ಕನಿಷ್ಠ ಎಲ್ಲಾ ಹಿಂದೂಗಳ ನಡುವೆ ಆಹಾರ ಮತ್ತು ಪಾನೀಯಗಳ ವಿಷಯದಲ್ಲಿ ಯಾವುದೇ ನಿರ್ಬಂಧಗಳನ್ನು ಪಾಲಿಸುವುದಿಲ್ಲ.
5. ಅಸ್ಪೃಶ್ಯರಿಗೆ ದೇವಾಲಯಗಳು, ನೀರಿನ ಮೂಲಗಳು, ಶಾಲೆಗಳು ಮತ್ತು ಇತರ ಸೌಕರ್ಯಗಳಲ್ಲಿ ಸಮಾನ ಹಕ್ಕುಗಳಿರಬೇಕು ಎಂದು ನಾನು ನಂಬುತ್ತೇನೆ.
ಅಸಲಿಗೆ ಮನುಸ್ಮೃತಿಯಲ್ಲಿ ಏನಿತ್ತು?
ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಡಲು ನಿರ್ಧರಿಸಿದ್ದು ಕೇವಲ ಭಾವನಾತ್ಮಕ ಆಕ್ರೋಶದಿಂದಲ್ಲ, ಬದಲಿಗೆ ಆಳವಾದ ಅಧ್ಯಯನದಿಂದ. ಈ ಮನುಸ್ಮೃತಿಯು ಕ್ರಿಸ್ತ ಪೂರ್ವ 2ನೇ ಶತಮಾನದಿಂದ ಕ್ರಿಸ್ತ ಶಕ 2ನೇ ಶತಮಾನದ ನಡುವೆ ರಚನೆಯಾದ ಗ್ರಂಥ. ಈ ಗ್ರಂಥವು ಅಸಮಾನತೆಯನ್ನು ದೈವಿಕ ನಿಯಮವನ್ನಾಗಿ ಬಿಂಬಿಸಿತ್ತು. ಮನುಸ್ಮೃತಿಯಲ್ಲಿರುವ ನಿರ್ದಿಷ್ಟ ಶ್ಲೋಕಗಳು ಮತ್ತು ಕಾನೂನುಗಳೇ ಅದನ್ನು ಸುಡಲು ಮುಖ್ಯ ಕಾರಣಗಳಾದವು.
ಶೂದ್ರರು ಮತ್ತು ಅಸ್ಪೃಶ್ಯರ ಮೇಲಿನ ಕ್ರೌರ್ಯ
ಮನುಸ್ಮೃತಿಯು ಶೂದ್ರರನ್ನು (ಮತ್ತು ಅಸ್ಪೃಶ್ಯರನ್ನು) ಮನುಷ್ಯರೆಂದೇ ಪರಿಗಣಿಸಿರಲಿಲ್ಲ. ಅವರ ವಿರುದ್ಧ ವಿಧಿಸಲಾದ ಶಿಕ್ಷೆಗಳು ಅತ್ಯಂತ ಅಮಾನವೀಯವಾಗಿದ್ದೆವು:
ಶಿಕ್ಷಣದ ಹಕ್ಕು ನಿರಾಕರಣೆ ಮತ್ತು ದೈಹಿಕ ಹಿಂಸೆ: :
ಶ್ಲೋಕ (Manu VIII.270-272): ಒಬ್ಬ ಶೂದ್ರನು ಅಹಂಕಾರದಿಂದ ಬ್ರಾಹ್ಮಣರಿಗೆ ಅವರ ಕರ್ತವ್ಯದ ಬಗ್ಗೆ ಉಪದೇಶಿಸಿದರೆ, ರಾಜನು ಆತನ ಬಾಯಿ ಮತ್ತು ಕಿವಿಗಳಲ್ಲಿ ಕುದಿಯುವ ಎಣ್ಣೆಯನ್ನು ಸುರಿಯಬೇಕು ಎಂದು ಮನುಸ್ಮೃತಿ ಆದೇಶಿಸುತ್ತದೆ.
ಒಬ್ಬ ಶೂದ್ರನು ಬ್ರಾಹ್ಮಣನನ್ನು ನಿಂದಿಸಿದರೆ ಅವನ ನಾಲಿಗೆಯನ್ನು ಕತ್ತರಿಸಬೇಕು.
ಶೂದ್ರನು ವೇದ ಮಂತ್ರಗಳನ್ನು ಕೇಳಿಸಿಕೊಂಡರೆ ಅವನ ಕಿವಿಗೆ ಸೀಸವನ್ನು ಕಾಯಿಸಿ ಸುರಿಯಬೇಕು, ಉಚ್ಛಾರಣೆ ಮಾಡಿದರೆ ನಾಲಿಗೆ ಕತ್ತರಿಸಬೇಕು ಮತ್ತು ಮನನ ಮಾಡಿಕೊಂಡರೆ ಅವನ ದೇಹವನ್ನೇ ಸೀಳಬೇಕು ಎಂಬ ನಿಯಮಗಳಿದ್ದವು.
* ಬಾಬಾ ಸಾಹೇಬರು ಈ ನಿಯಮಗಳನ್ನು ಉಲ್ಲೇಖಿಸಿ, “ಇದು ಜ್ಞಾನದ ಹಾದಿಯನ್ನು ಮುಚ್ಚುವ ಮತ್ತು ಬೌದ್ಧಿಕ ಬೆಳವಣಿಗೆಯನ್ನು ತಡೆಯುವ ವ್ಯವಸ್ಥಿತ ಸಂಚು” ಎಂದು ಕರೆದರು.
ಸಾಮಾಜಿಕ ಸ್ಥಾನಮಾನ ಮತ್ತು ಗುಲಾಮಗಿರಿ:
ಶ್ಲೋಕ (Manu X.129): ಶೂದ್ರನು ಎಷ್ಟೇ ಸಮರ್ಥನಾಗಿದ್ದರೂ ಸಂಪತ್ತನ್ನು ಸಂಗ್ರಹಿಸಬಾರದು. ಏಕೆಂದರೆ ಧನವಂತನಾದ ಶೂದ್ರನು ಬ್ರಾಹ್ಮಣರಿಗೆ ನೋವುಂಟುಮಾಡುತ್ತಾನೆ. ಶೂದ್ರನ ಏಕೈಕ ಧರ್ಮ ಬ್ರಾಹ್ಮಣರ ಸೇವೆ ಮಾಡುವುದು.
ಬ್ರಾಹ್ಮಣರು ಶೂದ್ರರಿಗೆ ಹಳೆಯ ಬಟ್ಟೆಗಳು, ಎಂಜಲು ಊಟ ಮತ್ತು ಹಾಳಾದ ಧಾನ್ಯಗಳನ್ನು ನೀಡಬೇಕು ಎಂದು ಹೇಳಲಾಗಿತ್ತು. ಇದು ದಲಿತರನ್ನು ಆರ್ಥಿಕವಾಗಿ ಬಲಹೀನರನ್ನಾಗಿ ಮತ್ತು ಪರಾವಲಂಬಿಗಳನ್ನಾಗಿ ಇರಿಸುವ ತಂತ್ರವಾಗಿತ್ತು.
ಶ್ಲೋಕ (Manu VIII. 281): ಶೂದ್ರನು ಬ್ರಾಹ್ಮಣನ ಜೊತೆ ಒಂದೇ ಆಸನದಲ್ಲಿ ಕುಳಿತರೆ, ಅವನ ಪೃಷ್ಠದ ಭಾಗವನ್ನು ಕತ್ತರಿಸಬೇಕು ಅಥವಾ ಬಿಸಿಯಾದ ಕಬ್ಬಿಣ ಸಲಾಕೆಯಿಂದ ಬರೆ ಹಾಕಬೇಕು.
ಮಹಿಳೆಯರ ಸ್ವಾತಂತ್ರ್ಯ ಹರಣ
ಮನುಸ್ಮೃತಿಯು ಕೇವಲ ದಲಿತರ ವಿರೋಧಿಯಾಗಿರಲಿಲ್ಲ, ಅದು ತೀವ್ರವಾದ ಸ್ತ್ರೀ ವಿರೋಧಿ ಗ್ರಂಥವೂ ಆಗಿತ್ತು. ಅಂಬೇಡ್ಕರ್ ಅವರು ಮಹಿಳೆಯರ ವಿಮೋಚನೆಗಾಗಿ ಹೋರಾಡಿದ ನಾಯಕ, ಮತ್ತು ಮನುಸ್ಮೃತಿಯ ಈ ಕೆಳಗಿನ ಅಂಶಗಳನ್ನು ಅವರು ತೀವ್ರವಾಗಿ ಖಂಡಿಸಿದರು:
ಸ್ವಾತಂತ್ರ್ಯಕ್ಕೆ ಅನರ್ಹತೆ:
ಶ್ಲೋಕ (Manu IX.3): “ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ । ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ /” ಅರ್ಥ: ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಪತಿ ಮತ್ತು ಮುದಿತನದಲ್ಲಿ ಮಗ ಸ್ತ್ರೀಯನ್ನು ರಕ್ಷಿಸುತ್ತಾನೆ; ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ. ಈ ಶ್ಲೋಕವನ್ನು ಅಂಬೇಡ್ಕರ್ ಅವರು ಮಹಿಳೆಯರ ಗುಲಾಮಗಿರಿಯ ಪ್ರಣಾಳಿಕೆ ಎಂದು ಕರೆದರು.
ಚಾರಿತ್ರ್ಯದ ಮೇಲಿನ ದಾಳಿ:
ಮನುಸ್ಮೃತಿಯು ಮಹಿಳೆಯರ ಸ್ವಭಾವವೇ ಪುರುಷರನ್ನು ದಾರಿ ತಪ್ಪಿಸುವುದು ಎಂದು ಹೇಳುತ್ತದೆ. “ಸ್ತ್ರೀಯರು ಸುಂದರ ಅಥವಾ ಕುರೂಪಿ ಎಂದು ನೋಡದೆ, ಪುರುಷರೊಂದಿಗೆ ಸಂಭೋಗಿಸಲು ಹಂಬಲಿಸುತ್ತಾರೆ” (Manu IX.14-15) ಎಂಬಂತಹ ಅವಮಾನಕರ ಸಾಲುಗಳು ಅದರಲ್ಲಿವೆ.
ಪತಿ ಎಷ್ಟೇ ದುರಾಚಾರಿಯಾಗಿದ್ದರೂ, ಗುಣಹೀನನಾಗಿದ್ದರೂ, ಪತ್ನಿಯು ಅವನನ್ನು ದೇವರೆಂದು ಪೂಜಿಸಬೇಕು (Manu V.154) ಎಂದು ಅದು ಆದೇಶಿಸುತ್ತದೆ. ಆದರೆ ಪತಿಗೆ ಈ ನಿಯಮ ಅನ್ವಯಿಸುವುದಿಲ್ಲ.
ವಿವಾಹ ಮತ್ತು ಶಿಕ್ಷೆಯಲ್ಲಿ ತಾರತಮ್ಯ:
ಶೂದ್ರ ಪುರುಷನು ಬ್ರಾಹ್ಮಣ ಮಹಿಳೆಯೊಂದಿಗೆ ಸಂಬಂಧ ಹೊಂದಿದರೆ ಅವನಿಗೆ ಮರಣದಂಡನೆ ವಿಧಿಸಲಾಗುತ್ತಿತ್ತು. ಆದರೆ ಬ್ರಾಹ್ಮಣ ಪುರುಷನು ಶೂದ್ರ ಮಹಿಳೆಯೊಂದಿಗೆ ಸಂಬಂಧ ಹೊಂದಿದರೆ ಅಂತಹ ಕಠಿಣ ಶಿಕ್ಷೆ ಇರಲಿಲ್ಲ. ಇದು ಲೈಂಗಿಕತೆಯನ್ನು ಜಾತಿ ವ್ಯವಸ್ಥೆಯ ರಕ್ಷಣೆಗೆ ಬಳಸಿಕೊಂಡ ಆಯುಧವಾಗಿತ್ತು.
ಬಾಬಾ ಸಾಹೇಬರು ಹೇಳುವಂತೆ, ಜಗತ್ತಿನ ಯಾವುದೇ ಧರ್ಮ ಅಥವಾ ಕಾನೂನು ಅನ್ಯಾಯವನ್ನು ಮಾಡಬಹುದು, ಆದರೆ ಮನುಸ್ಮೃತಿಯು ಅನ್ಯಾಯವನ್ನೇ “ಧರ್ಮ” ಎಂದು ಕರೆದ ಏಕೈಕ ಗ್ರಂಥ. ಇದು ಸಮಾಜವನ್ನು ಅಡ್ಡಲಾಗಿ (Horizontally) ವಿಭಜಿಸದೆ, ಲಂಬವಾಗಿ (Vertically) ಶ್ರೇಣೀಕರಿಸಿತು. ಒಬ್ಬರ ಕೆಳಗೆ ಇನ್ನೊಬ್ಬರಂತೆ ಇನ್ನೊಬ್ಬರಂತೆ ಜಾತಿಗಳನ್ನು ಜೋಡಿಸಿ, ಕೆಳಗಿನವರಿಗೆ ಮೇಲೆರುವ ದಾರಿ ಇಲ್ಲದಂತೆ ಮತ್ತು ಮೇಲಿನವರಿಗೆ ಕೆಳಗೆ ಬೀಳುವ ಭಯವಿಲ್ಲದಂತೆ ಮಾಡಿತು. ಈ ವ್ಯವಸ್ಥೆಗೆ ಮನುಸ್ಮೃತಿಂ ಮೊನಿ-ಚೌಕಟ್ಟು ಒದಗಿಸಿತ್ತು.
ಫ್ರೆಂಚ್ ಕ್ರಾಂತಿಯ ಹೋಲಿಕೆ
ಮನುಸ್ಮೃತಿಯನ್ನು ಸುಟ್ಟ ನಂತರ ಅಂಬೇಡ್ಕರ್ ಅವರು ಮಾಡಿದ ಭಾಷಣಗಳು ಮತ್ತು ಬರೆದ ಲೇಖನಗಳಲ್ಲಿ (ಬಹಿಷ್ಕೃತ ಭಾರತ ಪತ್ರಿಕೆಯಲ್ಲಿ) ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು. ಅವರ ವಾದಗಳು ಭಾವನಾತ್ಮಕವಾಗಿರದೆ, ತಾರ್ಕಿಕ ಮತ್ತು ಐತಿಹಾಸಿಕ ವಿಶ್ಲೇಷಣೆಯಿಂದ ಕೂಡಿದ್ದವು.
ತಮ್ಮ ಭಾಷಣದಲ್ಲಿ ಅಂಬೇಡ್ಕರ್ ಅವರು ಮನುಸ್ಮೃತಿ ದಹನವನ್ನು ಫ್ರೆಂಚ್ ಕ್ರಾಂತಿಯೊಂದಿಗೆ ಹೋಲಿಸಿದರು. ಫ್ರಾನ್ಸ್‌ನಲ್ಲಿ 1789 ರ ಜನವರಿ 24 ರಂದು ಜನರು ಹಳೆಯ ರಾಜಪ್ರಭುತ್ವ ಮತ್ತು ಊಳಿಗಮಾನ್ಯ ಪದ್ಧತಿಯನ್ನು ಕಿತ್ತೊಗೆದು ಸಮಾನತೆಯನ್ನು ಸ್ಥಾಪಿಸಲು ಮುಂದಾದರು. ಅಂಬೇಡ್ಕರ್ ಅವರು, “ನಮ್ಮ ಗುರಿ ಕೇವಲ ನೀರು ಕುಡಿಯುವುದಲ್ಲ, ಅಥವಾ ಕೇವಲ ಸಾಮಾಜಿಕ ಸುಧಾರಣೆಯಲ್ಲಿ. ನಮ್ಮ ಗುರಿ ಫ್ರೆಂಚ್ ಕ್ರಾಂತಿಯಂತೆಯೇ ಹಳೆಯ ಸಮಾಜವನ್ನು ಕೆಡವಿ ಹಾಕಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ (Liberty, Equality, Fraternity) ತಳಹದಿಯ ಮೇಲೆ ಹೊಸ ಸಮಾಜವನ್ನು ನಿರ್ಮಿಸುವುದಾಗಿದೆ” ಎಂದು ಘೋಷಿಸಿದರು.
ಅವರು ಹಿಂದೂ ಸಮಾಜದ ರಚನೆಯನ್ನು ಫ್ರಾನ್ಸ್‌ನ ಸಮಾಜದೊಂದಿಗೆ ಹೋಲಿಸಿದರು. ಫ್ರಾನ್ಸ್‌ನಲ್ಲಿ ಪಾದ್ರಿಗಳು (Clergy), ಶ್ರೀಮಂತರು (Nobles) ಮತ್ತು ಸಾಮಾನ್ಯರು (Commons) ಎಂಬ ಮೂರು ವರ್ಗಗಳಿದ್ದವು. ಹಾಗೆಯೇ ಭಾರತದಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಇದ್ದಾರೆ. ಫ್ರೆಂಚ್ ಕ್ರಾಂತಿಯು ಈ ವರ್ಗ ವ್ಯವಸ್ಥೆಯನ್ನು ನಾಶ ಮಾಡಿದಂತೆ, ಮನುಸ್ಮೃತಿ ದಹನವು ಚಾತುರ್ವಣ್ಯ್ರ ವ್ಯವಸ್ಥೆಯನ್ನು ನಾಶಮಾಡುವ ಗುರಿ ಹೊಂದಿದೆ ಎಂದು ಅವರು ವಿವರಿಸಿದರು.
ಮನುಸ್ಮೃತಿ: ಅನ್ಯಾಯದ ಸಂಕೇತ
“ಮನುಸ್ಮೃತಿಯನ್ನು ಸುಡುವುದು ಎಂದರೆ ಅದು ಪ್ರತಿನಿಧಿಸುವ ಕಲ್ಪನೆಯನ್ನು ತಿರಸ್ಕರಿಸುವುದು” ಎಂದು ಅಂಬೇಡ್ಕರ್ ಸ್ಪಷ್ಟಪಡಿಸಿದರು. ಒಂದು ರಾಷ್ಟ್ರದ ಬಾವುಟವನ್ನು ಸುಡುವುದು ಹೇಗೆ ಆ ರಾಷ್ಟ್ರದ ರ ಆಡಳಿತ ಲಿನ ವಿರೋಧವನ್ನು ಸೂಚಿಸುತ್ತದೆಯೋ, ಹಾಗೆಯೇ ಮನುಸ್ಮೃತಿಯನ್ನು ಸುಡುವುದು ಧಾರ್ಮಿಕ ದಬ್ಬಾಳಿಕೆಯ ವಿರುದ್ಧದ ಪ್ರತಿಭಟನೆಯಾಗಿತ್ತು. “ನಾವು ಮನುಸ್ಮೃತಿಯನ್ನು ಸುಟ್ಟೆವು ಏಕೆಂದರೆ ಅದು ನಮಗೆ ಶತಮಾನಗಳಿಂದಲೂ ಶಾಪವಾಗಿ ಪರಿಣಮಿಸಿದೆ. ಅದು ನಮ್ಮ ಬಡತನ, ಅಜ್ಞಾನ ಮತ್ತು ಅವಮಾನಗಳಿಗೆ ಕಾರಣವಾಗಿದೆ” ಎಂದು ಅವರು 1938ರಲ್ಲಿ ಟಿ.ವಿ. ಪರ್ವತೆ ಅವರಿಗೆ ನೀಡಿದ ಸಂದರ್ಶನದಲ್ಲಿ ಪುನರುಚ್ಚರಿಸಿದರು.
ಬ್ರಾಹ್ಮಣ್ಯದ ವಿರುದ್ಧ, ಬ್ರಾಹ್ಮಣರ ವಿರುದ್ಧವಲ್ಲ
ಅಂಬೇಡ್ಕರ್ ಅವರು ಮನುಸ್ಮೃತಿ ದಹನ ಕಾರ್ಯಕ್ರಮದಲ್ಲಿ ಬ್ರಾಹ್ಮಣರಾದ ಸಹಸ್ರಬುದ್ದೆ ಅವರಿಗೆ ಪ್ರಮುಖ ಪಾತ್ರ ನೀಡುವ ಮೂಲಕ, ತಮ್ಮ ಹೋರಾಟ ವ್ಯಕ್ತಿಗತವಲ್ಲ ಎಂಬುದನ್ನು ಸಾಬೀತುಪಡಿಸಿದರು. “ಬ್ರಾಹ್ಮಣ್ಯ” (Brahmanism) ಎನ್ನುವುದು ಒಂದು ಮನಸ್ಥಿತಿ – ಅದು ಮೇಲು-ಕೀಳು ಎಂಬ ಭಾವನೆ, ಸರ್ವರಿಗೂ ಸಮಬಾಳು ಎಂಬುದರ ನಿರಾಕರಣೆ. ಈ ಮನಸ್ಥಿತಿ ಬ್ರಾಹ್ಮಣರಲ್ಲಿ ಇರಬಹುದು ಅಥವಾ ದಲಿತರಲ್ಲಿಯೂ ಇರಬಹುದು. ಮನುಸ್ಮೃತಿಯು ಈ ಬ್ರಾಹ್ಮಣ್ಯದ ಪೋಷಕ ಗ್ರಂಥವಾಗಿತ್ತು. ಆದ್ದರಿಂದ, ಮನುಸ್ಮೃತಿಯ ವಿನಾಶವಿಲ್ಲದೆ ಬ್ರಾಹ್ಮಣ್ಯದ ವಿನಾಶ ಸಾಧ್ಯವಿಲ್ಲ ಮತ್ತು ಬ್ರಾಹ್ಮಣ್ಯದ ವಿನಾಶವಿಲ್ಲದೆ ಹಿಂದೂ ಧರ್ಮದ ಉದ್ಧಾರ ಸಾಧ್ಯವಿಲ್ಲ ಎಂಬುದು ಅವರ ದೃಢ ನಿಲುವಾಗಿತ್ತು.
ಸಮಾವೇಶದಲ್ಲಿ ಅಂಗೀಕರಿಸಲಾದ ನಿರ್ಣಯಗಳು
ಮನುಸ್ಮೃತಿ ದಹನದ ದಿನದಂದು ಅಂಗೀಕರಿಸಲಾದ ನಿರ್ಣಯಗಳು ಅಂಬೇಡ್ಕರ್ ಅವರ ಭವಿಷ್ಯದ ದೃಷ್ಟಿಕೋನವನ್ನು ಸ್ಪಷ್ಟಪಡಿಸುತ್ತವೆ. ಈ ನಿರ್ಣಯಗಳು ಅಂದಿನ ಸಮಾಜಕ್ಕೆ ದೊಡ್ಡ ಆಘಾತವನ್ನು ನೀಡಿದ್ದವು:
ಈ ಕೆಳಗಿನ ಪ್ರಮುಖ ನಿರ್ಣಯಗಳನ್ನು ಡಿಸೆಂಬರ್ 25, 1927 ರಂದು ಅಂಗೀಕರಿಸಲಾಯಿತು:

ಬಾಬಾ ಸಾಹೇಬರು ಪೌರೋಹಿತ್ಯದ ಬಗ್ಗೆ ಮಂಡಿಸಿದ ನಿರ್ಣಯವು ಅತ್ಯಂತ ಕ್ರಾಂತಿಕಾರಿಯಾಗಿತ್ತು. “ಹೇಗೆ ಐಸಿಎಸ್ (ICS) ಅಧಿಕಾರಿಗಳನ್ನು ಪರೀಕ್ಷೆಯ ಮೂಲಕ ಆಯ್ಕೆ ಮಾಡುತ್ತಾರೆಯೋ, ಹಾಗೆಯೇ ಅರ್ಚಕರನ್ನೂ ಅವರ ಜ್ಞಾನ ಮತ್ತು ನೈತಿಕತೆಯ ಆಧಾರದ ಮೇಲೆ ಆಯ್ಕೆ ಮಾಡಬೇಕು. ಪೌರೋಹಿತ್ಯವು ವಂಶಪಾರಂಪರ್ಯವಾಗಿರಬಾರದು” ಎಂದು ಅವರು ವಾದಿಸಿದರು.
ಮನುಸ್ಮೃತಿಯಿಂದ ಸಂವಿಧಾನದವರೆಗೆ
ಮನುಸ್ಮೃತಿ ದಹನದ ಐತಿಹಾಸಿಕ ಮಹತ್ವವನ್ನು ಅರಿಯಲು, ನಾವು ಅದನ್ನು ಭಾರತದ ಸಂವಿಧಾನದ ರಚನೆಯೊಂದಿಗೆ ಜೋಡಿಸಿ ನೋಡಬೇಕು. 1927ರಲ್ಲಿ ಅಂಬೇಡ್ಕರ್ ಅವರು ಯಾವ ಪುಸ್ತಕವನ್ನು ಸುಟ್ಟರೋ, ಅದಕ್ಕೆ ಪರ್ಯಾಯವಾಗಿ 1950ರಲ್ಲಿ ಅವರೇ ರಚಿಸಿದ ಸಂವಿಧಾನವು ಜಾರಿಗೆ ಬಂದಿತು. ಈ ಪಯಣವು ‘ದಬ್ಬಾಳಿಕೆಯ ಕಾನೂನಿ’ನಿಂದ ‘ವಿಮೋಚನೆಯ ಕಾನೂನಿ’ಗೆ ನಡೆದ ಪಯಣವಾಗಿದೆ.
ಅಸ್ಪೃಶ್ಯತೆ ನಿವಾರಣೆ: ಮನುಸ್ಮೃತಿಯು ಅಸ್ಪೃಶ್ಯತೆಯನ್ನು ವಿಧಿಸಿತು. ಆದರೆ ಸಂವಿಧಾನದ 17ನೇ ವಿಧಿ (Article 17) ಅಸ್ಪೃಶ್ಯತೆಯನ್ನು ರದ್ದುಗೊಳಿಸಿತು ಮತ್ತು ಅದರ ಆಚರಣೆಯನ್ನು ಅಪರಾಧವೆಂದು ಘೋಷಿಸಿತು.
ಸಮಾನತೆ: ಮನುಸ್ಮೃತಿಯು ಹುಟ್ಟಿನ ಆಧಾರದ ಮೇಲೆ ಅಸಮಾನತೆಯನ್ನು ಬೋಧಿಸಿತು. ಸಂವಿಧಾನದ 14ನೇ ವಿಧಿ (Article 14) “ಕಾನೂನಿನ ಮುಂದೆ ಎಲ್ಲರೂ ಸಮಾನ” ಎಂದು ಸಾರಿತು.
ಮಹಿಳಾ ಹಕ್ಕುಗಳು: ಮನುಸ್ಮೃತಿಯು ಮಹಿಳೆಯರಿಗೆ ಗೆ ಸ್ವಾತಂತ್ರ್ಯವನ್ನು ಸ್ವಾತಂತ್ರ್ಯವನ್ನು ನಿರಾಕರಿಸಿತು. ಸಂವಿಧಾನದ 15ನೇ ವಿಧಿ (Article 15) ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ನಿಷೇಧಿಸಿತು. ನಂತರ ಹಿಂದೂ ಕೋಡ್ ಬಿಲ್ ಮೂಲಕ ಅಂಬೇಡ್ಕರ್ ಅವರು ಮಹಿಳೆಯರಿಗೆ ಆಸ್ತಿ ಹಕ್ಕು ಮತ್ತು ವಿಚ್ಚೇದನದ ಹಕ್ಕನ್ನು ನೀಡಲು ಹೋರಾಡಿದರು ಮತ್ತು ಆ ಬಿಲ್ ಕಾನೂನಾಗಿ ಜಾರಿಯಾಗದ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.
ಜೀವಿಸುವ ಹಕ್ಕು: ಮನುಸ್ಮೃತಿಯು ಶೂದ್ರರ ಅಂಗಚ್ಛೇದನವನ್ನು ಸಮರ್ಥಿಸಿತು. ಸಂವಿಧಾನದ 21ನೇ ವಿಧಿ (Article 21) ಪ್ರತಿಯೊಬ್ಬ ವ್ಯಕ್ತಿಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡಿತು.
ಹೀಗಾಗಿ, ಮನುಸ್ಮೃತಿ ದಹನವು ಕೇವಲ ನಕಾರಾತ್ಮಕ ಕೃತ್ಯವಾಗಿರದೆ, ಭವಿಷ್ಯದ ಸಂವಿಧಾನಕ್ಕೆ ಅಡಿಪಾಯ ಹಾಕುವ ಸಕಾರಾತ್ಮಕ ಕ್ರಾಂತಿಯಾಗಿತ್ತು. ಬಾಬಾ ಸಾಹೇಬರು ಹಳೆಯದನ್ನು ಕೆಡವಿದ್ದು ಹೊಸದನ್ನು ಕಟ್ಟುವ ಸಲುವಾಗಿ ಎಂಬುದಕ್ಕೆ ಸಂವಿಧಾನವೇ ಸಾಕ್ಷಿ.
ಸುಡುವುದೇ ಪರಿಹಾರವೇ?
ಕೆಲವು ವಿಮರ್ಶಕರು ಪುಸ್ತಕಗಳನ್ನು ಸುಡುವುದು ಪ್ರಜಾಪ್ರಭುತ್ವ ವಿರೋಧಿ ಅಥವಾ ಅಸಹಿಷ್ಣುತೆಯ ಸಂಕೇತ ಎಂದು ವಾದಿಸಬಹುದು. ಆದರೆ ಅಂಬೇಡ್ಕರ್ ಅವರ ಸಂದರ್ಭದಲ್ಲಿ, ಮನುಸ್ಮೃತಿಯು ಕೇವಲ ಒಂದು ಸಾಹಿತ್ಯ ಕೃತಿಯಾಗಿರಲಿಲ್ಲ. ಅದು ಲಕ್ಷಾಂತರ ಜನರ ಬದುಕನ್ನು ನರಕವಾಗಿಸಿದ್ದ ಒಂದು ಸಕ್ರಿಯ ದಬ್ಬಾಳಿಕೆಯ ವ್ಯವಸ್ಥೆಯಾಗಿತ್ತು. ನಾಜಿಗಳು ಜರ್ಮನಿಯಲ್ಲಿ ಗಳು ಜರ್ಮನಿಯಲ್ಲಿ ಪುಸ್ತಕಗಳನ್ನು ಸುಟ್ಟದ್ದು ಜ್ಞಾನವನ್ನು ನಾಶಮಾಡಲು; ಆದರೆ ಅಂಬೇಡ್ಕರ್ ಮನುಸ್ಮೃತಿಯನ್ನು ಸುಟ್ಟಿದ್ದು ಅಜ್ಞಾನ ಮತ್ತು ದಬ್ಬಾಳಿಕೆಯನ್ನು ನಾಶಮಾಡಲು. ಇದು ಜ್ಞಾನದ ವಿರುದ್ಧದ ನಡೆಯಲ್ಲ, ಬದಲಿಗೆ ಅಮಾನವೀಯ ಸಿದ್ಧಾಂತದ ವಿರುದ್ಧದ ಪ್ರತಿರೋಧವಾಗಿತ್ತು.
ಮನುಸ್ಮೃತಿ ದಹನವು ದಲಿತ ಚಳವಳಿಗೆ ಹೊಸ ದಿಕ್ಕನ್ನು ನೀಡಿತು. ಅಲ್ಲಿಯವರೆಗೆ ದಲಿತರು ದೇವಸ್ಥಾನ ಪ್ರವೇಶಕ್ಕಾಗಿ ಅಥವಾ ಸಹಪಂಕ್ತಿ ಭೋಜನಕ್ಕಾಗಿ ಬೇಡುತ್ತಿದ್ದರು. ಆದರೆ ಮನುಸ್ಮೃತಿ ದಹನದ ಮೂಲಕ, ಅವರು ಹಿಂದೂ ಧರ್ಮದ ಮೂಲಭೂತ ರಚನೆಯನ್ನೇ ಪ್ರಶ್ನಿಸಲು ಪ್ರಾರಂಭಿಸಿದರು. “ನಮಗೆ ದಯೆ ಬೇಡ, ಹಕ್ಕು ಬೇಕು” ಎಂಬ ಸಂದೇಶವನ್ನು ಅದು ರವಾನಿಸಿತು.
ಇಂದಿಗೂ ಭಾರತದಲ್ಲಿ ಜಾತಿ ದೌರ್ಜನ್ಯಗಳು, ಗೌರವ ಹತ್ಯೆಗಳು ಮತ್ತು ಮಹಿಳೆಯರ ಮೇಲಿನ ದಬ್ಬಾಳಿಕೆಗಳು ನಡೆಯುತ್ತಿವೆ. ಇವುಗಳ ಮೂಲ ಎಲ್ಲೋ ಒಂದು ಕಡೆ ಮನುಸ್ಮೃತಿ ಪ್ರತಿಪಾದಿಸಿದ ಮೌಲ್ಯಗಳಲ್ಲಿ ಅಡಗಿದೆ. ಖಾಪ್ ಪಂಚಾಯಿತಿಗಳು ಅಂತರ್ಜಾತಿ ವಿವಾಹವನ್ನು ವಿರೋಧಿಸುವುದು ಮನುಸ್ಮೃತಿಯ ನೇರ ಪ್ರಭಾವವಾಗಿದೆ. ಆದ್ದರಿಂದ, ಅಂಬೇಡ್ಕರ್ ಅವರ ಮನುಸ್ಮೃತಿ ದಹನದ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಅಸಮಾನತೆಯ ಮನಸ್ಥಿತಿಯನ್ನು ಸುಡದ ಹೊರತು, ಸಂವಿಧಾನದ ಆಶಯಗಳು ಪೂರ್ಣವಾಗಿ ಈಡೇರುವುದಿಲ್ಲ.
ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು 1927ರ ಡಿಸೆಂಬರ್ 25 ರಂದು ಮನುಸ್ಮೃತಿಯನ್ನು ಸುಟ್ಟದ್ದು ಒಂದು ಸಾಂಕೇತಿಕ ಘಟನೆಯಾಗಿದ್ದರೂ, ಅದರ ಪರಿಣಾಮಗಳು ಶಾಶ್ವತವಾಗಿದ್ದವು. ಅವರು ಅಗ್ನಿಗೆ ಆಹುತಿ ನೀಡಿದ್ದು ಕೇವಲ ಕಾಗದದ ಹಾಳೆಗಳನ್ನಲ್ಲ, ಬದಲಿಗೆ ಶತಮಾನಗಳ ಅಸ್ಪೃಶ್ಯತೆ, ಅಜ್ಞಾನ ಮತ್ತು ಅಸಮಾನತೆಯ ಕತ್ತಲೆಯನ್ನು.
ಅವರು ನೀಡಿದ ಕಾರಣಗಳು ಸ್ಪಷ್ಟವಾಗಿದ್ದವು: ಮನುಸ್ಮೃತಿಯು ಮಾನವೀಯತೆಗೆ ವಿರುದ್ಧವಾಗಿತ್ತು, ಅದು ಶೂದ್ರರು ಮತ್ತು ಮಹಿಳೆಯರ ಘನತೆಯನ್ನು ಹತ್ತಿಕ್ಕಿತ್ತು ಮತ್ತು ಅದು ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಕಾಪಾಡಲು ಬಹುಸಂಖ್ಯಾತರನ್ನು ಬಲಿಪಶು ಮಾಡಿತ್ತು. ಅಂಬೇಡ್ಕರ್ ಅವರ ಈ ಧೈರ್ಯದ ನಡೆ, ಮುಂದೆ ಭಾರತದ ಸಂವಿಧಾನದಲ್ಲಿ “ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ”ದ ಮೌಲ್ಯಗಳು ಅಂತರ್ಗತವಾಗಲು ಪ್ರೇರಣೆಯಾಯಿತು.
ಮನುಸ್ಮೃತಿ ದಹನದ ದಿನವು ನಮಗೆ ನೆನಪಿಸುವುದು ಏನೆಂದರೆ, ಅನ್ಯಾಯವನ್ನು ಮೌನವಾಗಿ ಸಹಿಸುವುದು ಅನ್ಯಾಯ ಮಾಡುವುದಕ್ಕಿಂತ ದೊಡ್ಡ ಅಪರಾಧ. ಬಾಬಾ ಸಾಹೇಬರು ಹಚ್ಚಿದ ಆ ಕಿಡಿ, ಇಂದಿಗೂ ದಲಿತರು ಮತ್ತು ಶೋಷಿತರ ಎದೆಯಲ್ಲಿ ಸ್ವಾಭಿಮಾನದ ಬೆಂಕಿಯಾಗಿ ಉರಿಯುತ್ತಿದೆ. ಅವರು ಅಂದು ಹೇಳಿದ ಮಾತು ಇಂದಿಗೂ ಪ್ರತಿಧ್ವನಿಸುತ್ತಿದೆ: “ನಮ್ಮ ಹೋರಾಟ ಕೇವಲ ಸಂಪತ್ತಿಗಾಗಿ ಅಲ್ಲ, ಅಧಿಕಾರಕ್ಕಾಗಿ ಅಲ್ಲ; ನಮ್ಮ ಹೋರಾಟ ಸ್ವಾತಂತ್ರ್ಯಕ್ಕಾಗಿ, ಮನುಷ್ಯನ ಘನತೆಗಾಗಿ.”