Home ದೆಹಲಿ ವಿದೇಶಿ ನಿಧಿ ಬಳಕೆಗೆ ಮತ್ತಷ್ಟು ಬ್ರೇಕ್: ಎನ್‌ಜಿಒಗಳಿಗೆ ಎಫ್‌ಸಿಆರ್‌ಎ ನಿಯಮಗಳನ್ನು ಕಠಿಣಗೊಳಿಸಿದ ಕೇಂದ್ರ ಗೃಹ ಸಚಿವಾಲಯ!

ವಿದೇಶಿ ನಿಧಿ ಬಳಕೆಗೆ ಮತ್ತಷ್ಟು ಬ್ರೇಕ್: ಎನ್‌ಜಿಒಗಳಿಗೆ ಎಫ್‌ಸಿಆರ್‌ಎ ನಿಯಮಗಳನ್ನು ಕಠಿಣಗೊಳಿಸಿದ ಕೇಂದ್ರ ಗೃಹ ಸಚಿವಾಲಯ!

0

ದೆಹಲಿ: ದೇಶದಲ್ಲಿರುವ ಸ್ವಯಂಸೇವಾ ಸಂಸ್ಥೆಗಳು ವಿದೇಶಿ ದೇಣಿಗೆ ಮತ್ತು ಹಣಕಾಸು ನೆರವನ್ನು ಪಡೆಯುವ ಹಾಗೂ ಅದನ್ನು ಬಳಸುವ ನಿಯಮಾವಳಿಗಳನ್ನು ಕೇಂದ್ರ ಸರ್ಕಾರವು ಮತ್ತಷ್ಟು ಕಠಿಣಗೊಳಿಸಿದೆ. ಇದರ ಭಾಗವಾಗಿ ‘ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ’ ನಿಯಮಗಳು-2011 ಕ್ಕೆ ಹಲವು ಪ್ರಮುಖ ತಿದ್ದುಪಡಿಗಳನ್ನು ತರಲಾಗಿದ್ದು, ಕೇಂದ್ರ ಗೃಹ ಸಚಿವಾಲಯವು ಈ ಕುರಿತು ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ.

ಹೊಸದಾಗಿ ಪರಿಷ್ಕರಿಸಲಾದ ನಿಯಮಗಳ ಪ್ರಕಾರ, ಭಾರತೀಯ ಮೂಲದವರನ್ನು ಹೊರತುಪಡಿಸಿ, ಇತರ ಯಾವುದೇ ವಿದೇಶಿ ನಾಗರಿಕರು ಎನ್‌ಜಿಒ ಅಥವಾ ಅಸೋಸಿಯೇಷನ್‌ಗಳಲ್ಲಿ ಪ್ರಮುಖ ನಿರ್ವಾಹಕರು ಅಥವಾ ಪದಾಧಿಕಾರಿಗಳಾಗಿದ್ದರೆ, ಅಂತಹ ಸಂಸ್ಥೆಗಳಿಗೆ ವಿದೇಶಿ ನಿಧಿ ಪಡೆಯಲು ಯಾವುದೇ ಹೊಸ ನೋಂದಣಿ ಅಥವಾ ಮುಂಗಡ ಅನುಮತಿಯನ್ನು ನೀಡುವುದಿಲ್ಲ. ಆದರೆ, ಕೇಂದ್ರ ಸರ್ಕಾರವು ವಿಶೇಷ ಆದೇಶದ ಮೂಲಕ ಕೆಲವು ನಿರ್ದಿಷ್ಟ ಮತ್ತು ಅಪರೂಪದ ಸಂದರ್ಭಗಳಲ್ಲಿ ಮಾತ್ರ ವಿದೇಶಿ ಪೌರರು ಪ್ರಮುಖ ನಿರ್ವಾಹಕರಾಗಿರಲು ವಿನಾಯಿತಿ ನೀಡಬಹುದಾಗಿದೆ.

ಇನ್ನು ಮುಂದೆ ವಿದೇಶಿ ನಿಧಿಗಾಗಿ ಅರ್ಜಿ ಸಲ್ಲಿಸುವ ಎನ್‌ಜಿಒಗಳು ತಾವು ಯಾವ ನಿರ್ದಿಷ್ಟ ಉದ್ದೇಶಕ್ಕಾಗಿ ಮತ್ತು ದೇಶದ ಯಾವ ಪ್ರದೇಶದಲ್ಲಿ ಕೆಲಸ ಮಾಡಲು ಬಯಸುತ್ತೇವೆ ಎಂಬುದನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ಮತ್ತು ನಿಖರವಾಗಿ ತಿಳಿಸಬೇಕಾಗುತ್ತದೆ. ಇತ್ತೀಚಿನ ತಿದ್ದುಪಡಿಯಲ್ಲಿ ಧಾರ್ಮಿಕ ವಿಭಾಗದ ಅಡಿಯಲ್ಲಿ ಪ್ರಾರ್ಥನಾ ಮಂದಿರಗಳ ನಿರ್ಮಾಣ, ನಿರ್ವಹಣೆ, ಜೀರ್ಣೋದ್ಧಾರ, ಧಾರ್ಮಿಕ ಶಿಕ್ಷಣ ಮತ್ತು ಭಕ್ತಿ ಸಂಗೀತ ಪ್ರಚಾರದಂತಹ ವಿವಿಧ ಚಟುವಟಿಕೆಗಳನ್ನು ಸೇರಿಸಲಾಗಿದೆ. ಆದರೆ, ಈ ಯಾವುದೇ ಚಟುವಟಿಕೆಗಳ ಹೆಸರಿನಲ್ಲಿ ಧರ್ಮ ಮತಾಂತರಕ್ಕೆ ಅವಕಾಶ ಇರಬಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇದರೊಂದಿಗೆ, ಯಾವುದೇ ಎನ್‌ಜಿಒ ತನ್ನ ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸಿಕೊಳ್ಳಬೇಕಾದರೆ, ಆ ಸಂಸ್ಥೆಯು ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಕನಿಷ್ಠ ಅಥವಾ ಗರಿಷ್ಠವಾಗಿ 10 ಲಕ್ಷ ರೂಪಾಯಿ ವಿದೇಶಿ ದೇಣಿಗೆಯನ್ನು ಅಧಿಕೃತವಾಗಿ ದೇಶದ ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಿರಬೇಕು ಎಂಬ ಕಡ್ಡಾಯ ನಿಯಮವನ್ನು ವಿಧಿಸಲಾಗಿದೆ.

You cannot copy content of this page

Exit mobile version