ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಅವರು ತಮ್ಮ ತಂದೆ ಬಾಲಕೃಷ್ಣ ನಾಯ್ಕ್ ಮಾಡಿರುವ ಆರೋಪಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ. ತಂದೆಯ ಕುಡಿತದಿಂದ ತಾವು ಅನುಭವಿಸಿದ ಚಿತ್ರಹಿಂಸೆಯ ಬಗ್ಗೆ ತೆರೆದಿಟ್ಟು, ಅಂತಹ ತಂದೆಯ ಮಾತಿಗೆ ಯಾರೂ ಮಣಿಯಬಾರದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಬಾಲಕೃಷ್ಣ ನಾಯ್ಕ್ ಮಾಧ್ಯಮಗಳ ಮುಂದೆ ಚೈತ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. “ನನ್ನ ಮಗಳು ಕಳ್ಳಿ, ಅವಳನ್ನು ಮದುವೆಯಾದವನೂ ಕಳ್ಳ. ನನ್ನನ್ನು ಮದುವೆಗೆ ಕರೆದಿಲ್ಲ, ಈ ಮದುವೆಯನ್ನು ನಾನು ಒಪ್ಪುವುದಿಲ್ಲ” ಎಂದು ಆಕ್ಷೇಪಿಸಿದ್ದರು. ಈ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಚೈತ್ರಾ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಬರೆದು, ತಮ್ಮ ತಂದೆಯ ಕುಡಿತದಿಂದ ತಾವು ಎದುರಿಸಿದ ಕಷ್ಟಗಳನ್ನು ಎದುರಿಸಿದ್ದಾಗಿ ಹೇಳಿದ್ದಾರೆ.
“ಕುಡುಕ ತಂದೆಯಿಂದ ಬರುವ ಚಿತ್ರಹಿಂಸೆಯನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಯಾವ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾರ್ಟರ್ ಕೊಟ್ಟರೆ ನನ್ನ ಮಕ್ಕಳನ್ನೇ ದೇವರು ಎನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರು” ಎಂದು ಚೈತ್ರಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
“ಹೆತ್ತ ಮಕ್ಕಳನ್ನ ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲ, ಹೆಣ್ಣುಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ….. ಕಟ್ಟಿಕೊಂಡ ಹೆಂಡತಿಗೆ ಹೊಡೆದು ಚಿತ್ರ ಹಿಂಸೆ ಮಾಡಿದ್ದು ಬಿಟ್ರೆ ಬೇರೆ ಏನೂ ಇಲ್ಲಾ… ಎಲ್ಲಾ ಮುಗಿದ ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಎನ್ನುವ ಹೆಸರು… ವಾವ್…” ಎಂದು ಇನ್ನೊಂದು ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಒಟ್ಟಾರೆಯಾಗಿ ಅಪ್ಪ ಮಗಳ ಜಗಳ ಈಗ ಸೋಷಿಯಲ್ ಮೀಡಿಯಾದ ಮಂದಿಗೆ ಮನರಂಜನೆಯ ವಸ್ತುವಾಗಿ, ಟ್ರೋಲ್ ಸಾಮಾಗ್ರಿಯಾಗಿ ಸಮಯ ಕಳೆಯಲು ಒದಗುತ್ತಿದೆ.
