ಮಂಡ್ಯ: ಕಳೆದ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸ್ವತಂತ್ರ ಅಭ್ಯರ್ಥಿ ಪರ ಯಶ್ ಜೊತೆ ಸೇರಿ ಭರ್ಜರಿ ಪ್ರಚಾರ ಮಾಡಿ ಜೋಡೆತ್ತು ಎನ್ನಿಸಿಕೊಂಡಿದ್ದ ದರ್ಶನ್ ಈ ಬಾರಿ ಒಂಟಿಯಾಗಿ ಬಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎನ್ನುವ ಕುರಿತು ಕೊನೆಯ ಕ್ಷಣದವರೆಗೂ ಕುತೂಹಲವಿತ್ತು. ಸುಮಲತಾ ಮತ್ತು ಕುಮಾರಸ್ವಾಮಿ ನಡುವೆ ತೀವ್ರ ಪೈಪೋಟಿಯೂ ಏರ್ಪಟ್ಟಿತ್ತು. ಬಿಜೆಪಿ ಕೊನೆಗೆ ಅಳೆದು ತೂಗಿ ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡಿತ್ತು.
ಅಲ್ಲಿಯವರೆಗೆ ನಾನು ಮಂಡ್ಯ ಬಿಟ್ಟು ಬೇರೆಲ್ಲೂ ನಿಲ್ಲಲ್ಲ, ಮಂಡ್ಯ ಟಿಕೆಟ್ ನನಗೇ ಖಾತರಿ ಎನ್ನುತ್ತಿದ್ದ ಸುಮಲತಾ ಯಾಕೋ ನಂತರ ಇದ್ದಕ್ಕಿದ್ದಂತೆ ತಣ್ಣಗಾದರು.
ಈಗ ಕಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಕಣದಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ವೆಂಕಟರಮಣೇ ಗೌಡ ಕಣದಲ್ಲಿದ್ದಾರೆ. ಇವರನ್ನು ಸ್ಟಾರ್ ಚಂದ್ರು ಎಂದೂ ಕರೆಯಲಾಗುತ್ತದೆ.
ಪ್ರಸ್ತುತ ಮಂಡ್ಯದಲ್ಲಿ ದರ್ಶನ್ ಸ್ಟಾರ್ ಚಂದ್ರು ಪರ ಪ್ರಚಾರ ಮಾಡುತ್ತಿದ್ದು “ನಾನು ಯಾವುದೇ ಪಕ್ಷದ ಪರವಾಗಿ ಇಲ್ಲಿಗೆ ಬಂದಿಲ್ಲ. ವ್ಯಕ್ತಿಯ ಪರವಾಗಿ ಬಂದಿದ್ದೇನೆ. ಶಾಸಕ ನರೇಂದ್ರ ಸ್ವಾಮಿ ಆಪ್ತರಾಗಿದ್ದು, ಅವರು ಹೇಳಿದ್ದಕ್ಕೆ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ್ದೇನೆ. ಇದನ್ನು ಬೇರೆ ರೀತಿ ತಿಳಿದುಕೊಳ್ಳುವುದು ಬೇಡ. ನನಗೆ ಪಕ್ಷ ಮುಖ್ಯವಲ್ಲ ವ್ಯಕ್ತಿಗಳು ಮುಖ್ಯ” ಎಂದು ಹೇಳಿದ್ದಾರೆ.
ಇದೇ ವೇಳೆ ಲೋಕಸಭಾ ಚುನವಣೆಯಲ್ಲಿ ಎಲ್ಲರೂ ಬಂದು ಮತದಾನ ಮಾಡಿ, ನಿಮ್ಮ ಹಕ್ಕು ಚಲಾಯಿಸಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿ ಎಂದು ಸಹ ದರ್ಶನ್ ಕರೆ ನೀಡಿದರು.