ವಿಶ್ವದ ಅತಿದೊಡ್ಡ ಗ್ರಾಹಕ ಸರಕುಗಳು ಮತ್ತು ಶಿಶು ಆಹಾರ ಉತ್ಪಾದಕ ಸಂಸ್ಥೆಯಾದ ನೆಸ್ಲೆ, ತಾನು ಏಷ್ಯಾ ಮತ್ತು ಆಫ್ರಿಕಾದಾ ಖಂಡದ ದೇಶಗಳಲ್ಲಿ ಮಾರಾಟವಾಗುವ ಮಕ್ಕಳಿಗೆ ನೀಡಲಾಗುವ ಹಾಲು ಮತ್ತು ಧಾನ್ಯ ಆಧಾರಿತ ಆಹಾರಗಳಲ್ಲಿ ಸಕ್ಕರೆ ಸೇರಿಸುತ್ತಿರುವುದು ಕಂಡುಬಂದಿದೆ ಎಂದು ಸಂಶೋಧನಾ ಸಂಸ್ಥೆಯಾದ ಪಬ್ಲಿಕ್ ಐ ವರದಿ ಮಾಡಿದೆ.
ಒಂದು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಶಿಶುಗಳಿಗೆ ಹಾಲಿನ ಉತ್ಪನ್ನವಾದ ನಿಡೋದ ಮಾದರಿಗಳಲ್ಲಿ ಮತ್ತು ಆರು ತಿಂಗಳಿನಿಂದ ಎರಡು ವರ್ಷದೊಳಗಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಧಾನ್ಯ ಮೂಲದ ಆಹಾರ ಸೆರೆಲಾಕ್ ಪೂರಕದಲ್ಲಿ ನೆಸ್ಲೆ ಸುಕ್ರೋಸ್ ಅಥವಾ ಜೇನುತುಪ್ಪವನ್ನು ಪೂರಕ ಸಕ್ಕರೆ ಅಂಶವಾಗಿ ಸೇರಿಸುತ್ತಿದೆ ಎಂದು ಸ್ವಿಸ್ ಮೂಲದ ತನಿಖಾ ಸಂಸ್ಥೆ ವರದಿಯಲ್ಲಿ ಹೇಳಿಕೊಂಡಿದೆ.
ಗಮನಾರ್ಹವಾಗಿ, ಇದೇ ಉತ್ಪನ್ನಗಳು ಯುನೈಟೆಡ್ ಕಿಂಗ್ಡಮ್, ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಕ್ಕರೆ ಮುಕ್ತವಾಗಿವೆ ಎಂದು ಪಬ್ಲಿಕ್ ಐ ತನಿಖೆ ಬಹಿರಂಗಪಡಿಸಿದೆ.
2022ರಲ್ಲಿ ಮಾರಾಟವು 250 ಮಿಲಿಯನ್ ಡಾಲರ್ ವಹಿವಾಟು ಮೀರಿರುವ ಭಾರತದಲ್ಲಿ, ಸೆರೆಲಾಕ್ ಆಹಾರದ ಎಲ್ಲಾ ಮಾದರಿಗಳೂ ಹೆಚ್ಚುವರಿ ಸಕ್ಕರೆ ಅಂಶವನ್ನು ಹೊಂದಿವೆ, ಪ್ರತಿ ಬಾರಿಯ ಸೇವನೆ ಪ್ರಮಾಣದಲ್ಲಿ ಸರಾಸರಿ 3 ಗ್ರಾಂ ಸಕ್ಕರೆ ಅಂಶವಿದೆ ಎಂದು ವರದಿ ಒತ್ತಿ ಹೇಳಿದೆ. 2
ಅಂತೆಯೇ, ಆಫ್ರಿಕಾದ ಪ್ರಾಥಮಿಕ ಮಾರುಕಟ್ಟೆಯಾದ ದಕ್ಷಿಣ ಆಫ್ರಿಕಾದಲ್ಲಿ, ಸೆರೆಲಾಕ್ ಶಿಶು ಧಾನ್ಯಗಳ ಪ್ರತಿಯೊಂದು ಮಾದರಿಯು ಪ್ರತಿ ಸೇವನೆಗೆಗೆ ನಾಲ್ಕು ಗ್ರಾಂ ಅಥವಾ ಅದಕ್ಕಿಂತ ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತದೆ. 2022ರಲ್ಲಿ ಸರಿಸುಮಾರು $ 150 ಮಿಲಿಯನ್ ಮಾರಾಟದೊಂದಿಗೆ ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆಯಾದ ಬ್ರೆಜಿಲ್ ದೇಶದಲ್ಲಿ, ಮುಕ್ಕಾಲು ಭಾಗ ಸೆರೆಲಾಕ್ ಶಿಶು ಆಹಾರಗಳು (ಈ ಅದನ್ನು ದೇಶದಲ್ಲಿ ಮ್ಯೂಸಿಲಾನ್ ಎಂದು ಕರೆಯಲಾಗುತ್ತದೆ) ಹೆಚ್ಚುವರಿ ಸಕ್ಕರೆಯನ್ನು ಹೊಂದಿರುತ್ತವೆ, ಪ್ರತಿ ಬಾರಿಯ ಸೇವನೆಗೆ ಸರಾಸರಿ 3 ಗ್ರಾಂ ಸಕ್ಕರೆ ಅಂಶ ಮಗುವಿನ ದೇಹ ಸೇರುತ್ತಿತ್ತು.
ಬ್ರೆಜಿಲ್ ದೇಶದಲ್ಲಿ, ಮ್ಯೂಸಿಲಾನ್ ಹೆಸರಿನಲ್ಲಿ ಸಿಗುವ ಎಂಟು ಉತ್ಪನ್ನಗಳಲ್ಲಿ ಎರಡು ಸಕ್ಕರೆ ಮುಕ್ತವೆಂದು ಕಂಡುಬಂದರೆ, ಉಳಿದ ಆರು ಉತ್ಪನ್ನಗಳು ಪ್ರತಿ ಬಾರಿಯ ಸೇವನೆ ಅಳತೆಗೆ ಸುಮಾರು 4 ಗ್ರಾಂ ಸಕ್ಕರೆಯನ್ನು ಹೊಂದಿರುತ್ತವೆ. ನೈಜೀರಿಯಾದಲ್ಲಿ, ಒಂದು ಪರೀಕ್ಷಿಸಿದ ಉತ್ಪನ್ನವು 6.8 ಗ್ರಾಂ ಸಕ್ಕರೆಯನ್ನು ಹೊಂದಿತ್ತು.
ಏತನ್ಮಧ್ಯೆ, ಜಾಗತಿಕ ಚಿಲ್ಲರೆ ಮಾರಾಟವು $ 1 ಬಿಲಿಯನ್ ಮೀರಿರುವ ನಿಡೋ ಬ್ರಾಂಡ್ ಉತ್ಪನ್ನಗಳ ಪರೀಕ್ಷೆಗಳು ಸಕ್ಕರೆ ಅಂಶದಲ್ಲಿ ಗಮನಾರ್ಹ ಅಸಮಾನತೆಯನ್ನು ಹೊಂದಿದ್ದವು.
ಫಿಲಿಪೈನ್ಸ್ ದೇಶದಲ್ಲಿ, ಅಂಬೆಗಾಲಿಡುವ ಮಕ್ಕಳನ್ನು ಗುರಿಯಾಗಿಸಿಕೊಂಡ ಉತ್ಪನ್ನಗಳು ಹೆಚ್ಚುವರಿ ಸಕ್ಕರೆಯನ್ನು ಹೊಂದಿರುವುದಿಲ್ಲ. ಆದರೆ, ಇಂಡೋನೇಷ್ಯಾದಲ್ಲಿ, ಡಾನ್ಕೋವ್ ಹೆಸರಿನಲ್ಲಿ ಮಾರಾಟವಾಗುವ ನಿಡೋ ಶಿಶು ಆಹಾರ ಉತ್ಪನ್ನಗಳು, ಜೇನುತುಪ್ಪದ ರೂಪದಲ್ಲಿ ಪ್ರತಿ 100 ಗ್ರಾಂ ಉತ್ಪನ್ನಕ್ಕೆ ಸರಿಸುಮಾರು 2 ಗ್ರಾಂ ಹೆಚ್ಚುವರಿ ಸಕ್ಕರೆಯನ್ನು ಹೊಂದಿರುತ್ತವೆ, ಅಥವಾ ಪ್ರತಿ ಬಾರಿಯ ಸೇವನೆಯಲ್ಲಿ 0.8 ಗ್ರಾಂ.
ಭಾರತದಂತಹ ದೇಶದಲ್ಲಿ ಮಕ್ಕಳಲ್ಲಿನ ಬೊಜ್ಜು ಹೆಚ್ಚುತ್ತಿರುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ಹೀಗಿರುವಾಗ ಮಕ್ಕಳ ಪೂರಕ ಆಹಾರದಲ್ಲೂ ಸಕ್ಕರೆ ಅಂಶ ಕಂಡುಬಂದಿರುವುದು ನಿಜಕ್ಕೂ ಕಳವಳಕಾರಿ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.