ಚಾಮರಾಜನಗರ: ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ತನ್ನ ಗ್ರಾಮದಿಂದ ಬಹಿಷ್ಕಾರಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 17 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಶಿವರಾಜು (45) ಎಂದು ಗುರುತಿಸಲಾಗಿದ್ದು, ಶುಕ್ರವಾರ ಗುಂಡ್ಲುಪೇಟೆ ಪಟ್ಟಣದ ಯಡವನಹಳ್ಳಿಯಲ್ಲಿ ಘಟನೆ ನಡೆದಿದೆ.
ಸಂತ್ರಸ್ತನ ಕುಟುಂಬ, ಸ್ನೇಹಿತರು ಮತ್ತು ಗ್ರಾಮಸ್ಥರ ಗುಂಪು ಬೇಗೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಆತನ ವಿರುದ್ಧ ಬಹಿಷ್ಕಾರಕ್ಕೆ ಕರೆ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪೊಲೀಸರು 17 ಜನರ ಮೇಲೆ ಕೇಸು ದಾಖಲಿಸಿ ನ್ಯಾಯವನ್ನು ಖಾತ್ರಿಪಡಿಸಿದ ನಂತರ ಪ್ರತಿಭಟನೆ ಕೊನೆಗೊಂಡಿತು.
ಶಿವಣ್ಣ ನಾಯ್ಕ ಎನ್ನುವ ವ್ಯಕ್ತಿಯು ಗ್ರಾಮಸ್ಥನೊಬ್ಬನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದ. ಈ ಹಲ್ಲೆಯ ಕಾರಣಕ್ಕಾಗಿ ಗ್ರಾಮದ ಹಿರಿಯರು ಶಿವಣ್ಣನ ನಾಯ್ಕನ ಮೇಲೆ ಬಹಿಷ್ಕಾರ ಹೇರುವಂತೆ ಕರೆ ನೀಡಿದ್ದರು.
ಆದರೆ ಶಿವರಾಜು ಶಿವಣ್ಣ ನಾಯ್ಕನ ಬಗ್ಗೆ ಸಹಾನುಭೂತಿ ಹೊಂದಿದ್ದರು, ಇದರಿಂದ ಕುಪಿತಗೊಂಡ ಹಿರಿಯರು, ಶಿವರಾಜು ಬಹಿಷ್ಕೃತ ಶಿವಣ್ಣ ನಾಯ್ಕನ ಜೊತೆ ಕೈಜೋಡಿಸಿರುವುದರಿಂದಾಗಿ ಆತನ ಮೇಲೂ ಬಹಿಷ್ಕಾರ ವಿಧಿಸಿರುವುದಾಗಿ ಘೋಷಿಸಿದ್ದಾರೆ. ಜೊತೆಗೆ ಸಂತ್ರಸ್ತ ಶಿವರಾಜುವಿಗೆ 6,000 ರೂಪಾಯಿ ದಂಡವನ್ನೂ ವಿಧಿಸಿದ್ದರು.
ಇದರಿಂದ ನೊಂದು ಅವಮಾನ ತಾಳಲಾರದೆ ಶಿವರಾಜು ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.