Home ದೇಶ ಜಯಪ್ರದಾಗೆ ಶಾಕ್: 15 ದಿನಗಳಲ್ಲಿ ಶರಣಾಗುವಂತೆ ತಿಳಿಸಿದ ಹೈಕೋರ್ಟ್

ಜಯಪ್ರದಾಗೆ ಶಾಕ್: 15 ದಿನಗಳಲ್ಲಿ ಶರಣಾಗುವಂತೆ ತಿಳಿಸಿದ ಹೈಕೋರ್ಟ್

0

18 ವರ್ಷಗಳಿಂದ ತಮ್ಮ ಸಿನಿಮಾ ಥಿಯೇಟರ್‌ನಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಇಎಸ್‌ಐ ಪಾವತಿ ವಿಳಂಬದ ಪ್ರಕರಣ ಚಲನಚಿತ್ರ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರನ್ನು ಕಾಡುತ್ತಿದೆ.

ಆ ಪ್ರಕರಣದಲ್ಲಿ ತಮಗೆ ವಿಧಿಸಲಾಗಿದ್ದ 6 ತಿಂಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಜಯಪ್ರದಾ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್‌ನ ಪ್ರಧಾನ ಸೆಷನ್ಸ್ ನ್ಯಾಯಾಧೀಶರು ವಜಾಗೊಳಿಸಿದ್ದಾರೆ. 15 ದಿನಗಳೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗುವಂತೆ ಹಾಗೂ 20 ಲಕ್ಷ ರೂ.ಗಳನ್ನು ಠೇವಣಿ ಇಡುವಂತೆ ಆದೇಶಿಸಿದ್ದು, ಜೈಲು ಶಿಕ್ಷೆಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಕಾರ್ಮಿಕರಿಗೆ ಇಎಸ್ ಐ ಬಾಕಿ ಪಾವತಿ ವಿಳಂಬ ಪ್ರಕರಣದಲ್ಲಿ ಜಯಪ್ರದಾ ಹಾಗೂ ರಾಮ್ ಕುಮಾರ್ ಹಾಗೂ ರಾಜ್ ಬಾಬು ಅವರಿಗೆ ಚೆನ್ನೈನ ಎಗ್ಮೋರ್ ವಿಚಾರಣಾ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ, ಮೊದಲಿಗೆ ಪ್ರಧಾನ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದ ಜಯಪ್ರದಾ ಇತ್ತೀಚೆಗೆ ಹೈಕೋರ್ಟ್ ಮೊರೆ ಹೋಗಿದ್ದರು. ಎರಡೂ ಸ್ಥಳಗಳಲ್ಲಿ ಅವರಿಗೆ ನಿರಾಸೆಯಾಗಿದೆ.

ಏನಿದು ಪ್ರಕರಣ..?

ಕೆಲವು ಸಮಯದ ಹಿಂದೆ, ಜಯಪ್ರದಾ, ಚೆನ್ನೈನ ರಾಮ್ ಕುಮಾರ್ ಮತ್ತು ರಾಜ್ ಬಾಬು ಅವರೊಂದಿಗೆ ತಮಿಳುನಾಡಿನ ಅಣ್ಣಾಸಲೈಯಲ್ಲಿ ಥಿಯೇಟರ್ ಸ್ಥಾಪಿಸಿ ನಿರ್ವಹಿಸುತ್ತಿದ್ದರು. ಆ ಥಿಯೇಟರಿನಲ್ಲಿ ಅನೇಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಜಯಪ್ರದಾ ಅವರ ಜೊತೆಗೆ ರಾಮ್ ಕುಮಾರ್ ಮತ್ತು ರಾಜ್ ಬಾಬು ಉದ್ಯೋಗಿಗಳಿಗೆ ಇಎಸ್ ಐ ಪಾವತಿಸುವಲ್ಲಿ ಅವ್ಯವಹಾರ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ಈ ಕುರಿತು ಎಗ್ಮೋರ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಆ ಸಮಯದಲ್ಲಿ ಕೋರ್ಟ್ ಜಯಪ್ರದಾ ಮತ್ತು ಇನ್ನಿಬ್ಬರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ರೂ. 5,000 ದಂಡ ವಿಧಿಸಿ ಆಗಸ್ಟ್‌ನಲ್ಲಿ ತೀರ್ಪು ನೀಡಿತು.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಹಾಗೂ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಜಯಪ್ರದಾ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರು ಇಎಸ್‌ಐ ಬಾಕಿ ರೂ. 37.28 ಲಕ್ಷ ನೀಡುವಂತೆ ಕೇಳಲಾಗಿತ್ತು. ಇದರೊಂದಿಗೆ ಜಯಪ್ರದಾ ರೂ. 20 ಲಕ್ಷ ನೀಡುವುದಾಗಿ ಹೇಳಿದರು. ‌

ಇಎಸ್‌ಐ ಪರವಾಗಿ ಹಾಜರಾದ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಶುಕ್ರವಾರ ಜಯಪ್ರದಾ ಅರ್ಜಿಯನ್ನು ವಜಾಗೊಳಿಸಿ ತೀರ್ಪು ಪ್ರಕಟಿಸಿದೆ. 15 ದಿನದೊಳಗೆ ಶರಣಾಗತವಾಗುವುದಲ್ಲದೆ, ತಕ್ಷಣವೇ 20 ಲಕ್ಷ ರೂ.ಗಳನ್ನು ಜಮಾ ಮಾಡುವಂತೆಯೂ ಆದೇಶಿಸಿದೆ.

You cannot copy content of this page

Exit mobile version