ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪದ ಮೇಲೆ ಕರ್ನಾಟಕ ಪೊಲೀಸರು ಶನಿವಾರ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಈ ಸಂಬಂಧ ಕಾಂಗ್ರೆಸ್ ವಕ್ತಾರ ಸೂರ್ಯ ಮುಕುಂದರಾಜ್ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧ ತುಮಕೂರು ನಿವಾಸಿ ಶ್ರೀನಿವಾಸಮೂರ್ತಿ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯು ಫೇಸ್‌ಬುಕ್ ಖಾತೆಯಲ್ಲಿ ಹಿಂದೂಸ್ತಾನಿ ಸೇನೆ ಎಂಬ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಮೈಸೂರು ದಸರಾ ಆಚರಣೆ ವಿರುದ್ಧ ಆಕ್ಷೇಪಾರ್ಹ ಹಾಗೂ ಅವಮಾನಕರ ಪೋಸ್ಟರ್‌ಗಳನ್ನು ರಚಿಸಿದ್ದನು.
ಆರೋಪಿಯು ಮಹಿಷಾಸುರನ ದೇಹಕ್ಕೆ ಮುಖ್ಯಮಂತ್ರಿಯ ಮುಖವನ್ನು ಅಂಟಿಸಿ ಅದಕ್ಕೆ ಅವಹೇಳನಕಾರಿ ಅಡಿಬರಹ ಕೊಟ್ಟು ಶೇರ್ ಮಾಡಿದ್ದ ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾನೂನು ಕೋಶದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಆಗ್ರಹಿಸಿದ್ದರು.
ಪ್ರತ್ಯೇಕ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಆಕ್ಷೇಪಾರ್ಹ ಸೋಷಿಯಲ್ ಮೀಡಿಯಾ ಪೋಸ್ಟ್ ಸೃಷ್ಟಿಸಿರುವ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಕುರಿತು ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಂದಾವರ ದೂರು ದಾಖಲಿಸಿದ್ದಾರೆ.
ಸೋಮನಗೌಡ ಎಂಬಾತನ ವಿರುದ್ಧ ದೂರು ದಾಖಲಾಗಿತ್ತು. ಆರೋಪಿಗಳು ‘ಜೈ ಕರ್ನಾಟಕ’ ವಾಟ್ಸಾಪ್ ಗ್ರೂಪ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅವಮಾನಕರ ರೀತಿಯ ಚಿತ್ರಗಳನ್ನು ಶೇರ್ ಮಾಡಿದ್ದರು.
ಈ ಕುರಿತು ತನಿಖೆ ನಡೆಯುತ್ತಿದೆ.
