ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಇಂದು ಬುಧವಾರ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಇದು ಸೇರಿ ಅವರು ನಾಲ್ಕನೆ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಂತಾಗುತ್ತದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಚಂದ್ರಬಾಬು ನಾಯ್ಡು ಅವರು ಆಂಧ್ರದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ. ಕೇವಲ ತಿಂಗಳುಗಳ ಹಿಂದೆಯಷ್ಠೇ ಕೌಶಲ್ಯ ಅಭಿವೃದ್ಧಿ ಹಗರಣಕ್ಕೆ ಸಂಬಂಧಿಸಿ ಮನಿ ಲಾಂಡರಿಂಗ್ ತನಿಖೆಯಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ನಂತರ ಅವರು ಜೈಲು ಸೇರಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ನಾಯ್ಡು ಅವರು ಟಿಡಿಪಿಯನ್ನು ಬಿಜೆಪಿ ಮತ್ತು ಜನಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿದ್ದರು ಮತ್ತು ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು.
ಚಂದ್ರಬಾಬು ನಾಯ್ಡು ಜೊತೆಗೆ ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ‘ಪವರ್ ಸ್ಟಾರ್’ ಪವನ್ ಕಲ್ಯಾಣ್ ಕೂಡ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪವನ್ ಕಲ್ಯಾಣ್ ಅವರೊಂದಿಗೆ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಸೇರಿದಂತೆ 23 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜನಸೇನೆಗೆ ಮೂರು ಕ್ಯಾಬಿನೆಟ್ ಸ್ಥಾನಗಳು ದೊರೆತಿವೆ. ಬಿಜೆಪಿಯ ಸತ್ಯ ಕುಮಾರ್ ಯಾದವ್ ಅವರಿಗೆ ಕೂಡ ಆಂಧ್ರಪ್ರದೇಶದ ಸಚಿವ ಸಂಪುಟದಲ್ಲಿ ಅವಕಾಶವನ್ನು ನೀಡಿದ್ದು ವಿಶೇಷ.
ವಿಜಯವಾಡದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೂಪರ್‌ಸ್ಟಾರ್ ರಜನಿಕಾಂತ್, ನಟ ಚಿರಂಜೀವಿ, ತೆಲಂಗಾಣ ಮಾಜಿ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಮತ್ತು ಹಲವಾರು ನಾಯಕರು ಉಪಸ್ಥಿತರಿದ್ದರು.
2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 175 ಸ್ಥಾನಗಳಲ್ಲಿ 164 ಸ್ಥಾನಗಳನ್ನು ಗಳಿಸಿದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA)ಗೆ ಪ್ರಚಂಡ ವಿಜಯವನ್ನು ನೀಡಿತ್ತು. ಟಿಡಿಪಿ ಏಕಾಂಗಿಯಾಗಿ 135 ಸ್ಥಾನಗಳನ್ನು ಗೆದ್ದರೆ, ಪವನ್ ಕಲ್ಯಾಣ್ ಅವರ ಜನಸೇನೆ 21 ಸ್ಥಾನಗಳನ್ನು ಗಳಿಸಿತ್ತು ಮತ್ತು ಬಿಜೆಪಿ 8 ಸ್ಥಾನಗಳನ್ನು ಗಳಿಸಿತ್ತು. ಆಡಳಿತರೂಢ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಕೇವಲ 11 ಸ್ಥಾನಗಳನ್ನು ಮಾತ್ರ ಗಳಿಸಿಕೊಂಡಿತ್ತು.