Home ರಾಜಕೀಯ ಜೂನ್ 15 ಕ್ಕೆ ಹೆಚ್ಡಿಕೆ ರಾಜೀನಾಮೆ ಪಕ್ಕಾ ; ಮೈತ್ರಿ ಧರ್ಮಕ್ಕೆ ಮಗ್ಗಲ ಮುಳ್ಳಾಗುತ್ತ ಚನ್ನಪಟ್ಟಣ?

ಜೂನ್ 15 ಕ್ಕೆ ಹೆಚ್ಡಿಕೆ ರಾಜೀನಾಮೆ ಪಕ್ಕಾ ; ಮೈತ್ರಿ ಧರ್ಮಕ್ಕೆ ಮಗ್ಗಲ ಮುಳ್ಳಾಗುತ್ತ ಚನ್ನಪಟ್ಟಣ?

0

ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳಿಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೂರೂ ಪಕ್ಷಗಳಲ್ಲೂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲವಿದ್ದು, ಈಗ ಇದೇ ಅಂಶ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮೈತ್ರಿಧರ್ಮಕ್ಕೂ ಹೊಡೆತ ಬೀಳಬಹುದು ಎಂಬ ಅಂಶ ದಟ್ಟವಾಗಿ ಮನೆ ಮಾಡಿದೆ.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಶಾಸಕರಾಗಿದ್ದ ಚನ್ನಪಟ್ಟಣ ಈಗ ಅವರ ಸಂಸತ್ ಆಯ್ಕೆಯ ನಂತರ ಖಾಲಿ ಬಿದ್ದಿದೆ. ಈ ಮೂಲಕ 19 ಶಾಸಕರ ಬಲ ಹೊಂದಿದ್ದ ಜೆಡಿಎಸ್ ನಲ್ಲಿ ಈಗ ಶಾಸಕರ ಸಂಖ್ಯೆ 18 ಕ್ಕೆ ಕುಸಿದಿದೆ. ಜೆಡಿಎಸ್ ಈಗ ಪಕ್ಷದ ಏಕೈಕ ಉತ್ತರಾಧಿಕಾರಿ ನಿಖಿಲ್ ಅವರನ್ನು ಚನ್ನಪಟ್ಟಣದಿಂದ ಕಣಕ್ಕಿಳಿಸಲು ರಂಗಸ್ಥಳ ಸಜ್ಜುಗೊಳಿಸಿಕೊಂಡಿದೆ.

ಈ ನಡುವೆ ರಾಜ್ಯದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯಿಂದ ಪರಾಜಿತರಾದ ಬಿಜೆಪಿ ಮುಖಂಡ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಕೂಡ ತನಗಿರುವ ಏಕೈಕ ಕ್ಷೇತ್ರ ಬಿಟ್ಟುಕೊಡಲು ತಯಾರಿಲ್ಲ. ಇದನ್ನು ಈಗಾಗಲೇ ಹೈಕಮಾಂಡ್ ಗೆ ಮನದಟ್ಟು ಮಾಡಿರುವ ಸಿಪಿ ಯೋಗೇಶ್ವರ್ ‘ಹೀಗೆ ಮೈತ್ರಿ ಪಾಲನೆಗಾಗಿ ಕ್ಷೇತ್ರ ತ್ಯಜಿಸುತ್ತಾ ಹೋದರೆ ನಾಳೆ ಜೆಡಿಎಸ್ ಪಕ್ಷವೇ ಬಿಜೆಪಿಗೆ ದೊಡ್ಡ ಮುಳುವಾಗಬಹುದು’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇತ್ತೀಚಿಗಷ್ಟೆ ಕಾಂಗ್ರೆಸ್ ಪಕ್ಷ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೃತಜ್ಞತಾ ಸಭೆ ಹಮ್ಮಿಕೊಂಡಿದ್ದಾಗ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಲು ಕಾರ್ಯಕರ್ತರು ಒತ್ತಡ ಹಾಕಿದ್ದಾರೆ. ಅದು ಯಾವ ಮಟ್ಟಿಗೆಂದರೆ ಒಂದು ಹಂತದಲ್ಲಿ ಸಭೆ ನಡೆಯುತ್ತಿದ್ದ ವೇದಿಕೆಗೇ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಸುರೇಶ್ ಗೆ ಇಲ್ಲಿಂದ ಸ್ಪರ್ಧೆ ಮಾಡಲೇಬೇಕು, ನಿಮ್ಮನ್ನು ಗೆಲ್ಲಿಸಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದಿದ್ದರು.

ಆದರೆ ಡಿಕೆ ಸುರೇಶ್ ಚನ್ನಪಟ್ಟಣದಿಂದ ಸ್ಪರ್ಧೆ ವಿಚಾರದಲ್ಲಿ ಸ್ಪಷ್ಟವಾಗಿ ದೂರವಿದ್ದು, ಇನ್ನು ನನ್ನದೇನಿದ್ದರೂ ಪಕ್ಷ ಸಂಘಟನೆ ಬಲಪಡಿಸುವ ಕೆಲಸ ಎಂದು ಹೇಳಿದ್ದರು. ಇದರ ಜೊತೆಗೇ ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂಬ ಕುತೂಹಲದ ಅಂಶವನ್ನೂ ಕಾರ್ಯಕರ್ತರಲ್ಲಿ ಹೇಳಿದ್ದು ಈಗ ಅಭ್ಯರ್ಥಿ ಯಾರಾಗಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ.

ಇತ್ತ ತನ್ನ ತಂದೆಯಿಂದಲೇ ನಿರಂತರ ಅನ್ಯಾಯವಾಗುತ್ತಿದೆ ಎಂಬಂತೆ ತನ್ನ ಆಪ್ತರು ಮತ್ತು ಸಾಮಾಜಿಕ ವೇದಿಕೆಗಳಲ್ಲಿ ಹೇಳಿಕೊಳ್ಳುತ್ತಿರುವ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಇತ್ತ ನಿಖಿಲ್ ಮತ್ತು ಯೋಗೇಶ್ವರ್ ಯಾರೇ ನಿಂತರೂ ಪೈಪೋಟಿ ಜೋರಾಗಿಯೇ ಇರಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ನದ್ದಾಗಿದೆ. ಅಷ್ಟೇ ಅಲ್ಲದೇ ಡಿಕೆ ಸುರೇಶ್ ಅವರ ಸೋಲಿಗೆ ಚನ್ನಪಟ್ಟಣ ಪ್ರತಿಕಾರದ ಕಣ ಆಗಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಯೇ ತೀರುತ್ತೇವೆ ಎಂಬ ಹುಮ್ಮಸ್ಸಿನಲ್ಲಿದೆ.

ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯ ಪಕ್ಷದ ಮತಗಳ ಸಂಖ್ಯೆ ಗಣನೀಯ ಏರಿಕೆ ಕಂಡಿರುವುದು ಕಾಂಗ್ರೆಸ್ ಹುಮ್ಮಸ್ಸಿಗೆ ಮತ್ತೊಂದು ಕಾರಣ. ಬಿಜೆಪಿ ಜೆಡಿಎಸ್ ಮೈತ್ರಿ ಹೊರತುಪಡಿಸಿದ್ದರೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯದ್ದೇ ಮೇಲುಗೈ ಎಂಬಂತೆ ಮತಗಳ ಪ್ರಮಾಣದಲ್ಲಿ ಏರಿಕೆ ಕಂಡಿತ್ತು.

ಇತ್ತ ಕಾಂಗ್ರೆಸ್ ಗಿಂತ ಬಿಜೆಪಿ ಜೆಡಿಎಸ್ ಗೇ ಅಭ್ಯರ್ಥಿ ಆಯ್ಕೆ ದೊಡ್ಡ ಗೊಂದಲವಾಗಿದ್ದು, ಯೋಗೇಶ್ವರ್ ಈ ಬಾರಿಯೂ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟರೆ ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯ ಭವಿಷ್ಯ ಕೊನೆಗೊಳ್ಳುವುದು ಸ್ಪಷ್ಟ. ಅಷ್ಟೇ ಅಲ್ಲದೇ ಬಿಜೆಪಿ ನಾಯಕರ ಮೇಲಿನ ಅಸಮಾಧಾನಕ್ಕೆ ಯೋಗೇಶ್ವರ್ ಕಾಂಗ್ರೆಸ್ ಕಡೆ ಮುಖ ಮಾಡಿದರೂ ಆಶ್ಚರ್ಯವಿಲ್ಲ. ಹೀಗಾಗಿ ಬಿಜೆಪಿ ಪಕ್ಷ ಶತಾಯಗತಾಯ ಚನ್ನಪಟ್ಟಣ ಕ್ಷೇತ್ರದಲ್ಲಿ ಅಭ್ಯರ್ಥಿ ಕಣಕ್ಕಿಳಿಸಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಈ ನಿಟ್ಟಿನಲ್ಲಿ ಚನ್ನಪಟ್ಟಣ ಕ್ಷೇತ್ರ ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

You cannot copy content of this page

Exit mobile version