Home ಬ್ರೇಕಿಂಗ್ ಸುದ್ದಿ ಫಾತಿಮಾ ರಲಿಯಾ ಹೆಜಮಾಡಿಯವರಿಗೆ 2022ರ ಸಾಲಿನ ಛಂದ ಪುಸ್ತಕ ಬಹುಮಾನ

ಫಾತಿಮಾ ರಲಿಯಾ ಹೆಜಮಾಡಿಯವರಿಗೆ 2022ರ ಸಾಲಿನ ಛಂದ ಪುಸ್ತಕ ಬಹುಮಾನ

0

ಕನ್ನಡದ ಖ್ಯಾತ ಕಥಾ ಸ್ಪರ್ಧೆಗಳಲ್ಲಿ‌ ಒಂದಾದ ಛಂದ ಪುಸ್ತಕ ಬಹುಮಾನ ಸ್ಪರ್ಧೆಯ 2022ನೇ ಸಾಲಿನ ಪ್ರಶಸ್ತಿಯನ್ನು ಬರಹಗಾರರು ಮತ್ತು ಅಂಕಣಗಾರರಾಗಿ ಗುರುತಿಸಿಕೊಂಡಿರುವ ಫಾತಿಮಾ ರಲಿಯಾ ಹೆಜಮಾಡಿಯವರು ತಮ್ಮದಾಗಿಸಿಕೊಂಡಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಛಂದ ಪುಸ್ತಕದ ವಸುಧೇಂದ್ರ ಅವರು, “ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಫಾತಿಮಾ ರಲಿಯಾ ಪಡೆದುಕೊಂಡಿದ್ದಾರೆ. ಫಾತಿಮಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿರಂತರವಾಗಿ ಮೂರು ವರ್ಷ ಮಹಿಳೆಯರೇ ಈ ಬಹುಮಾನವನ್ನು ತೆಗೆದುಕೊಂಡಿರುವುದನ್ನು ಗಮನಿಸಿದಾಗ (ಛಾಯಾ ಭಟ್ – 2020, ಕಾವ್ಯ ಕಡಮೆ – 2021, ಫಾತಿಮಾ ರಲಿಯಾ – 2022) ಸದ್ಯದ ಕನ್ನಡ ಕಥನಲೋಕದಲ್ಲಿ ಕತೆಗಾರ್ತಿಯರು ಹೆಚ್ಚು ಚಟುವಟಿಕೆಯಿಂದ ಮುಂಚೂಣಿಯಲ್ಲಿ ಇದ್ದಾರೆನ್ನುವುದು ತಿಳಿಯುತ್ತದೆ,” ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ ಗ್ರಾಮದವರಾದ ಫಾತಿಮಾ ರಲಿಯಾ ಸದ್ಯಕ್ಕೆ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸಿಸುತ್ತಿದ್ದಾರೆ. ತಂದೆ ಅಬ್ದುಲ್ ರಶೀದ್ ಮತ್ತು ತಾಯಿ ಆಯಿಶಾ. ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವಿಯನ್ನು ಪಡೆದಿರುವ ಇವರು, ’ಕಡಲು ನೋಡಲು ಹೋದವಳು’ ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ಈ ವರ್ಷವೇ ಪ್ರಕಟಿಸಿದ್ದಾರೆ. ಇನ್ನೊಂದು ಕವನ ಸಂಕಲನ ಪ್ರಕಟಣೆಯ ಹಾದಿಯಲ್ಲಿದೆ. ಪೀಪಲ್‌ ಮೀಡಿಯಾ ಜೊತೆ ಮಾತನಾಡಿದ ಅವರು, “ನಾನು 2020ರಲ್ಲಿಯೂ ಈ ಸ್ಫರ್ದೆಗೆ ಕತೆಗಳನ್ನು ಕಳುಹಿಸಿದ್ದೆ ಆದರೆ ಆಗ ದೀರ್ಘ ಪಟ್ಟಿಯಲ್ಲಿ ಹೆಸರು ಬಂದಿತ್ತು. ಈ ಬಾರಿ ಮತ್ತೆ ಪ್ರಯತ್ನಿಸಿದೆ. ಪ್ರಶಸ್ತಿ ಬಂದಿದೆ. ಬಹಳ ಸಂತೋಷವಾಗಿದೆ,” ಎಂದು ಹೇಳಿದರು.

ಈ ಬಾರಿಯ ಸ್ಫರ್ಧೆಯಲ್ಲಿ 93 ಕತೆಗಾರರು ಪಾಲ್ಗೊಂಡಿದ್ದು, ಅಂತಿಮ ಸುತ್ತಿನಲ್ಲಿ ನಿರ್ದೇಶಕ ಗಿರೀಶ್‌ ಕಾಸರವಳ್ಳಿಯವರು ತೀರ್ಪುಗಾರರಾಗಿದ್ದರು.

ತೀರ್ಪುಗಾರರ ಟಿಪ್ಪಣಿಯಲ್ಲಿ ಕಾಸರವಳ್ಳಿಯವರು ಕತೆಗಳು ಮತ್ತು ಕತೆಗಾರರ ಕುರಿತು ಬರೆಯುತ್ತಾ, “ಬದುಕಿನ ಹಲವು ಸಂಕಟಗಳನ್ನು ಮತ್ತು ಸಂಕಷ್ಟಗಳನ್ನು ಇವರು ಆಳವಾದ ಕಾಳಜಿಯಿಂದ ಗಮನಿಸಿ ದಾಖಲಿಸುತ್ತಾರೆ. ಸಮಾಜವನ್ನು ವ್ಯಕ್ತಿಯ ನೆಲೆಯಿಂದಷ್ಟೇ ನೋಡದೆ, ಸಮುದಾಯದ ದೃಷ್ಟಿಯಿಂದ ನೋಡುತ್ತಾರೆ. ಕನ್ನಡ ಕಥನಲೋಕಕ್ಕೆ ಮುಸ್ಲಿಂ ಮಹಿಳೆಯರ ತಲ್ಲಣಗಳ ಕತೆಗಳನ್ನು ಈಗಾಗಲೇ ಸಾರಾ ಅಬೂಬಕ್ಕರ್ ಮತ್ತು ಬಾನು ಮುಷ್ತಾಕ್ ಅವರು ಕಟ್ಟಿಕೊಟ್ಟಿದ್ದಾರೆ. ಅವರಿಬ್ಬರ ಕತೆಗಳಲ್ಲಿ ಬರುವ ಪಾತ್ರಗಳಂತೆ, ಇವರ ಕತೆಗಳಲ್ಲೂ ಪಾತ್ರಚಿತ್ರಣವು ವಿಶಿಷ್ಟವಾಗಿದೆ. ಹೊರಸಮಾಜ ಕಟ್ಟಲಿಚ್ಚಿಸುವ ಏಕಶಿಲಾಕೃತಿಯ (ಸ್ಟೀರಿಯೋಟೈಪ್) ವ್ಯಕ್ತಿಗಳಿಗಿಂತಲೂ ಭಿನ್ನ ಪಾತ್ರಚಿತ್ರಣ ಇವುಗಳಲ್ಲಿ ಕಾಣಬಹುದು. ಧರ್ಮವು ಒಡ್ಡುವ ಹಲವು ಪ್ರಶ್ನೆಗಳಿಗೆ ಮುಖಾಮುಖಿಯಾಗಿ, ಧರ್ಮದ ಚೌಕಟ್ಟನ್ನು ದಾಟಿ ಬದುಕನ್ನು ನೋಡುವ ಆತ್ಮಸ್ಥೈರ್ಯ ಇವರಿಗಿದೆ. ಕೇವಲ ಪರ-ವಿರೋಧಗಳ ಯಾವುದೋ ಧ್ರುವದಲ್ಲಿ ನಿಲ್ಲದೆ, ಹಲವು ಆಯಾಮಗಳಿಂದ ಬದುಕನ್ನು ನೋಡುವ ಒಳನೋಟ ಇವರಿಗೆ ದಕ್ಕಿದೆ. ಹಿಂದೂ-ಮುಸ್ಲಿಂ ಸಂಬಂಧಗಳ ಸಾಮರಸ್ಯಗಳನ್ನು ಚಿತ್ರಿಸುತ್ತಲೇ, ಕ್ಷುಲ್ಲಕ ಘಟನೆಗಳಿಂದಾಗಿ ಅವು ಸಿಡಿದು ಹೋಗುವ ಅಸಹಾಯಕ ಸನ್ನಿವೇಶಗಳನ್ನು ಇವರು ಚಿತ್ರಿಸುತ್ತಾರೆ. ವಸ್ತು ವಿವರಗಳಲ್ಲಿ ನಾವಿನ್ಯತೆಯನ್ನು ತೋರುವ ರಲಿಯಾ, ಬದುಕಿನ ಘಟನೆಗಳನ್ನು ಪ್ರತ್ಯಕ್ಷವಾಗಿ ತೋರಿಸುತ್ತಲೇ ಪರೋಕ್ಷವಾಗಿ ಅದರ ಇನ್ನೊಂದು ಮಗ್ಗುಲನ್ನು ದರ್ಶಿಸುವುದರಿಂದ ಕಥಾವಸ್ತು ಹೆಚ್ಚು ಸಾಂದ್ರವಾಗಿ ಓದುಗರ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ.” ಎಂದು ಹೇಳಿದ್ದಾರೆ.

ಪ್ರಶಸ್ತಿಯು 40,000 ರೂಪಾಯಿ ಬಹುಮಾನ, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಈ ಸಂದರ್ಭದಲ್ಲಿ ಫಾತಿಮಾ ರಲಿಯಾ ಹೆಜಮಾಡಿಯವರನ್ನು ಪೀಪಲ್‌ ಮೀಡಿಯಾ ತುಂಬು ಹೃದಯದಿಂದ ಅಭಿನಂದಿಸುತ್ತದೆ.

You cannot copy content of this page

Exit mobile version