Home ಬೆಂಗಳೂರು ಹಾಸನ ಪೆನ್ ಡ್ರೈವ್ ಪ್ರಕರಣದ ತನಿಖಾಧಿಕಾರಿಗೆ – ಮುಖ್ಯಮಂತ್ರಿ ಪದಕ

ಹಾಸನ ಪೆನ್ ಡ್ರೈವ್ ಪ್ರಕರಣದ ತನಿಖಾಧಿಕಾರಿಗೆ – ಮುಖ್ಯಮಂತ್ರಿ ಪದಕ

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ತನಿಖೆಯನ್ನು ಯಶಸ್ವಿಯಾಗಿ ಮುನ್ನಡೆಸಿ 13 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದ ಹಾಸನದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ. ತಮ್ಮಯ್ಯ ಅವರಿಗೆ 2025ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ.

ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ, ಪ್ರಾಮಾಣಿಕತೆ ಹಾಗೂ ದಕ್ಷತೆ ಮೆರೆದ 153 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಪ್ರತಿಷ್ಠಿತ ಪದಕ ಪ್ರಕಟಿಸಲಾಗಿದೆ. ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಗುತ್ತದೆ.
ಒಟ್ಟು 153 ಮಂದಿಯ ಪಟ್ಟಿಯಲ್ಲಿ 6 ಮಂದಿ ಐಪಿಎಸ್ ಅಧಿಕಾರಿಗಳು ಸ್ಥಾನ ಪಡೆದಿದ್ದಾರೆ. ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್, ಉಡುಪಿ ಜಿಲ್ಲೆಯ ಡಾ. ಕೆ. ಅರುಣ್, ಯಾದಗಿರಿಯ ಪೃಥ್ವಿಕ್ ಶಂಕರ್, ಬೆಂಗಳೂರು ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಡಾ. ಗೋಪಾಲ ಎಂ. ಬ್ಯಾಕೋಡ, ಹಾಸನದ ಎಂ.ಕೆ. ತಮ್ಮಯ್ಯ ಹಾಗೂ ಶಿವಮೊಗ್ಗದ ಎಎಸ್‌ಪಿ-2 ಎಸ್. ರಮೇಶ್ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಗೌರವಕ್ಕೆ ಪಾತ್ರರಾಗಿದ್ದಾರೆ. ಜೊತೆಗೆ 12 ಮಂದಿ ಡಿವೈಎಸ್‌ಪಿಗಳು ಹಾಗೂ ವಿವಿಧ ಹಂತದ ಸಿಬ್ಬಂದಿಗೂ ಪದಕ ಲಭಿಸಿದೆ. ಪದಕ ವಿಜೇತರು ನಿಗದಿತ ಸಮವಸ್ತ್ರದಲ್ಲಿ ಸಮಾರಂಭಕ್ಕೆ ಹಾಜರಾಗುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಸೂಚಿಸಿದ್ದಾರೆ. ಗಮನಾರ್ಹವಾಗಿ, ಎಂ.ಕೆ. ತಮ್ಮಯ್ಯ ಅವರು ಇನ್ನೇನು ಕೆಲವೇ ತಿಂಗಳಲ್ಲಿ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

You cannot copy content of this page

Exit mobile version