ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಅಜಾಗರೂಕತೆಯ ಕಾರಣಕ್ಕೆ ಮಗು ಮೃತಪಟ್ಟ ಘಟನೆಯಿಂದ ರಾಜ್ಯದೆಲ್ಲೆಡೆ ಪೊಲೀಸರ ವಿರುದ್ಧ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಅಮಾನತಿನಲ್ಲಿ ಇಡಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಮತ್ತೆ ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಸಂಭವಿಸಿದ ಘಟನೆ ತಲೆತಗ್ಗಿಸುವಂತಹದ್ದು. ಈ ಸಂಬಂಧ ಇಂದು ಅಧಿಕಾರಿಗಳ ಸಭೆ ಕರೆದಿದ್ದೇನೆ. ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದರು.
ಪೊಲೀಸರು ಎಲ್ಲೋ ಮೂಲೆಯಲ್ಲಿ ನಿಂತು ದಿಢೀರ್ ಆಗಿ ಎದುರು ಬಂದು ತಡೆಯುತ್ತಾರೆ. ಪೊಲೀಸರು ಹೀಗೆ ಮಾಡಿದರೆ ವೇಗವಾಗಿ ಬರುವವರು ಖಂಡಿತಾ ಗಲಿಬಿಲಿ ಗೆ ಒಳಗಾಗಿ ಅಪಘಾತ ಸಂಭವಿಸಬಹುದು. ತಪಾಸಣೆ ನಡೆಸಲು ಅದರದ್ದೇ ಆದ ಒಂದು ಪದ್ಧತಿ ಇದೆ. ಅದನ್ನು ಪೊಲೀಸರು ಅನುಸರಿಸಬೇಕು ಎಂದು ಪರಮೇಶ್ವರ್ ಖಡಕ್ ಸೂಚನೆ ನೀಡಿದರು.
ಮಂಡ್ಯದ ಘಟನೆಯಲ್ಲಿ ಪೊಲೀಸರು ಮಾನವೀಯತೆ ತೋರಲಿಲ್ಲ, ಸ್ವಂತಿಕೆ ಪ್ರದರ್ಶಿಸಲಿಲ್ಲ. ಸರಿಯಾಗಿ ನಡೆದುಕೊಳ್ಳಲಿಲ್ಲ. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರೂ ಪೊಲೀಸರು ಬಿಡಲಿಲ್ಲ. ಇಂತಹ ಸಂದರ್ಭಗಳಲ್ಲಿ ಪೊಲೀಸರು ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಮಂಡ್ಯದಲ್ಲಿ ಸೋಮವಾರ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆ ಮಾಡುವ ವೇಳೆ ಬೈಕ್ ಸವಾರ ಪೊಲೀಸರ ಮುಂದೆ ನಿಲ್ಲಿಸಲು ಹೋಗಿ ಆಯತಪ್ಪಿದ ಕಾರಣ ಮೂರು ವರ್ಷ ಮಗು ಕೆಳಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿತ್ತು.