Home ವಿದೇಶ ಚಿಲಿಯಲ್ಲಿ ಭೀಕರ ಕಾಡ್ಗಿಚ್ಚು: 18 ಮಂದಿ ಸಾವು, ತುರ್ತು ಪರಿಸ್ಥಿತಿ ಘೋಷಣೆ

ಚಿಲಿಯಲ್ಲಿ ಭೀಕರ ಕಾಡ್ಗಿಚ್ಚು: 18 ಮಂದಿ ಸಾವು, ತುರ್ತು ಪರಿಸ್ಥಿತಿ ಘೋಷಣೆ

0

ಸ್ಯಾಂಟಿಯಾಗೊ: ಚಿಲಿಯಲ್ಲಿ ಉಂಟಾಗಿರುವ ಭೀಕರ ಕಾಡ್ಗಿಚ್ಚಿಗೆ ಕನಿಷ್ಠ 18 ಜನರು ಬಲಿಯಾಗಿದ್ದು, ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಿಲಿ ಅಧ್ಯಕ್ಷ ಗೇಬ್ರಿಯಲ್ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ರಾಜಧಾನಿ ಸ್ಯಾಂಟಿಯಾಗೊದಿಂದ ದಕ್ಷಿಣಕ್ಕೆ ಸುಮಾರು 500 ಕಿ.ಮೀ ದೂರದಲ್ಲಿರುವ ನ್ಯುಬಲ್ (Nuble) ಮತ್ತು ಬಯೋ ಬಯೋ (Bio Bio) ಪ್ರಾಂತ್ಯಗಳಲ್ಲಿ ಬೆಂಕಿ ಅತ್ಯಂತ ವೇಗವಾಗಿ ಹಬ್ಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸುಮಾರು 20,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಚಿಲಿ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ದೇಶಾದ್ಯಂತ ಸುಮಾರು 25 ಕಡೆಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದುವರೆಗೆ ಸುಮಾರು 8,500 ಹೆಕ್ಟೇರ್ (21,000 ಎಕರೆ) ಅರಣ್ಯ ನಾಶವಾಗಿದ್ದು, ಕನಿಷ್ಠ 250ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.

ಪ್ರಬಲವಾದ ಗಾಳಿ ಮತ್ತು ವಿಪರೀತ ಉಷ್ಣಾಂಶವೇ ಬೆಂಕಿ ವೇಗವಾಗಿ ಹರಡಲು ಕಾರಣವಾಗಿದೆ. ಸ್ಯಾಂಟಿಯಾಗೊದಿಂದ ಬಯೋ ಬಯೋವರೆಗಿನ ಪ್ರದೇಶಗಳಲ್ಲಿ ಉಷ್ಣಾಂಶವು 38 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ವರ್ಷದ ಆರಂಭದಿಂದಲೂ ಚಿಲಿ ಮತ್ತು ಅರ್ಜೆಂಟೀನಾ ದೇಶಗಳು ತೀವ್ರವಾದ ಬಿಸಿಗಾಳಿಯನ್ನು ಎದುರಿಸುತ್ತಿವೆ.

You cannot copy content of this page

Exit mobile version