ಚೆನ್ನೈ: ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುವುದು ಅಪಾಯಕಾರಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಳವಳ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಂಸ್ಕೃತಿ ಸಚಿವಾಲಯದ ಹಸ್ತಕ್ಷೇಪದಿಂದಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಘೋಷಣೆ ರದ್ದುಗೊಂಡಿರುವ ಹಿನ್ನೆಲೆಯಲ್ಲಿ, ತಮಿಳುನಾಡು ಸರ್ಕಾರವೇ ಮುತುವರ್ಜಿ ವಹಿಸಿ ಕನ್ನಡ, ತೆಲುಗು ಸೇರಿದಂತೆ ಹಿಂದಿಯೇತರ ಭಾಷೆಗಳ ಶ್ರೇಷ್ಠ ಕೃತಿಗಳಿಗೆ ರಾಷ್ಟ್ರೀಯ ಮಟ್ಟದ ಸಾಹಿತ್ಯ ಪ್ರಶಸ್ತಿ ನೀಡಲು ನಿರ್ಧರಿಸಿದೆ.
ಭಾನುವಾರ ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಈ ಮಹತ್ವದ ಘೋಷಣೆ ಮಾಡಿದ ಸ್ಟಾಲಿನ್, ‘ಸೆಮ್ಮೊಳಿ ಇಲಕ್ಕಿಯ ವಿರುದು’ (ಶ್ರೇಷ್ಠ ಭಾಷಾ ಸಾಹಿತ್ಯ ಪ್ರಶಸ್ತಿ) ಹೆಸರಿನಲ್ಲಿ ಈ ಪುರಸ್ಕ್ರಾರವನ್ನು ನೀಡಲಾಗುವುದು ಎಂದರು. ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ಮೊದಲ ಹಂತದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಒಡಿಯಾ, ಬೆಂಗಾಲಿ ಮತ್ತು ಮರಾಠಿ ಭಾಷೆಯ ಕೃತಿಗಳಿಗೆ ಪ್ರಶಸ್ತಿ ನೀಡಲಾಗುವುದು. ಇದಕ್ಕಾಗಿ ರಾಜಕೀಯ ಹಸ್ತಕ್ಷೇಪವಿಲ್ಲದ, ಸಾಹಿತ್ಯ ವಲಯದ ತಜ್ಞರನ್ನು ಒಳಗೊಂಡ ಸ್ವತಂತ್ರ ಆಯ್ಕೆ ಸಮಿತಿಯನ್ನು ರಚಿಸುವುದಾಗಿ ಅವರು ತಿಳಿಸಿದರು.
ಜಲ್ಲಿಕಟ್ಟು ವಿಜೇತರಿಗೆ ಸರ್ಕಾರಿ ಕೆಲಸ:
ಇದೇ ವೇಳೆ, ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಜಲ್ಲಿಕಟ್ಟು ವಿಜೇತರಿಗೆ ಸಿಎಂ ಸ್ಟಾಲಿನ್ ಬಂಪರ್ ಕೊಡುಗೆ ನೀಡಿದ್ದಾರೆ. ಮಧುರೈಯ ಅಲಂಗನಲ್ಲೂರಿನಲ್ಲಿ ನಡೆದ ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಅತಿ ಹೆಚ್ಚು ಹೋರಿಗಳನ್ನು ಪಳಗಿಸಿ ಗೆಲುವು ಸಾಧಿಸುವ ಕ್ರೀಡಾಪಟುಗಳಿಗೆ ಪಶುಸಂಗೋಪನಾ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ನೀಡುವುದಾಗಿ ಪ್ರಕಟಿಸಿದರು. ಮಧುರೈನಲ್ಲಿ ಜಲ್ಲಿಕಟ್ಟುಗಾಗಿ ನಿರ್ಮಿಸಲಾದ ವಿಶೇಷ ‘ಕಲೈஞர் ಸೆಂಟಿನರಿ ಅರೆನಾ’ ಒಂದು ದೊಡ್ಡ ಸಾಧನೆ ಎಂದು ಅವರು ಬಣ್ಣಿಸಿದರು.
