Home ದೆಹಲಿ ಬಿಜೆಪಿ ಸಹವಾಸ ಮಾಡಿದರೆ ನಿಮ್ಮ ಕಥೆ ಮುಗಿದಂತೆಯೇ: ಸಣ್ಣ ಪಕ್ಷಗಳಿಗೆ ಕಪಿಲ್ ಸಿಬಲ್ ಎಚ್ಚರಿಕೆ

ಬಿಜೆಪಿ ಸಹವಾಸ ಮಾಡಿದರೆ ನಿಮ್ಮ ಕಥೆ ಮುಗಿದಂತೆಯೇ: ಸಣ್ಣ ಪಕ್ಷಗಳಿಗೆ ಕಪಿಲ್ ಸಿಬಲ್ ಎಚ್ಚರಿಕೆ

0

ದೆಹಲಿ: ಸಣ್ಣ ಮತ್ತು ಪ್ರಾದೇಶಿಕ ಪಕ್ಷಗಳು ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬಾರದು. ಒಂದು ವೇಳೆ ಮೈತ್ರಿ ಮಾಡಿಕೊಂಡರೆ ಆ ಪಕ್ಷದ ಕಥೆ ಮುಗಿದಂತೆಯೇ ಎಂದು ಹಿರಿಯ ವಕೀಲ ಹಾಗೂ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಮೈತ್ರಿ ತಂತ್ರಗಾರಿಕೆಯ ಹಿಂದಿನ ಅಪಾಯವನ್ನು ಬಿಚ್ಚಿಟ್ಟರು. “ಬಿಜೆಪಿ ಅಧಿಕಾರ ಹಿಡಿಯಲು ಅಥವಾ ತಾವು ದುರ್ಬಲವಾಗಿರುವ ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಲು, ಆರಂಭದಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ. ಆದರೆ, ಒಮ್ಮೆ ತಮ್ಮ ಅವಶ್ಯಕತೆ ತೀರಿದ ಬಳಿಕ ಅಥವಾ ಅಧಿಕಾರ ಸಿಕ್ಕ ನಂತರ, ತಮಗೆ ಹೆಗಲು ಕೊಟ್ಟ ಮಿತ್ರಪಕ್ಷವನ್ನೇ ತುಳಿದು ಮೂಲೆಗುಂಪು ಮಾಡುವುದು ಕಮಲ ಪಾಳಯದ ತಂತ್ರವಾಗಿದೆ,” ಎಂದು ಗಂಭೀರ ಆರೋಪ ಮಾಡಿದರು.

ತಮ್ಮ ಮಾತಿಗೆ ಪೂರಕವಾಗಿ ಬಿಹಾರ ಮತ್ತು ಹರ್ಯಾಣದ ರಾಜಕೀಯವನ್ನು ಅವರು ಉದಾಹರಣೆಯಾಗಿ ನೀಡಿದರು. ಬಿಹಾರದಲ್ಲಿ ಜೆಡಿಯು (JD-U) ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿ, ಈಗ ಅಲ್ಲಿ ನಿತೀಶ್ ಕುಮಾರ್ ಅವರ ಪಕ್ಷವನ್ನೇ ಹಿಂದಿಕ್ಕಿ ಪ್ರಬಲ ಪಕ್ಷವಾಗಿ ಬೆಳೆದಿದೆ. ಅದೇ ರೀತಿ, ಹಿಂದೆ ಹರ್ಯಾಣದಲ್ಲಿ ಐಎನ್‌ಎಲ್‌ಡಿ (INLD) ಬೆಂಬಲದೊಂದಿಗೆ ಬೆಳೆದ ಬಿಜೆಪಿ, ನಂತರ ಅವರನ್ನು ಪಕ್ಕಕ್ಕೆ ಸರಿಸಿ ತಾನೇ ಅಧಿಕಾರ ಹಿಡಿದ ಇತಿಹಾಸವನ್ನು ಅವರು ನೆನಪಿಸಿದರು.

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳನ್ನು ಪ್ರಸ್ತಾಪಿಸಿದ ಸಿಬಲ್, ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳ ಸಂದರ್ಭದಲ್ಲೂ ಇದೇ ತಂತ್ರ ನಡೆಯುತ್ತಿದೆ ಎಂದರು. ಮೊದಲು ಶಿವಸೇನೆಯನ್ನು ಒಡೆದು, ನಂತರ ಏಕನಾಥ್ ಶಿಂಧೆ ಬಣದೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಧಿಕಾರ ಅನುಭವಿಸುತ್ತಿದೆ. ಅಂತಿಮವಾಗಿ ಈ ಮೈತ್ರಿ ಪಕ್ಷಗಳ ಅಸ್ತಿತ್ವವನ್ನೇ ಬಿಜೆಪಿ ಇಲ್ಲವಾಗಿಸುತ್ತದೆ ಎಂದು ಅವರು ವಿಶ್ಲೇಷಿಸಿದರು.

You cannot copy content of this page

Exit mobile version