ಚೀನೀ ಆನಿಮೇಷನ್ ಚಿತ್ರ ‘ನಿಯು ಲೈ’: ಕೇವಲ ₹1 ಲಕ್ಷ ಖರ್ಚಿನ ಚಿತ್ರ, ಈಗ ₹20 ಕೋಟಿ ಗಳಿಕೆಯ ಅಚ್ಚರಿಯ ಹಿಟ್!

ಬೀಜಿಂಗ್: ವಿಮರ್ಶಕರಿಂದ ‘2026ರ ಅತ್ಯಂತ ಕಳಪೆ ಸಿನಿಮಾ’ ಹಾಗೂ ‘ಕೃತಕ ಬುದ್ಧಿಮತ್ತೆಗಿಂತಲೂ (AI) ಕಡೆ’ ಎಂಬ ವ್ಯಂಗ್ಯಕ್ಕೆ ಗುರಿಯಾಗಿದ್ದ ಚೀನಾದ ಆನಿಮೇಟೆಡ್ ಚಲನಚಿತ್ರ ‘ನಿಯು ಲೈ’ (Niu Lai – ‘ದಿ ಕೌ ಈಸ್ ಕಮಿಂಗ್’) ಬಾಕ್ಸ್ ಆಫೀಸ್‌ನಲ್ಲಿ ಅನಿರೀಕ್ಷಿತ ಜಯಭೇರಿ ಬಾರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಕುರಿತು ಹರಿದಾಡಿದ ನಕಾರಾತ್ಮಕ ಟ್ರೋಲ್‌ಗಳು ಮತ್ತು ಕುತೂಹಲವೇ ಈ ಚಿತ್ರದ ಭರ್ಜರಿ ಯಶಸ್ಸಿಗೆ ಕಾರಣವಾಗಿದೆ.

ಕೇವಲ ಇಬ್ಬರು ವ್ಯಕ್ತಿಗಳಾದ ಕ್ಸಿನ್ ಯುಮೆಂಗ್ ಮತ್ತು ಸನ್ ಲಿಫಾಂಗ್ ಸೇರಿಕೊಂಡು ಸುಮಾರು ಐದು ವರ್ಷಗಳ ಕಾಲ ಶ್ರಮಪಟ್ಟು ಈ 86 ನಿಮಿಷಗಳ ಆನಿಮೇಷನ್ ಚಿತ್ರವನ್ನು ಸಿದ್ಧಪಡಿಸಿದ್ದರು. ಇವರಿಬ್ಬರೇ ಚಿತ್ರಕಥೆ, ನಿರ್ದೇಶನ, ನಿರ್ಮಾಣ ಹಾಗೂ ಡಬ್ಬಿಂಗ್ (ಧ್ವನಿ) ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. ನವಜಾತ ಕರು ಮತ್ತು ಹಕ್ಕಿಯೊಂದರ ಸುತ್ತ ಸಾಗುವ ಈ ಚಿತ್ರ ಆಗಸ್ಟ್ 5 ರಂದು ಬಿಡುಗಡೆಯಾದಾಗ ಯಾವುದೇ ಪ್ರಚಾರ, ಟ್ರೈಲರ್ ಅಥವಾ ಮಾರ್ಕೆಟಿಂಗ್ ಇರಲಿಲ್ಲ.

ಬಿಡುಗಡೆಯಾದ ಮೊದಲ 10 ದಿನಗಳಲ್ಲಿ ಕೇವಲ 300ಕ್ಕೂ ಕಡಿಮೆ ಮಂದಿ ಟಿಕೆಟ್ ಖರೀದಿಸಿದ್ದು, ಚಿತ್ರ ಗಳಿಸಿದ್ದು ಕೇವಲ 7,700 ಯುವಾನ್ (ಸುಮಾರು ₹1.04 ಲಕ್ಷ) ಮಾತ್ರ. ಆದರೆ ಚಿತ್ರದ ಕಳಪೆ ಗ್ರಾಫಿಕ್ಸ್, ಮರದಂತಿರುವ ಪಾತ್ರಗಳು ಮತ್ತು ಗೊಂದಲದ ಕಥೆಯನ್ನು ಟ್ರೋಲ್ ಮಾಡುವ ವಿಡಿಯೋ ಕ್ಲಿಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಸಿನಿಮಾ ಅಷ್ಟೊಂದು ಕಳಪೆಯಾಗಿದೆಯೇ ಎಂದು ಸ್ವತಃ ನೋಡುವ ಕುತೂಹಲದಿಂದ ಜನರು ಚಿತ್ರಮಂದಿರಗಳತ್ತ ಮುಗಿಬಿದ್ದರು.

ಪ್ರೇಕ್ಷಕರ ಈ ಅನಿರೀಕ್ಷಿತ ಆಸಕ್ತಿಯಿಂದಾಗಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 14.9 ಮಿಲಿಯನ್ ಯುವಾನ್ (ಸುಮಾರು ₹20 ಕೋಟಿ) ಗಳಿಕೆ ಮಾಡುವ ಮೂಲಕ ಭರ್ಜರಿ ಯಶಸ್ಸು ಕಂಡಿದೆ. ಆಧುನಿಕ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಈ ಚಿತ್ರದ ಸರಳ ಮತ್ತು ಕೈಯಿಂದ ಮಾಡಿದಂತಹ (ಹ್ಯಾಂಡ್‌ಮೇಡ್) ಶೈಲಿ ಕೆಲ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಿದೆ ಎಂದೂ ಪ್ರಶಂಸೆ ವ್ಯಕ್ತವಾಗಿದೆ.

Related Articles

ಇತ್ತೀಚಿನ ಸುದ್ದಿಗಳು