CJP ದೆಹಲಿ ಪ್ರತಿಭಟನೆ, ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ – ಸುಪ್ರೀಂ ಕೋರ್ಟ್ ಗರಂ

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ(CJP) ಶನಿವಾರ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಿಧಿಸಲಾಗಿರುವ ವಿಪರೀತ ನಿರ್ಬಂಧಗಳ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.ನಗರದ ವಿವಿಧ ಭಾಗಗಳಿಗೆ ಜನರು ಸಂಚರಿಸುವುದರಿಂದ ಎಲ್ಲವನ್ನೂ ಬಂದ್ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್, ಕೇಂದ್ರಕ್ಕೆ ತಿಳಿಸಿದ್ದು, ಪ್ರಯಾಣಿಕರ ಕುರಿತು ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ಯುವಕರು ಮತ್ತು ವೃದ್ಧರು ಸೇರಿದಂತೆ ಎಲ್ಲರೂ ಸಂಚರಿಸುತ್ತಾರೆ. ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳನ್ನು ಪಡೆಯುವ ಹಕ್ಕಿದೆ ಎಂದು ನ್ಯಾಯಾಲಯವು ಕೇಂದ್ರದ ಪರ ವಕೀಲರಿಗೆ ಹೇಳಿದ್ದು, ಮುಚ್ಚಲಾದ ಮೆಟ್ರೋ ನಿಲ್ದಾಣಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಸೂಚಿಸಿದೆ. ಸಿಪಿಎಂ (CPM) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ಮೆಟ್ರೋ ನಿಲ್ದಾಣ ಬಂದ್ ಮಾಡಿರುವುದನ್ನು ಮತ್ತು ರೈಲುಗಳ ರದ್ದತಿಯ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾಗಿದೆ, ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ಎಲ್ಲಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ನನ್ನ ದೇಶಕ್ಕೆ ಏನಾಗುತ್ತಿದೆ? ಇದೊಂದು ಶಾಂತಿಯುತ ಪ್ರತಿಭಟನೆ” ಎಂದು ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹಾಗೂ ಸಂಸದ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದರು.ಈ ಮೆಟ್ರೋ ನಿಲ್ದಾಣಗಳ ಪ್ರವೇಶದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಿರುವ ಬಗ್ಗೆ ನಮಗೆ ಮುಖ್ಯವಾಗಿ ಕಳವಳವಿದೆ. ನಮ್ಮ ಕಳವಳವು ಯಾವುದೇ ನಿರ್ದಿಷ್ಟ ಪ್ರತಿಭಟನಾಕಾರರು ಅಥವಾ ವ್ಯಕ್ತಿಗೆ ಸಂಬಂಧಿಸಿದ್ದಲ್ಲ; ಬದಲಾಗಿ, ತಮ್ಮ ಜೀವನೋಪಾಯಕ್ಕಾಗಿ ಗುರುಗ್ರಾಮ, ಗ್ರೇಟರ್ ನೋಯ್ಡಾ, ಪೂರ್ವ ದೆಹಲಿ ಮತ್ತು ದಕ್ಷಿಣ ದೆಹಲಿಯಿಂದ ದೆಹಲಿಗೆ ಪ್ರಯಾಣಿಸುವ ನೂರಾರು, ಸಾವಿರಾರು ಪ್ರಯಾಣಿಕರ ಹಿತದೃಷ್ಟಿಯಿಂದ ನಮಗೆ ಕಳವಳವಿದೆ,” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸಾಲಿಸಿಟರ್ ಜನರಲ್ ಅವರಿಗೆ ಹೇಳಿದರು.

ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲು ಕಾನೂನು ಜಾರಿ ಅಧಿಕಾರಿಗಳಿಗೆ ಖಂಡಿತವಾಗಿಯೂ ಅಧಿಕಾರವಿದೆ. ಇದರರ್ಥ ಎಲ್ಲವನ್ನೂ ಸ್ಥಗಿತಗೊಳಿಸಿ ಜನರಿಗೆ ಯಾವುದೇ ಸಾರಿಗೆ ಸೌಲಭ್ಯವಿಲ್ಲದಂತೆ ಮಾಡುವುದು ಎಂದಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಎಚ್ಚರಿಸಿದೆ.

Related Articles

ಇತ್ತೀಚಿನ ಸುದ್ದಿಗಳು