ಅಪರಿಚಿತನಾಗಿ ಬಂದೆ, ಈಗ ನನ್ನ ಕುಟುಂಬದವರು ಎಂಬ ಭಾವನೆಯೊಂದಿಗೆ ಹೊರಡುತ್ತಿದ್ದೇನೆ – ಸಿಜೆಪಿ ಅಭಿಜೀತ್ ದೀಪ್ಕೆ

ಬೆಂಗಳೂರು: ಅಪರಿಚಿತನಾಗಿ ಬಂದೆ, ಈಗ ನನ್ನ ಕುಟುಂಬದವರು ಎಂಬ ಭಾವನೆಯೊಂದಿಗೆ ಹೊರಡುತ್ತಿದ್ದೇನೆ ಎಂದು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಬೆಂಗಳೂರು ಭೇಟಿಯ ಬಗ್ಗೆ ಭಾವುಕ ಪೋಸ್ಟ್ ಮಾಡಿದ್ದಾರೆ. ತುಂಬು ಹೃದಯದ ಪ್ರೀತಿಯೊಂದಿಗೆ ಬೆಂಗಳೂರಿನಿಂದ ಹೊರಡುತ್ತಿದ್ದೇನೆ. ಕಳೆದ ಎರಡು ದಿನಗಳಲ್ಲಿ ನನಗೆ ದೊರೆತ ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ ಮತ್ತು ದಯೆ ನಿಜಕ್ಕೂ ನನ್ನ ಮನಸ್ಸನ್ನು ಆವರಿಸಿಕೊಂಡಿದೆ ಎಂದು ಅಭಿಜಿತ್ ಡಿಪ್ಕೆ ‘X'(ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.

ನನ್ನ ಈ ಹೊಸ ಕುಟುಂಬದಂತಿರುವ ಕವಿತಾ ಲಂಕೇಶ್ ಮತ್ತು ಇಶಾ ಲಂಕೇಶ್ ಅವರಿಗೆ ನನ್ನ ಪ್ರೀತಿಯ ಅಪ್ಪುಗೆ. ನಾನು ಇಲ್ಲಿಗೆ ಒಬ್ಬ ಅಪರಿಚಿತನಾಗಿ ಬಂದಿದ್ದೆ, ಆದರೆ ಈಗ ಅಂತಹ ಒಂದು ಕುಟುಂಬದೊಂದಿಗೆ ಮರಳುತ್ತಿದ್ದೇನೆ, ಅವರ ಬಳಿಗೆ ನಾನು ಮತ್ತೆ ಮತ್ತೆ ಬರುತ್ತಲೇ ಇರುತ್ತೇನೆ ಎಂಬುದು ನನಗೆ ಗೊತ್ತು ಎಂದು ಹೇಳಿದ್ದಾರೆ. ಹಾಗೆಯೇ, ನನ್ನನ್ನು ಆಹ್ವಾನಿಸಿ, ಬೆಂಗಳೂರಿನ ಅದ್ಭುತ ಆತ್ಮೀಯತೆ ಮತ್ತು ಉದಾರತೆಗೆ ನನ್ನನ್ನು ಪರಿಚಯಿಸಿದ್ದಕ್ಕಾಗಿ ನಟ ಪ್ರಕಾಶ್ ರಾಜ್ ಸರ್ ಹಾಗೂ ನನ್ನ ಹಿರಿಯ ಸಹೋದರಿ ಆಫ್ರೀನ್ ನವಾಜ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ನೀವೆಲ್ಲರೂ ನನಗೆ ಕೇವಲ ಸುಂದರ ನೆನಪುಗಳಿಗಿಂತ ಹೆಚ್ಚಿನದನ್ನು ನೀಡಿದ್ದೀರಿ. ನೀವು ನನಗೆ ಮತ್ತೆ ಬರಲು ಒಂದು ಮನೆಯನ್ನು ನೀಡಿದ್ದೀರಿ ಎಂದು ದೀಪ್ಕೆ ಪೋಸ್ಟ್ ಮಾಡಿದ್ದಾರೆ.

ವಿವಾದಿತ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ'(SIR) ರದ್ದುಗೊಳಿಸುವಂತೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಭಾರಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಸಿಜೆಪಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ, ವಕ್ತಾರ ಸೌರವ್ ದಾಸ್, ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್, ಯೂಟ್ಯೂಬರ್ ಮತ್ತು ರಾಜಕೀಯ ವಿಶ್ಲೇಷಕ ಧ್ರುವ್ ರಾಠೀ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಅವರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು