Home ರಾಜ್ಯ ಚಿತ್ರದುರ್ಗ ಚಿತ್ರದುರ್ಗ: ನಿವೃತ್ತ ಇಂಜಿನಿಯರ್ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆ, ಆತ್ಮಹತ್ಯೆ ಶಂಕೆ

ಚಿತ್ರದುರ್ಗ: ನಿವೃತ್ತ ಇಂಜಿನಿಯರ್ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆ, ಆತ್ಮಹತ್ಯೆ ಶಂಕೆ

0

ಬೆಂಗಳೂರು: ಚಿತ್ರದುರ್ಗದ ಜೈಲು ರಸ್ತೆಯಲ್ಲಿರುವ ಮನೆಯೊಂದರಲ್ಲಿ ಪೊಲೀಸರಿಗೆ ಐವರ ಅಸ್ಥಿಪಂಜರ ದೊರಕಿದೆ. ಫೋರೆನ್ಸಿಕ್ ತಂಡ ಮತ್ತು ಇತರ ಅಪರಾಧ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಮನೆಯೊಂದರ ಮುಂದೆ ತಲೆಬುರುಡೆ ಕಾಣಿಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ನಂತರ ಘಟನೆ ಬೆಳಕಿಗೆ ಬಂದಿದೆ.

ಘಟನೆ ಯಾವಾಗ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ ಆದರೆ ಮೂರು ವರ್ಷಗಳ ಹಿಂದೆ ಐವರ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇದು ನಿವೃತ್ತ ಪಿಡಬ್ಲ್ಯುಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಗನ್ನಾಥ ರೆಡ್ಡಿ ಎನ್ನುವವರಿಗೆ ಸೇರಿದ ಮನೆಯಾಗಿತ್ತು. ಅವರು ಪತ್ನಿ ಪ್ರೇಮಕ್ಕ ಮತ್ತು ಮಗಳು ತ್ರಿವೇಣಿ ಮತ್ತು ಗಂಡು ಮಕ್ಕಳಾದ ಕೃಷ್ಣಾ ರೆಡ್ಡಿ ಮತ್ತು ನರೇಂದ್ರ ರೆಡ್ಡಿ ಅವರೊಂದಿಗೆ ವಾಸಿಸುತ್ತಿದ್ದರು.

ಪ್ರದೇಶದ ನಿವಾಸಿಗಳ ಪ್ರಕಾರ, ಜಗನ್ನಾಥ ರೆಡ್ಡಿಯವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು ಮತ್ತು ಅವರ ಯಾವುದೇ ಮಕ್ಕಳಿಗೆ ಮದುವೆಯಾಗಿರಲಿಲ್ಲ.

ಕುಟುಂಬವು ಯಾರೊಂದಿಗೂ ಅಷ್ಟೇನೂ ಮಾತುಕತೆ ನಡೆಸುತ್ತಿರಲಿಲ್ಲ ಮತ್ತು ತಮ್ಮಷ್ಟಕ್ಕೆ ತಾವು ಇರುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಕುಟುಂಬ ಸದಸ್ಯರನ್ನು ನೋಡಿಲ್ಲ ಎಂದು ಅವರು ಹೇಳುತ್ತಾರೆ.

ನಾಯಿಯೊಂದು ಮನೆಯೊಳಗಿದ್ದ ತಲೆ ಬುರುಡೆಯೊಂದನ್ನು ಎಳೆದು ತಂದಿದ್ದು, ಇದನ್ನು ಕೆಲವರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಅಲ್ಲಿನನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಶರು ಸ್ಥಳಕ್ಕೆ ಬಂದು ನೋಡಿದಾಗ ಐದು ಭಾಗಶಃ ಕೊಳೆತಿದ್ದ ದೇಹಗಳು ಪತ್ತೆಯಾಗಿವೆ. ಘಟನೆ ಬೆಳಕಿಗೆ ಬರುವ ಮೊದಲು ಕಳ್ಳರು ಬಾಗಿಲು ಮುರಿದು ಮನೆಗೆ ಪ್ರವೇಶಿಸಿದ್ದು ನಂತರ ನಾಯಿಗಳು ಮನೆಯೊಳಗೆ ನುಗ್ಗಿರಬಹುದು ಎಂದು ಶಂಕಿಸಲಾಗಿದೆ.

ಜಗನ್ನಾಥ ರೆಡ್ಡಿಯ ಸಂಬಂಧಿ ಎನ್ನಲಾದ ಪವನ್‌ಕುಮಾರ್‌ ಎಂಬುವವರಿಂದ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಹಲವಾರು ವರ್ಷಗಳಿಂದ ಜಗನ್ನಾಥ್ ರೆಡ್ಡಿ ಜೊತೆ ಸಂಪರ್ಕದಲ್ಲಿಲ್ಲ ಎಂದು ದೂರುದಾರರು ಹೇಳಿದ್ದಾರೆ. ಅಸ್ಥಿಪಂಜರಗಳು ಜಗನ್ನಾಥ್ ಮತ್ತು ಅವರ ಕುಟುಂಬದವರಾಗಿರಬಹುದು ಎಂದು ಅವರು ಶಂಕಿಸಿದ್ದಾರೆ. ದೂರುದಾರರು ಸಾವಿನ ಕಾರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಅಸ್ಥಿಪಂಜರಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆ ನಡೆಸಲಾಗುವುದು. ಪೊಲೀಸರಿಗೆ ಮನೆಯಲ್ಲಿ 2019ರ ಕ್ಯಾಲೆಂಡರ್ ದೊರಕಿದ್ದು ಅದೇ ವರ್ಷದಲ್ಲಿ ಕುಟುಂಬವು ಆತ್ಮಹತ್ಯೆಯಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

You cannot copy content of this page

Exit mobile version