ನಾಗ್ಪುರ: ಒಬಿಸಿ ಮತ್ತು ದಲಿತರಿಗೆ ಅಧಿಕಾರ ನೀಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಸಂಸದ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಇಂಡಿಯಾ ವೇದಿಕೆ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಾಗುವುದು ಎಂದು ಅವರು ಈ ಸಭೆಯಲ್ಲಿ ತಿಳಿಸಿದರು. ಕಾಂಗ್ರೆಸ್‌ನ 139ನೇ ಸಂಸ್ಥಾಪನಾ ದಿನದ ಅಂಗವಾಗಿ ನಾಗ್ಪುರದಲ್ಲಿ ಗುರುವಾರ ನಡೆದ ‘ಹೈ ತೈಯಾರ್ ಹಮ್’ (ನಾವು ಸಿದ್ಧರಿದ್ದೇವೆ) ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. 50ರಷ್ಟು ಜನಸಂಖ್ಯೆ ಹೊಂದಿರುವ ಒಬಿಸಿಗಳು, ದಲಿತರು ಮತ್ತು ಆದಿವಾಸಿಗಳು ಹಲವು ಕ್ಷೇತ್ರಗಳಲ್ಲಿ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಒಬಿಸಿ, ದಲಿತ ಮತ್ತು ಬುಡಕಟ್ಟು ಜನಾಂಗದವರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಮೋದಿ ಸರಕಾರ ಯಾವ ಆಧಾರದ ಮೇಲೆ ಹೇಳುತ್ತದೆ ಎಂದು ಈ ವೇಳೆ ಪ್ರಶ್ನಿಸಿದರು.
ಅವರು ಏಕೆ ಅಧಿಕಾರ ಹಂಚಿಕೆ ಪ್ರಕ್ರಿಯೆಯ ಭಾಗವಾಗಿಲ್ಲ?’ ಅವರು ಕೇಳಿದರು. ಪ್ರಸ್ತುತ ದೇಶದಲ್ಲಿ ಸೈದ್ಧಾಂತಿಕ ಯುದ್ಧ ನಡೆಯುತ್ತಿದೆ ಎಂದರು. ಬಿಜೆಪಿ ಜೀತದಾಳುಗಳ ಪಕ್ಷವಾಗಿದ್ದು, ಇದು ಹಿಂದೆ ಬ್ರಿಟಿಷ್ ಸರ್ಕಾರದೊಂದಿಗೆ ಶಾಮೀಲಾದ ರಾಜಮನೆತನದ ಆಡಳಿತಗಾರರಂತೆಯೇ ಇದೆ ಎಂದು ಟೀಕಿಸಿದರು. ದೇಶದ ಪ್ರತಿಯೊಂದು ಸಂಸ್ಥೆಗಳು – ಮಾಧ್ಯಮಗಳು, ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ – ಆಡಳಿತ ಪಕ್ಷದ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದರು.
ಯಾರ ಮಾತಿಗೂ ಕಿವಿಗೊಡದ ಹಿಂದಿನ ಕಾಲದ ರಾಜರಂತೆ ಬೇಷರತ್ ವಿಧೇಯತೆ ಬೇಡುವುದು ಬಿಜೆಪಿಯ ಸಿದ್ಧಾಂತವಾಗಿದೆ ಎಂದು ಪ್ರತಿಕ್ರಿಯಿಸಿದರು. ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು. ಮೋದಿ ಆಡಳಿತದಲ್ಲಿ ನಿರುದ್ಯೋಗ ತೀವ್ರವಾಗಿ ಹೆಚ್ಚಿದೆ ಎಂದು ಅವರು ಕಿಡಿಕಾರಿದರು. 2024ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಸಭೆಯಲ್ಲಿ ದೇಶಾದ್ಯಂತ ಕಾಂಗ್ರೆಸ್ ನಾಯಕರು ಮತ್ತು ಮಹಾರಾಷ್ಟ್ರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.