ಬೆಂಗಳೂರು: ನಗರದ ವರ್ತೂರಿನ ಐಷಾರಾಮಿ ಅಪಾರ್ಟ್‌ಮೆಂಟ್ ಒಂದರಲ್ಲಿ ಗುರುವಾರ ಸಂಜೆ ವಿದ್ಯುತ್ ಸ್ಪರ್ಶದಿಂದ 10 ವರ್ಷದ ಬಾಲಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಆಸ್ತಿ ನಿರ್ವಹಣಾ ಏಜೆನ್ಸಿಯೇ ಕಾರಣ ಎಂದು ಆರೋಪಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದರು. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಳನ್ನು 10 ವರ್ಷದ ಬಾಲಕಿ ಮಾನ್ಯ ಎಂದು ಗುರುತಿಸಲಾಗಿದೆ. ವರ್ತೂರಿನ ಪ್ರೆಸ್ಟೀಜ್ ಲೇಕ್‌ಸೈಡ್ ಹ್ಯಾಬಿಟೇಟ್ ಅಪಾರ್ಟ್‌ಮೆಂಟ್‌ನಲ್ಲಿ ರಾತ್ರಿ 7:30ರ ಸುಮಾರಿಗೆ ಈ ಘಟನೆ ನಡೆದಿದೆ. ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿದೆ.
ಗುರುವಾರ ಸಂಜೆ ಅಪಾರ್ಟ್‌ಮೆಂಟ್‌ನ ಸ್ವಿಮ್ಮಿಂಗ್ ಪೂಲ್ ಬಳಿ ಹೋಗಿದ್ದ ಬಾಲಕಿ ಮಾನ್ಯ ವಿದ್ಯುತ್ ತಂತಿ ತಗುಲಿ ವಿದ್ಯುತ್ ಶಾಕ್‌ಗೆ ಒಳಗಾಗಿದ್ದಳು ಎನ್ನಲಾಗಿದೆ. ನಂತರ ಆಕೆ ಈಜುಕೊಳಕ್ಕೆ ಬಿದ್ದಿದ್ದಾಳೆ . ಸ್ಥಳೀಯರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ ಎಂದು ಘೋಷಿಸಲಾಯಿತು.
ಈಜುಕೊಳದ ಬಳಿ ವಿದ್ಯುತ್ ಅವಘಡ ಸಂಭವಿಸುತ್ತಿದೆ ಎಂದು ಹಲವು ಬಾರಿ ದೂರು ನೀಡಿದರೂ ನಿರ್ವಹಣಾ ಸಂಸ್ಥೆ ಸರಿಪಡಿಸದಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಬಾಲಕಿಯ ಸಾವಿಗೆ ಕಾರಣರಾದ ನಿರ್ವಹಣಾ ವ್ಯವಸ್ಥಾಪಕರು ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಪ್ರತಿಭಟನೆ ನಡೆಸಿ ಪೊಲೀಸರಿಗೆ ಒತ್ತಾಯಿಸಿದರು.
ಬಾಲಕಿಯ ಪೋಷಕರು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
“ಹಿಂದೆ, ವಿದ್ಯುತ್ ಶಾಕ್ ಹೊಡೆಯುವ ಕುರಿತು ದೂರು ಇತ್ತು ಆದರೆ ಆಸ್ತಿ ನಿರ್ವಹಣೆ ಸೇವೆಯು ಕ್ರಮ ಕೈಗೊಂಡಿಲ್ಲ. ಈ ದುರಂತಕ್ಕೆ ವಸತಿ ಸಂಕೀರ್ಣ ನಿರ್ವಹಣಾ ಏಜೆನ್ಸಿಯೇ ಹೊಣೆಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ನಿವಾಸಿಯೊಬ್ಬರು ಒತ್ತಾಯಿಸಿದರು.
ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ ಎಂದು ಪ್ರಾಪರ್ಟಿ ಮ್ಯಾನೇಜರ್ ಹೇಳಿದ್ದಾರೆ.