ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣಗೆ ಸಣ್ಣ ರಿಲೀಫ್ ನೀಡಿದ ಸಿಐಡಿ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೆಡಿಎಸ್ ನಾಯಕ ವಿಧಾನ ಪರಿಷತ್​ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣಗೆ ಈಗ ಸಣ್ಣ ರಿಲೀಫ್ ಸಿಕ್ಕಂತಾಗಿದೆ.‌ ಪ್ರಕರಣದ ಅಡಿಯಲ್ಲಿ ತನಿಖೆ ನಡೆಸುತ್ತಿದ್ದ ಸಿಐಡಿ ಸೂರಜ್ ರೇವಣ್ಣ ಆರೋಪದ ಸಂಬಂಧ ಬಿ ರಿಪೋರ್ಟ್ ಸಲ್ಲಿಸಿದೆ.

ತನ್ನದೇ ಪಕ್ಷದ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಸೂರಜ್ ರೇವಣ್ಣ ವಿರುದ್ಧ ದೂರು ದಾಖಲಾಗಿತ್ತು. 2024ರ ಜೂನ್ 22 ರಂದು ಸಂತ್ರಸ್ತ ದೂರು ನೀಡಿದ್ದರು. ಅದರಂತೆ, ಜೂನ್ 23 ರಂದು ಸೂರಜ್ ರೇವಣ್ಣರನ್ನು ಬಂಧಿಸಲಾಗಿತ್ತು.

ಸರ್ಕಾರದ ಆದೇಶದ ಮೇಲೆ ಪ್ರಕರಣ ಸಿಐಡಿ ವಹಿಸಿಕೊಂಡಿತ್ತು. ಅದರಂತೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಈಗ ಪ್ರಕರಣದ ಅಡಿಯಲ್ಲಿ ಮತ್ತೊಂದು ಬಿ ರಿಪೋರ್ಟ್ ಸಲ್ಲಿಸಿದೆ.

ಸೂರಜ್ ರೇವಣ್ಣ ವಿರುದ್ಧ ಬ್ರಿಗೇಡ್ ಖಜಾಂಚಿ ನೀಡಿದ್ದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಸಿಐಡಿ ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ.

ಮತ್ತೊಂದೆಡೆ, ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎಂಬವರು ಸಂತ್ರಸ್ತನ ವಿರುದ್ಧ ಪ್ರತಿ ದೂರು ನೀಡಿದ್ದರು. ಸೂರಜ್ ರೇವಣ್ಣ ವಿರುದ್ಧ ದೂರುದಾರ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿ, ಐದು ಕೋಟಿ ರೂ. ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಬ್ಲ್ಯಾಕ್​​ಮೇಲ್ ಮಾಡಿದ್ದರು ಎಂದು ಶಿವಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಅಂತಿಮವಾಗಿ ಇದೀಗ ಒಂದು ಪ್ರಕರಣದಲ್ಲಿ ಸೂರಜ್​ ರೇವಣ್ಣ ನಿರಾಳರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು