ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಿಟಿ ರವಿ ಅವಾಚ್ಯ ಪದಗಳಿಂದ ನಿಂದಿಸಿದ್ದರು ಎನ್ನಲಾದ ಪ್ರಕರಣ ಹಾಗೂ ಸಚಿವರ ಸಹಚರರ ವಿರುದ್ಧ ಹಲ್ಲೆ ಪ್ರಕರಣಗಳ ತನಿಖೆ ಜವಾಬ್ದಾರಿಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು ಪ್ರಕರಣದ ತನಿಖೆಗೆ ಪಿಎಸ್ ಐ ನೇಮಕಾತಿ ಹಗರಣದ ಸಾರಥ್ಯ ವಹಿಸಿದ್ದ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತನಿಖಾ ತಂಡವನ್ನು ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ರಚಿಸಿದ್ದು, ಡಿವೈ ಎಸ್ಪಿ ಕೇಶವಮೂರ್ತಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು ಬೆಳಗಾವಿ ಪೊಲೀಸರನ್ನು ಸಂಪರ್ಕಿಸಿ ಪ್ರಾಥಮಿಕ ಮಾಹಿತಿ ಪಡೆದಿದ್ದು, ಇಂದು ಬೆಳಗಾವಿಗೆ ಭೇಟಿ ನೀಡಿ ತನಿಖೆ ನಡೆಸಲಿದ್ದಾರೆ. ಸಿಟಿ ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ನಡೆದ ವಾಕ್ಸಮರ ಮತ್ತು ಅದು ನಡೆದಿದೆ ಎನ್ನಲಾದ ವಿಧಾನ ಪರಿಷತ್ ಸಭಾಂಗಣದ ಸಂಪೂರ್ಣ ಸ್ಥಳ ಮಹಜರನ್ನು ಈ ತಂಡ ಮಾಡಲಿದೆ.
ಇನ್ನು ಖಾಸಗಿ ವಾಹಿನಿಯಲ್ಲಿ ಬಿತ್ತರವಾಗಿರುವ ವಿಡಿಯೋ ತುಣುಕನ್ನೂ ಸಹ ತನಿಖಾ ತಂಡ ಪರಿಗಣನೆಗೆ ತಗೆದುಕೊಳ್ಳಲಿದೆ. ಹಾಗೆಯೇ ವಿಧಾನ ಮಂಡಲದ ಕಲಾಪದ ನೇರಪ್ರಸಾರ ಮಾಡಿದ ವಿಡಿಯೋದಲ್ಲಿ ಈ ವಿಡಿಯೋ ಸ್ಪಷ್ಟವಾಗಿ ಇದೆಯೇ ಎಂದು ತಂಡ ತನಿಖೆ ನಡೆಸಲಿದೆ.