Home ಬ್ರೇಕಿಂಗ್ ಸುದ್ದಿ 11 ಸಾವಿರ ಪೌರ ಕಾರ್ಮಿಕರ ಖಾಯಂಗೊಳಿಸಿದ ಬಗ್ಗೆ ಪೌರ ಕಾರ್ಮಿಕ ಸಂಘಟನೆ ಆಕ್ಷೇಪ

11 ಸಾವಿರ ಪೌರ ಕಾರ್ಮಿಕರ ಖಾಯಂಗೊಳಿಸಿದ ಬಗ್ಗೆ ಪೌರ ಕಾರ್ಮಿಕ ಸಂಘಟನೆ ಆಕ್ಷೇಪ

0
ರಾಜ್ಯ ಸರ್ಕಾರ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹನ್ನೊಂದು ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗುವುದು ಎಂದು ಆದೇಶ ಹೊರಡಿಸಿದೆ. ಆದರೆ ಈ ಆದೇಶವನ್ನು ರಾಜ್ಯ ಪೌರ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ವಿರೋಧಿಸಿದೆ.

ಪೌರ ಕಾರ್ಮಿಕರ ಸಂಘಟನೆಗಳಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಜುಲೈನಲ್ಲಿ ಅಹೋರಾತ್ರಿ ಧರಣಿ ನಡೆದಿತ್ತು. ಆ ಧರಣಿಯ ಎರಡನೇ ದಿನಕ್ಕೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೌರ ಕಾರ್ಮಿಕರ ಸಂಘಟನೆ ಮುಖ್ಯಸ್ಥರನ್ನು ಭೇಟಿ ಮಾಡಿ ಧರಣಿ ವಾಪಸ್ ತಗೆದುಕೊಳ್ಳುವಂತೆ ಮನವಿ ಮಾಡಿದ್ದರು.

ತಮ್ಮ ಬೇಡಿಕೆಗಳನ್ನು ಮುಂದಿಟ್ಟಾಗ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯಾದ್ಯಂತ ಇರುವ ಎಲ್ಲಾ ಪೌರ ಕಾರ್ಮಿಕರನ್ನು ಒಂದೇ ಬಾರಿಗೆ ಖಾಯಂಗೊಳಿಸಲಾಗುವುದು ಎಂದು ಭರವಸೆ ಕೊಟ್ಟಿದ್ದರು. ಆದರೆ ಈಗ ಕೇವಲ 11 ಸಾವಿರ ಪೌರ ಕಾರ್ಮಿಕರನ್ನು ಮಾತ್ರ ಖಾಯಂಗೊಳಿಸಿರುವ ಉದ್ದೇಶ ಏನು ಎಂಬ ಬಗ್ಗೆ ಪೌರ ಕಾರ್ಮಿಕರ ಜಂಟಿ ಸಮಿತಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಇದರ ಜೊತೆಗೆ ಈ ಆದೇಶವನ್ನು ಸರ್ಕಾರ ವಾಪಸ್ ತಗೆದುಕೊಳ್ಳಬೇಕು ಎಂದು ಪೌರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ. ಈ ಹಿಂದೆ ಜುಲೈ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ 30,000 ಕ್ಕೂ ಮಿಕ್ಕಿ ಇರುವ ಪೌರ ಕಾರ್ಮಿಕರನ್ನು ಖಾಯಂ ಗೊಳಿಸಲಾಗುವುದು ಎಂದು ಪತ್ರ ಮುಖೇನವೇ ಭರವಸೆ ನೀಡಿದ್ದರು. ಆದರೆ ಮುಖ್ಯಮಂತ್ರಿ ಮಾತಿಗೆ ತಪ್ಪಿ ನಡೆದಿದ್ದಾರೆ ಎಂದು ಸಮಿತಿ ನೇರವಾಗಿ ಆರೋಪಿಸಿದೆ.

ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಬಗ್ಗೆ ಭರವಸೆ ನೀಡಿದ ಸಂದರ್ಭದಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಈಗಾಗಲೇ ಮೂರು ಬಾರಿ ಮೀಟಿಂಗ್ ಗಳನ್ನು ಕರೆದು ಯಾವ ಯಾವ ರೀತಿಯಲ್ಲಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಬಹುದು ಎಂದು ಸರ್ಕಾರಕ್ಕೆ ಕೊಡಲು ವರದಿ ಸಿದ್ದಪಡಿಸಿತ್ತು. ಆದರೆ ಸರ್ಕಾರ ರಾತ್ರೋರಾತ್ರಿ ಸಮಿತಿಯ ವರದಿಯನ್ನೂ ಲೆಕ್ಕಿಸದೆ, ಸಮಿತಿಯ ಸಲಹೆಗಳನ್ನೂ ತಗೆದುಕೊಳ್ಳದೇ 11,000 ಪೌರ ಕಾರ್ಮಿಕರನ್ನು ಖಾಯಂಗೊಳಿಸಿರುವುದು ಖಂಡನೀಯ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಉಳಿದ ಪೌರ ಕಾರ್ಮಿಕರು, ಒಳಚರಂಡಿ ಕಾರ್ಮಿಕರು, ಲೋಡರ್ಸ್ ಗಳು, ಕ್ಲೀನರ್ ಗಳು, ಡ್ರೈವರ್ ಗಳ ಖಾಯಮಾತಿ ಯಾವಾಗ ಎಂದು ಸಮಿತಿ ಸರ್ಕಾರವನ್ನು ಪ್ರಶ್ನಿಸಿದೆ. ಈ ಖಾಯಮಾತಿ ದುರುದ್ದೇಶದಿಂದ ಕೂಡಿದ್ದು, ಪೌರ ಕಾರ್ಮಿಕರ ಒಗ್ಗಟ್ಟನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಸಂಘಟನೆ ಆರೋಪಿಸಿದೆ. ಹಾಗಾಗಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಎಲ್ಲಾ ಪೌರ ಕಾರ್ಮಿಕರ ಸಂಘಟನೆಗಳನ್ನು ಒಗ್ಗೂಡಿಸಿ ಶೀಘ್ರದಲ್ಲೇ ಮತ್ತೆ ದೊಡ್ಡ ಮಟ್ಟದ ಹೋರಾಟಕ್ಕೆ ಕರೆ ಕೊಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಈ ಬಗ್ಗೆ ಇಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೌರ ಕಾರ್ಮಿಕರ ಸಂಘಟನೆಯ ಜಂಟಿ ಸಮಿತಿ ಈ ಮಾಹಿತಿಯನ್ನ ತಿಳಿಸಿದೆ. ಇದರ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಎಲ್ಲಾ ಸಂಘಟನೆಗಳು ಒಟ್ಟಾಗಿ ಮುಂದಿನ ಹೋರಾಟಕ್ಕೆ ಕರೆ ಕೊಡಲಾಗುವುದು ಎಂದು ಪತ್ರಿಕಾಗೋಷ್ಠಿ ಕರೆಯಬೇಕು ಎಂದು ಎಲ್ಲಾ ಸಂಘಟನೆಗಳಿಗೆ ರಾಜ್ಯ ಸಂಚಾಲಕರಾದ ಡಾ.ಕೆ.ಬಿ ಓಬಳೇಶ್ ಮನವಿ ಮಾಡಿದ್ದಾರೆ.

You cannot copy content of this page

Exit mobile version