Home ಇಕಾಲಜಿ ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ | ಭಾಗ 1

ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ | ಭಾಗ 1

0

ಪ್ರತಿಯೊಂದು ದೇಶದ ಪ್ರತಿಯೊಂದು ಸಮಾಜದ ಪ್ರತೀ ವ್ಯಕ್ತಿಯು ತನ್ನ ನಿತ್ಯಬದುಕಿನಲ್ಲಿ ಹವಾಮಾನ ಬದಲಾವಣೆಗಳು ಉಲ್ಬಣಗೊಳ್ಳದಂತೆ ಕಾರ್ಬನ್ ಉಗುಳದಿರುವ ಅಥವಾ ಅತಿ ಕಡಿಮೆ ಉಗುಳುವಂತಹ ಚಟುವಟಿಕೆಯನ್ನು ಹೇಗೆ ಹಮ್ಮಿಕೊಳ್ಳಬೇಕು ಎಂದು ಆಲೋಚಿಸುವಂತಾಗಬೇಕು ಕೆ.ಎಸ್.ರವಿಕುಮಾರ್.

ಸಪೋರೊ ಪಟ್ಟಣ ಜಪಾನಿನಲ್ಲಿದೆ. ಹೊಕಾಯಿಡೊ ಪ್ರಿಫೆಕ್ಚರಿನ ರಾಜಧಾನಿ. 2022ರ ಫೆಬ್ರವರಿಯ ಚಳಿಗಾಲದಲ್ಲಿ ಅದು ಜಗತ್ತಿನ ಗಮನ ಸೆಳೆಯಿತು. 24 ತಾಸಿನ ಗಡುವಿನಲ್ಲಿ ಅಲ್ಲಿ 60 ಸೆಂ.ಮೀ. (2 ಅಡಿಯಷ್ಟು) ಮಂಜು ಬಿತ್ತು. ಅಲ್ಲಿನ ನಿವಾಸಿಗಳು ಇದು ಒಂದು ದಿನದ ವಿದ್ಯಮಾನ ಎಂದುಕೊಂಡರು. ಆದರೆ ಹಾಗಾಗಲಿಲ್ಲ. ಮಂಜು ಬೀಳುತ್ತಲೇ ಹೋಯಿತು. ಚಳಿಗಾಲ ಮುಗಿಯುವ ಹೊತ್ತಿಗೆ ಒಟ್ಟು ಬಿದ್ದ ಮಂಜಿನ ಪ್ರಮಾಣ 1,190 ಸೆಂ.ಮೀ.(11.9 ಮೀಟರ್)ಗೆ ತಲುಪಿತ್ತು. ಕೆಲವು ದಿನ ಮಂಜು ಎಷ್ಟು ಬಿತ್ತೆಂದರೆ ಅದರ ಮೇಲೆ ಹತ್ತಿ ವಿದ್ಯುತ್ ತಂತಿಗಳನ್ನು ಸಲೀಸಾಗಿ ಮುಟ್ಟಬಹುದಿತ್ತು (ಹಾಗಂತ ಯಾರೂ ಮುಟ್ಟಲು ಹೋಗಲಿಲ್ಲ ಅನ್ನಿ). ರಸ್ತೆಗಳೆಲ್ಲ ಮುಚ್ಚಿಹೋದವು. ಹೇಗೋ ನಡುವೆ ನಡೆದು ಹೋಗುವಷ್ಟು ಕಾಲುದಾರಿಗಳನ್ನು ಜನ ಮಾಡಿಕೊಂಡರು. ವಿಮಾನ, ರೈಲು. ಬಸ್ ಸಂಚಾರಗಳು ನಿಂತುಹೋದವು. ಮನೆಗಳು ಮಂಜಿನಡಿ ಹೂತುಹೋದವು. ಗಟ್ಟಿಸಿ ಸುರಂಗ ಕೊರೆದುಕೊಂಡು ಹಗಲು ಬೆಳಕಿಗೆ ಬರಬೇಕಿತ್ತು. ಉತ್ತರ ಧ್ರುವ ಮತ್ತು ಸೈಬೀರಿಯಾ ಕಡೆಯಿಂದ ಬೀಸಿದ ಮಂಜಿನ ಗಾಳಿಗಳಿಗೆ ಸಪೋರೊ ಬೆಬ್ಬಳಿಸಿಹೋಯಿತು. ಹಿಂದೆಲ್ಲ ಇಷ್ಟೊಂದು ಥಂಡಿಯನ್ನು ಮಂಜಿನ ಗಾಳಿಗಳು ತಂದಿರಲಿಲ್ಲ. ಒಂದೊಮ್ಮೆ ತಂದಿದ್ದರೂ ಇಡಿಯ ಚಳಿಗಾಲವನ್ನು ಜನ ಅವ್ಯಕ್ತ ಅಂಜಿಕೆಯಲ್ಲಿ ಕಳೆಯುವಂತೆ ಮಾಡಿರಲಿಲ್ಲ. ಕಳೆದ ಮೂರ್ನಾಲ್ಕು ವರುಷಗಳಿಂದ ಸಪೋರೊ ಇರುವ ಉತ್ತರ ಜಪಾನ್ ಅತಿಯಾದ ಮಂಜಿನ ದಾಳಿಗೆ ತುತ್ತಾಗುತ್ತ ಬರುತ್ತಿದೆ. ಹವಾಮಾನ ಬದಲಾವಣೆಯ ಮತ್ತೊಂದು ಅತಿರೇಕ ಇದು.

ಸಪೋರೊ 1972ರಲ್ಲಿ ಚಳಿಗಾಲದ ಒಲಿಂಪಿಕ್ಸ್‌ನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತ್ತು. ಪ್ರತೀವರುಷ ಇಲ್ಲಿ ಸಡಗರದ ಮಂಜಿನ ಹಬ್ಬ ನಡೆಯುತ್ತದೆ. ಇಂತಹ ಸಪೋರೊದಲ್ಲಿ ಜಪಾನ್ ಸರ್ಕಾರ ಮೊನ್ನೆ ಅಂದರೆ ಕಳೆದ ಏಪ್ರಿಲ್ 15, 16ರಂದು ಉ7 ಸದಸ್ಯ ದೇಶಗಳ ಮಂತ್ರಿಗಳ ಸಭೆಯನ್ನು ನಡೆಸಿತು. ಸಭೆಯ ಮುಖ್ಯ ಅಜೆಂಡಾ ‘ಹವಾಮಾನ’ (ಬದಲಾವಣೆ), ‘ಶಕ್ತಿ’(ಯ ಬಳಕೆ) ಮತ್ತು ‘ಪರಿಸರ’ (ರಕ್ಷಣೆಯ) ಕುರಿತಾಗಿತ್ತು. ಈ ಸಭೆಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ, ಕುಕ್ ನಡುಗಡ್ಡೆಗಳು, ಇಂಡೋನೇಶಿಯಾ, ವಿಯೆಟ್ನಾಮ್, ಬ್ರೆಜಿಲ್ ಮುಂತಾದ ದೇಶಗಳ ಜೊತೆಗೆ ಭಾರತಕ್ಕೂ ವಿಶೇಷ ಕರೆ ಇತ್ತು. ಭಾರತದ ಕಡೆಯಿಂದ ಒಕ್ಕೂಟ ಸರ್ಕಾರದ ಪರಿಸರ ಮಂತ್ರಿ ಭೂಪೇಂದರ್ ಯಾದವ್ ಪಾಲ್ಗೊಂಡಿದ್ದರು.

ಸಭೆಯ ಕೊನೆಯಲ್ಲಿ ಉ7 ಮಂತ್ರಿಗಳು ಭವಿಷ್ಯದಲ್ಲಿ ಕಾರ್ಬನ್ ಉಗುಳದ ‘ಹಸಿರು’ ಮೂಲಗಳಿಂದ ವಿದ್ಯುತ್ ತಯಾರಿಸುವ ವಿಧಾನಗಳನ್ನು ಹೆಚ್ಚೆಚ್ಚು ನೆಚ್ಚಿಕೊಳ್ಳುವುದು ಎಂಬ ತೀರ್ಮಾನಕ್ಕೆ ಬಂದರಾದರೂ ಸಧ್ಯದ ಕಲ್ಲಿದ್ದಿಲಿನ ಮೇಲಿನ ಅವಲಂಬನೆಯನ್ನು ಒಮ್ಮೆಲೆ ನಿಲುಗಡೆಗೆ ತರಲು ಸಾಧ್ಯವಿಲ್ಲವೆಂದು ಹಂತಹಂತವಾಗಿ ತರಲು ಸಮಯಾವಕಾಶ ಬೇಕೆಂಬ ನಿಲುವಿಗೆ ಅಂಟಿಕೊಂಡರು. ನಮ್ಮ ಪ್ರತಿನಿಧಿ ಭೂಪೇಂದರ್ ಯಾದವ್ ಭಾರತದ ನಿಲುವನ್ನು ಹೇಳಲೇ ಬೇಕಿದ್ದುದರಿಂದ ‘ಕಾರ್ಬನ್ ಕಡಿತಕ್ಕೆ ಸಿರಿವಂತ, ಮುಂದುವರಿದ ದೇಶಗಳು ಈ ಕೂಡಲೆ ಗುರುತರವಾದ ಕ್ರಮಗಳನ್ನು ಮೊದಲು ಕೈಗೊಳ್ಳಬೇಕು, ಆಮೇಲೆ ನಮ್ಮಂತ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಹೆಚ್ಚಿನ ಸುಧಾರಿತ ಅವಕಾಶಗಳೊಂದಿಗೆ ಆ ಕ್ರಮಗಳನ್ನು ಅನುಸರಿಸುವುದು ಸಲೀಸಾಗುತ್ತದೆ’ ಎಂದರು. ಬಡ ಮತ್ತು ಮುಂದುವರಿಯುತ್ತಿರುವ ದೇಶಗಳೆಲ್ಲ ಹೆಚ್ಚಾಗಿ ಭಾರತದ ದನಿಯಲ್ಲೆ ಮಾತನಾಡುತ್ತವೆ. ವಾತಾವರಣಕ್ಕೆ ಲಾಗಾಯ್ತಿನಿಂದ ಕಾರ್ಬನ್ ಅನ್ನು ಹೇರಳ ಉಗುಳಿ ಉಗುಳಿ ಜಗತ್ತಿಗೆಲ್ಲ ಹವಾಮಾನದ ಅನಾಹುತಗಳನ್ನು ತಂದಿಟ್ಟ ಸಿರಿವಂತ ದೇಶಗಳು ತಮ್ಮ ಪಾಲಿನ ಜವಾಬುದಾರಿಯನ್ನು ತುರ್ತಾಗಿ ನಿಭಾಯಿಸದೆ ಉಳಿದವರಿಗೆಲ್ಲ ಕಾರ್ಬನ್ ಕಡಿತಕ್ಕೆ ‘ಹಾಗೆ ಮಾಡಿ ಹೀಗೆ ಮಾಡಿ’ ಎಂದು ಸೂಚಿಸುವುದು ಸೊಕ್ಕಿನ ಹೆಡ್ಡತನವಲ್ಲದೆ ಇನ್ನೇನು?

ನಾನೀಗ ತಲೆಬರಹದಲ್ಲಿ ಹೇಳಿರುವ ವಿಷಯಕ್ಕೆ ಬರುತ್ತೇನೆ. ಈವರೆಗೆ ನೀವು ಓದಿದ್ದು  ಅಗತ್ಯವಿದ್ದ ಒಂದು ಮುನ್ನುಡಿಯನ್ನು. ಅಂದ ಹಾಗೆ ಊಟದ ಮೇಜಿ(ಡಿನ್ನರ್ ಟೇಬಲ್)ಗೆ ತಂದಿಡುವ ತಿನಿಸುಗಳೆಲ್ಲ ಅಡುಗೆ ಮನೆಯಲ್ಲಿ ತಯಾರಾಗುತ್ತವೆ ತಾನೇ. ಊಟದ ಮೇಜಿನ ಮೇಲೆಯೆ ಅಡುಗೆ ತಯಾರಿಸಿ ಯಾರೂ ಉಣ್ಣುವುದಿಲ್ಲವಲ್ಲ. ಹಾಗೆಯೆ ನಾನಷ್ಟು ಪೂರಕ ಮಾಹಿತಿಗಳ ಮುನ್ನುಡಿಯ ಅಡುಗೆಯೊಂದಿಗೆ ನಿಮ್ಮ ಓದನ್ನು ಮುಖ್ಯ ವಿಷಯದ ಊಟದ ಟೇಬಲಿಗೆ ಒಯ್ಯಬೇಕಾಯಿತು.

ಜನಚಳವಳಿಗಳೇ ಹುಟ್ಟಬೇಕು

ಸಪೋರೊ ಸಭೆಗೆ ನಾವು ಪ್ರತಿನಿಧಿಯನ್ನು ಕಳುಹಿಸಿದ್ದೇವಲ್ಲವೆ. ಆ ಪ್ರತಿನಿಧಿ ಅಲ್ಲಿ ಭಾರತದ ನಿಲುವನ್ನು ತಮ್ಮ ಮಾತುಗಳಲ್ಲಿ ಪ್ರಕಟಪಡಿಸಿದರು. ಇತ್ತ ನಮ್ಮ ಒಕ್ಕೂಟ ಸರ್ಕಾರದ ಪ್ರಧಾನಮಂತ್ರಿಗಳಾದ ಮಾನ್ಯ ನರೇಂದ್ರ ದಾಮೋದರ ಮೋದಿ(ನ.ದಾ.ಮೋ.)ಯವರು ಏಪ್ರಿಲ್ 15ರಂದು ಒಂದು ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದರು. ಈ ಸಭೆಯನ್ನು ವಿಶ್ವಬ್ಯಾಂಕ್ ‘ವೈಯುಕ್ತಿಕ ವರ್ತನೆಯನ್ನು ಬದಲಿಸಿಕೊಂಡು ಹವಾಮಾನ ಬದಲಾವಣೆಯನ್ನು ಸಂಬಾಳಿಸುವ ಬಗೆ ಹೇಗೆ’ (Making it Personal: How Behavioural Change Can Tackle Climate Change) ಎಂಬ ವಿಷಯದಡಿ ಹಮ್ಮಿಕೊಂಡಿತ್ತು. ಯಾವುದೇ ಜಾಗತಿಕ ವೇದಿಕೆಗಳಲ್ಲಿ ಮಾತನಾಡುವ ಅವಕಾಶ ಸಿಕ್ಕರೆ ‘ಹೌದಲ್ಲಾ, ಹೀಗೂ ಸರಿಯೇ’ ಎಂದು ಅಚ್ಚರಿ ಮೂಡಿಸುವಂತೆ ನ.ದಾ.ಮೋದಿಯವರು ಮಾತನಾಡಬಲ್ಲರು. ಈಗಲೂ ಹಾಗೆಯೆ ಮಾತನಾಡಿದರು. ‘ಹವಾಮಾನ ಬದಲಾವಣೆಯನ್ನು ಸಂಬಾಳಿಸಲು ಜನ ಚಳವಳಿಯೇ ಆಗಬೇಕು’ ಎಂದರು. ಮುಂದುವರೆದು ‘ಬರಿಯ ಕಾನ್ಫರೆನ್ಸ್ ಟೇಬಲ್‍ನಲ್ಲಿ ಹವಾಮಾನ ಬದಲಾವಣೆಯನ್ನು ಚರ್ಚಿಸಿದರಷ್ಟೆ ಉಪಯೋಗವಿಲ್ಲ, ನಮ್ಮ ಡಿನ್ನರ್ ಟೇಬಲಿನ ಮಾತುಕತೆಗಳಲ್ಲೂ ಹವಾಮಾನ ಬದಲಾವಣೆಯನ್ನು ಸಂಬಾಳಿಸಲು ಮಾಡುವುದೇನು ಎಂಬ ಬಗ್ಗೆ ಚರ್ಚೆ ಶುರುವಾದರೆ ಜನ ಚಳವಳಿಗಳು ಹುಟ್ಟುತ್ತವೆ’ ಎಂದರು. ಅದ್ಭುತವಾದ ಹೋಲಿಕೆ ಎನ್ನಿ. ದೇಶದೇಶಗಳ ನಾಯಕರು ಜಾಗತಿಕ ಮಟ್ಟದ ‘ಸಮ್ಮೇಳನದ ಮೇಜಿ’(ಕಾನ್ಫರೆನ್ಸ್ ಟೇಬಲ್)ನಲ್ಲಿ ಹವಾಮಾನ ಬದಲಾವಣೆಯನ್ನು ಚರ್ಚಿಸುವುದರ ಜೊತೆಜೊತೆಗೆ ಜಗತ್ತಿನ ಜನಸಾಮಾನ್ಯರು ತಮ್ಮ ನಿತ್ಯದ ‘ಊಟದ ಮೇಜಿ’(ಡಿನ್ನರ್ ಟೇಬಲ್)ನಲ್ಲಿ ಚರ್ಚಿಸಬೇಕೆಂಬ ನ.ದಾ.ಮೋದಿಯವರ ಕನಸನ್ನು ನಾನು ಮೆಚ್ಚುತ್ತೇನೆ. ಆದರೆ ಭಾರತವೂ ಸೇರಿದಂತೆ ಜಗತ್ತಿನ ಬಹುಮಂದಿ ಊಟದ ಮೇಜನ್ನು ಹೊಂದುವುದಿರಲಿ, ಎರಡು ಹೊತ್ತಿನ ಊಟವನ್ನು ಹೊಂದಿಸಿಕೊಳ್ಳುವ ಅವಕಾಶ ಪಡೆದಿಲ್ಲ ಎಂದು ಅವರಿಗೆ ನೆನಪಿಸಲೂ ಬಯಸುತ್ತೇನೆ. ಇರಲಿ, ಸಧ್ಯಕ್ಕೆ ಆ ವಿಚಾರದ ಆಳಕ್ಕೆ ಜಿಗಿಯುವುದು ಬೇಡ.

ನಿಜ, ಪ್ರತಿಯೊಂದು ದೇಶದ ಪ್ರತಿಯೊಂದು ಸಮಾಜದ ಪ್ರತಿ ವ್ಯಕ್ತಿಯು ತನ್ನ ನಿತ್ಯಬದುಕಿನಲ್ಲಿ ಹವಾಮಾನ ಬದಲಾವಣೆಗಳು ಉಲ್ಬಣಗೊಳ್ಳದಂತೆ ಕಾರ್ಬನ್ ಉಗುಳದಿರುವ ಅಥವಾ ಅತಿ ಕಡಿಮೆ ಉಗುಳುವಂತಹ ಚಟುವಟಿಕೆಯನ್ನು ಹೇಗೆ ಹಮ್ಮಿಕೊಳ್ಳಬೇಕು ಎಂದು ಆಲೋಚಿಸುವಂತಾದರೆ ಅದಕ್ಕಿಂತ ಸೋಜಿಗದ ಬದಲಾವಣೆ ಇನ್ನೊಂದಿರಲಾರದು. ಪಳೆಯುಳಿಕೆ ಇಂಧನ ಬಳಸುವ ನಮ್ಮ ನಿತ್ಯ ಬಳಕೆಯ ವಾಹನಗಳು ಕಾರ್ಬನ್ ಉಗುಳುತ್ತವೆ ಎಂದು ನಮಗೆ ತಿಳಿದಿರಬೇಕು. ಅವುಗಳ ಅತಿ ಅಗತ್ಯದ ಬಳಕೆಗಷ್ಟೆ ನಮ್ಮ ಓಡಾಟವನ್ನು ಮಿತಿಗೊಳಿಸಿಕೊಳ್ಳಬೇಕು. ಇಲ್ಲವೆ ಬ್ಯಾಟರಿ ಚಾಲಿತ ವಾಹನಗಳನ್ನು ಪರ್ಯಾಯವಾಗಿ ಬಳಸಬೇಕು. ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳು ಗಾಳಿಗೆ ವಿಪರೀತ ಕಾರ್ಬನ್ ಉಗುಳುವ ಕಲ್ಲಿದ್ದಿಲ್ಲನ್ನು ಉರಿಸಿ ವಿದ್ಯುತ್ ತಯಾರಿಸುತ್ತವೆ. ನಾವು ವಿದ್ಯುತ್ತನ್ನು ಪೋಲು ಮಾಡಿದರೆ ಅತ್ತ ಶಕ್ತಿಸ್ಥಾವರಗಳು ಹೆಚ್ಚುವರಿ ಕಲ್ಲಿದ್ದಿಲನ್ನು ಉರಿಸಬೇಕಾಗುತ್ತದೆ. ಹೆಚ್ಚುವರಿ ಕಾರ್ಬನ್ ಗಾಳಿಪಾಲಾಗುತ್ತದೆ.

(ಮುಂದುವರಿಯುವುದು..)‌

ರವಿಕುಮಾರ್‌ ಕೆ ಎಸ್‌

ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

ಇದನ್ನೂ ಓದಿ-ಅಮೆರಿಕಾ ಎಂಬ ಬಲೂನಿಗೆ ಹವಾಮಾನದ ಮಿಸೈಲುಗಳು| ಮುಂದಿನ ಸರದಿ ಯಾರದ್ದೋ?

You cannot copy content of this page

Exit mobile version