Sunday, June 23, 2024

ಸತ್ಯ | ನ್ಯಾಯ |ಧರ್ಮ

ಹವಾಮಾನ ವೈಪರೀತ್ಯ ಸಂಬಂಧಿತ ವ್ಯಾಜ್ಯಗಳು, ಕಟಕಟೆಯಲ್ಲಿ ಸರ್ಕಾರಗಳು

ಫಿನ್ಲೆಂಡ್ ಸೇರಿದಂತೆ ಉತ್ತರ ಯೂರೋಪಿನ ದೇಶಗಳ ನಾಗರೀಕರು ತಮ್ಮ ಎರಡು ತಿಂಗಳ ಬೇಸಿಗೆಯನ್ನು, 30 ದಿನಗಳ ರಜೆಯನ್ನು ಅತ್ಯಮೂಲ್ಯವೆಂದು ಪರಿಗಣಿಸುತ್ತಾರೆ. ಸರ್ಕಾರೀ ಕಛೇರಿ ಸಿಬ್ಬಂದಿಯೂ ರಜೆಯಲ್ಲಿರುತ್ತಾರೆಯಾದ್ದರಿಂದ ಈ ಅವಧಿಯಲ್ಲಿ ಸರ್ಕಾರವೇ ಸ್ತಬ್ಧವಾಗಿದೆಯೇನೋ ಅನಿಸುತ್ತದೆ. ಸದ್ಯ ಫಿನ್ಲೆಂಡ್ನ ಹೊಸ ಪ್ರಧಾನಿ ಕೂಡ ಬೇಸಿಗೆ ರಜೆಯ ಸುಖ ಅನುಭವಿಸುತ್ತಿದ್ದಾರೆ ಹಾಗೂ ಮೂವರು ಮಂತ್ರಿಗಳು ಸರದಿಯಲ್ಲಿ ಈ ಅವಧಿಗೆ ಹಂಗಾಮಿ ಪ್ರಧಾನಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೇಸಿಗೆಯ ಪ್ರವಾಸ ಭತ್ಯೆಯ ಕೊಡಬೇಕೆಂಬ ಕಾನೂನು ಫಿನ್ಲೆಂಡ್ ನಲ್ಲಿಯಂತೂ ಇದೆ, – ಇತರೆ ಯೂರೋಪಿನ ದೇಶಗಳಲ್ಲೂ ಇರಬಹುದು – ಆದ್ದರಿಂದ ಹತ್ತಿರದ ದಕ್ಷಿಣ ಯೂರೋಪಿನ ದೇಶಗಳು ಈ ಅವಧಿಯಲ್ಲಿ ಪ್ರವಾಸಿಗಳಿಂದ ತುಂಬಿ ತುಳುಕುತ್ತವೆ. 

ಬೇಸಿಗೆಯಲ್ಲಿ ಹೆಚ್ಚುವ ವಾಹನ/ವಿಮಾನ ಪ್ರಯಾಣಗಳೂ ಸಹ ಹವಾಮಾನ ವೈಪರೀತ್ಯಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತವೆಯಾದರೂ ಉತ್ತರ ಯೂರೋಪ್ ನ ಕಡು ಚಳಿಗಾಲದ ಅನುಭವವಾಗಿರುವುದರಿಂದ ಕ್ಷಣಿಕ ಬೇಸಿಗೆಯ ಆನಂದ ಅನುಭವಿಸಲು ಇತರೆ ದೇಶಗಳಿಗೆ ಸೈಕಲ್/ಕಾಲ್ನಡಿಗೆ/ವ್ಯಾನು/ವಿಮಾನ ಪ್ರಯಾಣ ಮಾಡುವ ಉತ್ತರ ಯರೋಪ್ ದೇಶವಾಸಿಗಳ ಈ ನಡೆಯನ್ನು ಖಂಡಿಸುವುದೇ ಬೇಡವೇ ಎಂದು ನಾನೂ ಗೊಂದಲಕ್ಕೆ ಬಿದ್ದಿದ್ದೇನೆ.

ಗ್ರೀಸ್ ಕಾಡ್ಗಿಚ್ಚಿನಿಂದ ರಕ್ಷಿಸಲ್ಪಟ್ಟು ಸ್ಟೇಡಿಯಂಗಳಲ್ಲಿ ಆಶ್ರಯ ಪಡೆದಿರುವ ಪ್ರವಾಸಿಗಳು

ಆದರೆ ಹವಾಮಾನ ವೈಪರೀತ್ಯದಿಂದಾಗಿ ಯೂರೋಪ್ ಅದರಲ್ಲೂ ದಕ್ಷಿಣ ಯೂರೋಪಿನ ಹಲವು ದೇಶಗಳು ಇತ್ತೀಚಿನ ವರ್ಷಗಳ ಬೇಸಿಗೆಯಲ್ಲಿ ಉರಿಯುವ ಒಲೆಗಳಂತಾಗುತ್ತಿವೆ. ಈ ವರ್ಷ ಗ್ರೀಸ್ ನ ಪ್ರಸಿದ್ಧ ಪ್ರವಾಸಿ ತಾಣ ಅಥೆನ್ಸ್ ಕಳೆದ 50 ವರ್ಷಗಳಲ್ಲಿ ಅತೀ ಹೆಚ್ಚು ತಾಪಮಾನವನ್ನು ದಾಖಲಿಸಿತು. ಕ್ರಿ .ಪೂ 5ನೇ ಶತಮಾನದ ಐತಿಹಾಸಿಕ ಸ್ಮಾರಕ ಆಕ್ರೊಪೊಲಿಸ್ ಹಾಗೂ ಇನ್ನಿತರ ಪುರಾತತ್ವ ಸ್ಥಳಗಳನ್ನು ಕುದಿ ಬೇಸಿಗೆಯ ಕಾರಣದಿಂದಾಗಿ ಮುಚ್ಚಬೇಕಾಯಿತು. ಅಥೆನ್ಸ್ ಸಮೀಪದ ರಹೋಡ್ಸ್ ದ್ವೀಪದಲ್ಲಿ ಸಂಭವಿಸಿದ ಮಹಾ ಕಾಡ್ಗಿಚ್ಚಿನ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ. 700ಕ್ಕೂ ಹೆಚ್ಚು ಫಿನ್ಲೆಂಡಿಗರು ಸೇರಿದಂತೆ ಹಲವು ಯೂರೋಪಿನ ಪ್ರವಾಸಿಗಳು ಕಾಡ್ಗಿಚ್ಚಿಗೆ ಸಿಲುಕದಂತೆ ರಕ್ಷಿಸಿ ಅವರನ್ನು ವಾಪಸು ಕಳಿಸಿದ ಗ್ರೀಸ್ ಜನತೆ ಹಾಗೂ ಸರ್ಕಾರದ ಪ್ರಯತ್ನಕ್ಕೆ ಆಯಾ ದೇಶಗಳು ಅಭಿನಂದನೆ ಸಲ್ಲಿಸಿವೆ, ಕಾಡ್ಗಿಚ್ಚು ನಂದಿಸಲು ತಮ್ಮ ಸಿಬ್ಬಂದಿಗಳನ್ನೂ ಕಳುಹಿಸಿವೆ.ಸುಮಾರು 30000 ಜನರನ್ನು ಸ್ಥಳಾಂತರಿಸಬೇಕಾದ ಪರಿಸ್ಥಿತಿ ನಿರ್ಮಿಸಿದ, ಗ್ರೀಸ್ ನ ಇತಿಹಾಸದಲ್ಲೇ ಅತಿ ಗಂಭೀರ ಕಾಡ್ಗಿಚ್ಚು ಇದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಹವಾಮಾನ ವೈಪರೀತ್ಯಗಳ ‘ಹಾಟ್ ಸ್ಪಾಟ್’ ಎಂದೇ ಕರೆಯಲಾಗುವ ಮೆಡಿಟರೇನಿಯನ್ ಸಮುದ್ರ ತೀರದ ಈ ದಕ್ಷಿಣ ಯೂರೋಪಿನ ದೇಶಗಳಲ್ಲಿ ಈಗ ಮಕ್ಕಳನ್ನು ,ವೃದ್ಧರನ್ನು ಬೇಸಿಗೆಯಿಂದ ರಕ್ಷಿಸುವುದೇ ಮನೆಯ ಇತರೆ ಸದಸ್ಯರಿಗೆ ಅತೀ ಕಷ್ಟದ ಕೆಲಸ. ಮೇ -ಜೂನ್ ಅವಧಿಯಲ್ಲಿ ಕೆನಡಾದಲ್ಲಿಯೂ ಇದೇ ರೀತಿಯ ಕಾಡ್ಗಿಚ್ಚು ಹಬ್ಬಿ (ಅಮೆರಿಕದ ) ನ್ಯೂಯಾರ್ಕ್ ರಾಜ್ಯದಲ್ಲಿ ಧೂಳಿನ ಕಪ್ಪು ಮೋಡ ಆವರಿಸಿ ಉಸಿರಾಟ ಸಂಬಂಧಿ ಸಮಸ್ಯೆಗಳು ವರದಿಯಾಗಿದ್ದವು. ಮಾರ್ಚ್ನಲ್ಲಿ ಕೇರಳದ ಕೊಚ್ಚಿಯ ಅತೀ ದೊಡ್ಡ ಕಸದ ಬೆಟ್ಟಕ್ಕೆ ಹೊತ್ತಿದ ಬೆಂಕಿಯು, ಹಲವು ದಿನಗಳವರೆಗೆ ನಗರ ವಾಸಿಗಳನ್ನು ಗೃಹ ಬಂಧನದಲ್ಲಿರುವಂತೆ ಮಾಡಿ ಇಂತಹ ತಾಪಮಾನ ಹೆಚ್ಚಳ ಸಂಭಂದಿತ ಆಕಸ್ಮಿಕಗಳನ್ನು ನಿರ್ವಹಿಸಲು ಸರ್ಕಾರಗಳ ಸಿದ್ಧತೆಯಲ್ಲಿನ ಕೊರತೆಯನ್ನು ಜನರಿಗೆ ಬಯಲು ಮಾಡಿತು.

ಪ್ರತಿಭಟನಾ ನಿರತ ಸ್ವಿಟ್ಸರ್ಲೆಂಡ್ ನ ಹಿರಿಯ ಮಹಿಳೆಯರ ಗುಂಪು

ಹವಾಮಾನ ವೈಪರೀತ್ಯದ ಕುರಿತ ನ್ಯಾಯಾಲಯ ಪ್ರಕರಣಗಳ ಸಂಖ್ಯೆಯನ್ನು 2017 ರಲ್ಲಿ ಕಲೆಹಾಕಲು ಆರಂಭಿಸಿದಾಗ 884 ವ್ಯಾಜ್ಯಗಳ ಕುರಿತ ವರದಿ ಸಲ್ಲಿಸಲಾಗಿತ್ತು .ಆದರೆ 5 ವರ್ಷಗಳಲ್ಲಿ ಈ ಮೊಕದ್ದಮೆಗಳ ಸಂಖ್ಯೆಯು ದ್ವಿಗುಣಗೊಂಡು -ಇಂದು 2180 ಮೊಕದ್ದಮೆಗಳು – ಹೆಚ್ಚಳವಾಗುತ್ತಿವೆ ಎಂದು ಯುಎನ್ ಎನ್ವಿರಾನ್‌ಮೆಂಟ್ ಪ್ರೋಗ್ರಾಂ (ಯುಎನ್‌ಇಪಿ) ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಬಿನ್ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ಆಂಡ್ ಲಾ ಕಳೆದ ವಾರ ಪ್ರಕಟಿಸಿದ ವರದಿಯು ಹೇಳುತ್ತಿದೆ. ವಿಶ್ವದ ಹಲವು ಸರ್ಕಾರ ಅಥವಾ ಪಳೆಯುಳಿಕೆ ಇಂಧನೋದ್ಯಮಗಳ ವಿರುದ್ಧ ಈ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು – ಅಮೆರಿಕದಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಾಗಿಸಲಾಗಿದೆ – ಸುಮಾರು 17 ಪ್ರತಿಶತ ಪ್ರಕರಣಗಳು ಈಗ ಸಣ್ಣ ದ್ವೀಪಗಳನ್ನೊಳಗೊಂಡಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವರದಿಯಾಗುತ್ತಿವೆ.ಪಾಕಿಸ್ತಾನ ಮತ್ತು ಭಾರತದಲ್ಲಿ ಕ್ರಮವಾಗಿ ಏಳು ಮತ್ತು ಒಂಬತ್ತು ವರ್ಷ ವಯಸ್ಸಿನ(ರಿದ್ಧಿಮಾ ಪಾಂಡೆ Vs ಭಾರತ ಸರ್ಕಾರ) ಹುಡುಗಿಯರು ಸೇರಿದಂತೆ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಯುವಜನರೇ 34 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಸ್ವಿಟ್ಜರ್ಲೆಂಡ್‌ ನ ಸರ್ಕಾರದ ಹವಾಮಾನ ಬದಲಾವಣೆಯ ಕುರಿತ ನೀತಿಯು ತಮ್ಮ ಜೀವನ ಮತ್ತು ಆರೋಗ್ಯದ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂದು 2,000 ಕ್ಕೂ ಹೆಚ್ಚು ಹಿರಿಯ ಮಹಿಳೆಯರು(Club of Climate Seniors ) ತಮ್ಮ ದೇಶದ ಸರ್ಕಾರದ ವಿರುದ್ಧ ಯುರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ (ECHR) ನಲ್ಲಿ ದಾವೆ ಹೂಡಿದ್ದಾರೆ. ಇದು ಮಾನವ ಹಕ್ಕುಗಳ ಮೇಲೆ ಹವಾಮಾನ ಬದಲಾವಣೆಯ ಪ್ರಭಾವದ ಕುರಿತ ಮೊತ್ತ ಮೊದಲ ಪ್ರಕರಣವಾಗಿದ್ದು ಈ ಮಹಿಳೆಯರು ಸಾಕ್ಷಿಯಾಗಿ ತಮ್ಮ ವೈದ್ಯಕೀಯ ದಾಖಲೆಗಳನ್ನು ಮುಂದಿಟ್ಟಿದ್ದಾರೆ . 

ಯುರೋಪಿಯನ್ ಹವಾಮಾನ ಮತ್ತು ಆರೋಗ್ಯ ವೀಕ್ಷಣಾಲಯದ ಅಧ್ಯಯನವು ಸರಾಸರಿ ತಾಪಮಾನದಲ್ಲಿನ ಹೆಚ್ಚಳವು ಯುರೋಪಿನಾದ್ಯಂತ, “ಸಾರ್ವಜನಿಕರ -ವಿಶೇಷವಾಗಿ ಹಿರಿಯ ನಾಗರಿಕರ – ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ” ಎಂದಿದೆ. ಕಳೆದ 20 ವರ್ಷಗಳಲ್ಲಿ, ಯುರೋಪ್‌ನಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಉಷ್ಣ ಅಲೆಗಳ (Heat wave )ಸಂಬಂಧಿತ ಮರಣ ಪ್ರಮಾಣವು 30% ಕ್ಕಿಂತ ಹೆಚ್ಚಾಗಿದೆ ಎಂದು ಅದು ಹೇಳುತ್ತದೆ.

ಮೊಂಟಾನಾ ಸರ್ಕಾರದ ವಿರುದ್ಧ ಉತ್ತಮ ಪರಿಸರ ಹಕ್ಕಿಗಾಗಿ ದಾವೆ ಹೂಡಿರುವ ಮಕ್ಕಳ ಗುಂಪು

ಅಮೇರಿಕಾದ ಸಾಂವಿಧಾನಿಕ ಹವಾಮಾನ ಮೊಕದ್ದಮೆಯೊಂದರ ಮೊಟ್ಟಮೊದಲ ವಿಚಾರಣೆಯು ಈ ವರ್ಷದ ಜೂನ್ ನಲ್ಲಿ ಮೊಂಟಾನಾ ರಾಜ್ಯದ ಹೆಲೆನಾ ನ್ಯಾಯಾಲಯದಲ್ಲಿ ಪ್ರಾರಂಭವಾಯಿತು . ಹೆಲ್ಡ್ Vs ಮೊಂಟಾನಾ ಸರ್ಕಾರ ಎಂಬ ಈ ಮೊಕದ್ದಮೆಯನ್ನು 2020 ರಲ್ಲಿ ರಾಜ್ಯದಾದ್ಯಂತ ಐದು ಮತ್ತು 22 ವರ್ಷದೊಳಗಿನ 16 ಮಕ್ಕಳು ಫಿರ್ಯಾದುದಾರರಾಗಿ ತಮ್ಮ ರಾಜ್ಯ ಸರ್ಕಾರವು ಪಳೆಯುಳಿಕೆ ಇಂಧನ ಪರ ನೀತಿಗಳನ್ನು ಜಾರಿಗೊಳಿಸುವ ಮೂಲಕ ಆರೋಗ್ಯಕರ ಪರಿಸರಕ್ಕೆ ತಮಗಿರುವ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ .

ಹವಾಮಾನ ಬದಲಾವಣೆಯ ಕುರಿತಾದ ಇಂಟರ್‌ಗವರ್ನಮೆಂಟಲ್ ಪ್ಯಾನಲ್‌ನ ಸದಸ್ಯರಾಗಿ ಸಲ್ಲಿಸಿದ ಸೇವೆಗಾಗಿ, 2007 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ – ಮೊಂಟಾನಾ ವಿಶ್ವವಿದ್ಯಾನಿಲಯದಲ್ಲಿ ಪರಿಸರ ವ್ಯವಸ್ಥೆ ಮತ್ತು ಸಂರಕ್ಷಣಾ ವಿಜ್ಞಾನದ ಪ್ರಾಧ್ಯಾಪಕ – ಸ್ಟೀವನ್ ರನ್ನಿಂಗ್ ಈ ಮಕ್ಕಳ ಬೆಂಬಲಕ್ಕೆ ನಿಂತು ವಿಚಾರಣೆಯ ಪ್ರಗತಿಯನ್ನು ಗಮನಿಸುತ್ತಿದ್ದಾರೆ.

ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ರೈತ ಹೋರಾಟವನ್ನು ಸಮರ್ಥಿಸಿಕೊಂಡ ಟ್ವೀಟ್ ಸಲುವಾಗಿ ಬಂಧನಕ್ಕೊಳಗಾಗುವ ವರ್ಷದ ಮುಂಚೆಯೇ ತಾವು ನಡೆಸಿದ ಈಮೇಲ್ ಅಭಿಯಾನವೊಂದರ ಕಾರಣದಿಂದಾಗಿ, ಕೇಂದ್ರ ಪರಿಸರ ಸಚಿವಾಲಯದ ಕೆಂಗಣ್ಣಿಗೆ ತಾವು ಗುರಿಯಾಗಿದ್ದನ್ನು ನೆನಪಿಸಿಕೊಂಡರು. ‘ಪರಿಸರವಾದವನ್ನು ಭಾರತದಲ್ಲಿ ಅಪರಾಧೀಕರಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಅವರು ಅಭಿಪ್ರಾಯಪಟ್ಟರೂ ಇದು ಭಾರತಕ್ಕಷ್ಟೇ ಸೀಮಿತವಾದುದೇನಲ್ಲ. 

ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ

 ಭಾರತದಲ್ಲಿ ಹವಾಮಾನ ವೈಪರೀತ್ಯ ಹಾಗೂ ಸಂಬಂಧಿಸಿದ ಮೊಕದ್ದಮೆ – ವಿಚಾರಣೆಗಳ ಕಡೆ ಜನರ – ಮಾಧ್ಯಮಗಳ ಗಮನ ಹರಿಯುವುದು ಕಡಿಮೆಯೇ,ಇನ್ನು ಸಾಕ್ಷರತೆಯಲ್ಲಿ ನಮ್ಮ ಸಾಧನೆಯ ಹೊರತಾಗಿಯೂ ಪರಿಸರವಾದಿ ಹೋರಾಟಗಳಿಗೆ ಬೆಂಬಲ ಸದ್ಯದ ಪರಿಸ್ಥಿತಿಯಲ್ಲಿ ನಿರೀಕ್ಷಿಸಲೂ ಅಸಾಧ್ಯ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.ಗ್ರೀಸ್ ನ ಕಾಡ್ಗಿಚ್ಚಿನಲ್ಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಯಿತು,ಆ ಪ್ರದೇಶವು ಪ್ರವಾಸೀ ತಾಣವಾಗಿದ್ದರೂ ಹಾಗೂ ಕಾಡ್ಗಿಚ್ಚಿನ ಸಂಧರ್ಭದಲ್ಲಿ ಪ್ರವಾಸಿಗಳಿಂದ ತುಂಬಿ ತುಳುಕುತ್ತಿದ್ದರೂ ಹೆಚ್ಚಿನ ಪ್ರಾಣ ಹಾನಿ ಸಂಭವಿಸಲಿಲ್ಲ. ಆದರೆ ಎರಡು ದಿನಗಳ ಪಂಜಾಬ್ ಪ್ರವಾಹದಲ್ಲಿ 40ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೇಘಸ್ಪೋಟ ,ಪ್ರವಾಹ ,ಬರ ,ಕಾಡ್ಗಿಚ್ಚು ನಮ್ಮಲ್ಲಿ ‘ಹಣೆಬರಹ’ ಎಂಬುದಕ್ಕಿಂತ ವಿಭಿನ್ನವಾದ ಪ್ರತಿಕ್ರಿಯೆ -ಸಂಘಟಿತ ಆಕ್ರೋಶವನ್ನೇನೂ ಸೃಷ್ಟಿಸುವುದಿಲ್ಲ. 

ಪರಿಸರ ಕಾಳಜಿ ಭಾರತದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಮುಖ್ಯವಾಗಿ ಕಾಣುವ ವಿಷಯವೇನಲ್ಲ. ಹವಾಮಾನ ಬದಲಾವಣೆ ಸೃಷ್ಠಿಸಲಿರುವ ಅರೋಗ್ಯ ಹಾಗೂ ಆಹಾರ ಪೂರೈಕೆ -ಹಂಚಿಕೆಯ ಸಮಸ್ಯೆಯು, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸೋಲು – ಗೆಲುವನ್ನು ನಿರ್ಧರಿಸುವಷ್ಟು ನಿರ್ಣಾಯಕವಾಗುವುವವರೆಗೂ ಹವಾಮಾನ ವೈಪರೀತ್ಯದ ಕುರಿತ ಮಕ್ಕಳ ಪ್ರಶ್ನೆಗಳು ಹಾಗೂ ಪರಿಸರ ರಕ್ಷಣೆಯ ಕುರಿತಾದ ನಿಯಮಗಳನ್ನು ಉಲ್ಲಂಘನೆ ಮಾಡುವ ಉದ್ಯಮಗಳು /ಸರ್ಕಾರ ವಿರುದ್ಧದ ಮೊಕದ್ದಮೆ ,ಹೋರಾಟಗಳನ್ನು ‘ಟೂಲ್ ಕಿಟ್, ವಿದೇಶೀ ಕೈವಾಡ‘ ಎಂದು ತಳ್ಳಿ ಹಾಕಿ ಭಾರತೀಯರು ಹಾಗೂ ಸರ್ಕಾರಗಳು ಹುಸಿ ಸಮಾಧಾನದಲ್ಲಿ ಜೀವನ ಮುಂದುವರೆಸಲಿದ್ದಾರೆ.

- ರಂಜಿತಾ ಜಿ. ಎಚ್.

Related Articles

ಇತ್ತೀಚಿನ ಸುದ್ದಿಗಳು